ನಿರೂಪಕಿ ಅನುಶ್ರೀ ಮದುವೆ: ಎಷ್ಟು ಸಿಂಪಲ್ ಆಗಿದೆ ನೋಡಿ ಆಹ್ವಾನ ಪತ್ರಿಕೆ
ಜನಪ್ರಿಯ ನಿರೂಪಕಿ ಅನುಶ್ರೀ ಅವರು ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಇರುವ ರೆಸಾರ್ಟ್ನಲ್ಲಿ ಅನುಶ್ರೀ ಅವರ ಮದುವೆ ನಡೆಯಲಿದೆ. ತುಂಬಾ ಸರಳವಾಗಿರುವ ಅವರ ವಿವಾಹ ಆಮಂತ್ರಣ ಪತ್ರಿಕೆಯ ಫೋಟೋ ಲಭ್ಯವಾಗಿದೆ. ಅನೇಕ ಸೆಲೆಬ್ರಿಟಿಗಳು ಅನುಶ್ರೀ ಮದುವೆಗೆ ಸಾಕ್ಷಿಯಾಗಲಿದ್ದಾರೆ.

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಹೊರಬಿದ್ದಿತ್ತು. ಕೊಡಗು ಮೂಲದ ರೋಷನ್ ಜೊತೆ ಆ್ಯಂಕರ್ ಅನುಶ್ರೀ ಅವರು ಹಸೆಮಣೆ ಏರಲಿದ್ದಾರೆ. ಮದುವೆಗೆ ದಿನಾಂಕ ಕೂಡ ನಿಗದಿ ಆಗಿದೆ. ಆಗಸ್ಟ್ 28ರಂದು ಅನುಶ್ರೀ ಮತ್ತು ರೋಷನ್ ಅವರ ಮದುವೆ ನಡೆಯಲಿದೆ. ಈಗಾಗಲೇ ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಅನುಶ್ರೀ ಮದುವೆಯ ಆಹ್ವಾನ ಪತ್ರಿಕೆ ತುಂಬಾ ಸರಳವಾಗಿದೆ.
‘ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಆಹ್ವಾನ ಪತ್ರಿಕೆಯಲ್ಲಿ ಬರೆಯಲಾಗಿದೆ. ಆ.28ಕ್ಕೆ ರೋಷನ್ ಜೊತೆ ನಿರೂಪಕಿ ಅನುಶ್ರೀ ಸಪ್ತಪದಿ ತುಳಿಯಲಿದ್ದಾರೆ. ಅಂದು ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ಆಗಲಿದೆ. ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ಮದುವೆ ನಡೆಯಲಿದೆ.
ಬಣ್ಣದ ಲೋಕದಲ್ಲಿ ಅನುಶ್ರೀ ಅವರು ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಹಲವು ವೇದಿಕೆ ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡಿದ್ದಾರೆ. ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಚಿತ್ರರಂಗದಲ್ಲಿ ಅವರ ಸ್ನೇಹಿತರ ಬಳಗ ದೊಡ್ಡದು. ಅಲ್ಲದೇ, ರಾಜಕೀಯ ಕ್ಷೇತ್ರದವರ ಜೊತೆಗೂ ನಂಟು ಹೊಂದಿದ್ದಾರೆ. ಹಾಗಾಗಿ ಮದುವೆಗೆ ಅನೇಕ ಗಣ್ಯರು ಹಾಜರಿ ಹಾಕಲಿದ್ದಾರೆ.
ಅನುಶ್ರೀ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಿತ್ತು. ಅದಕ್ಕೆ ತಕ್ಕಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಹಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಈ ಮೊದಲು ಕೂಡ ಅನುಶ್ರೀ ಮದುವೆ ಬಗ್ಗೆ ಕೆಲವು ಗಾಸಿಪ್ ಹಬ್ಬಿದ್ದವು. ಆದರೆ ಅವು ನಿಜವಾಗಲಿಲ್ಲ. ಈ ಬಾರಿ ಮದುವೆಯ ಸುದ್ದಿ ಖಚಿತವಾಗಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: ಅಂತೂ ಆ್ಯಂಕರ್ ಅನುಶ್ರೀ ಮುಖದಲ್ಲಿ ಬಂತು ಮದುವೆ ಕಳೆ
ಈ ಮೊದಲು ನಡೆದ ಕಾರ್ಯಕ್ರಮವೊಂದರಲ್ಲಿ ಅನುಶ್ರೀ ಮತ್ತು ರೋಷನ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಪೂಜೆ ಮಾಡಿಸುವಾಗ ಕೆಲವರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಎಲ್ಲ ಕಡೆಗಳಲ್ಲಿ ಅದು ವೈರಲ್ ಆಯಿತು. ಈ ಫೋಟೋ ಫ್ಯಾನ್ ಪೇಜ್ಗಳಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಅನುಶ್ರೀ ಅವರು ಮದುವೆ ಆಗುತ್ತಿರುವ ವಿಚಾರ ತಿಳಿದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




