
ಕನ್ನಡ ಒಟಿಟಿ ಲೋಕದಲ್ಲಿ ಥ್ರಿಲ್ಲರ್ ಸರಣಿಯೊಂದು ಅಭೂತಪೂರ್ವ ದಾಖಲೆ ಬರೆದಿದೆ. ಜೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಬ್ಲಾಕ್‌ಬಸ್ಟರ್ ವೆಬ್ ಸರಣಿ ‘ಅಯ್ಯನ ಮನೆ 2’, ಡಿಜಿಟಲ್ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಬರೋಬ್ಬರಿ 100 ಮಿಲಿಯನ್ (10 ಕೋಟಿ) ವೀಕ್ಷಣೆಯ ನಿಮಿಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಕರ್ನಾಟಕದಾದ್ಯಂತ ಅಪಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ, ಗುಣಮಟ್ಟದ ಸ್ಥಳೀಯ ಕಂಟೆಂಟ್‌ಗೆ ಇರುವ ಪ್ರಚಂಡ ಬೇಡಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ರೋಚಕ ನಿರೂಪಣೆ, ಮೈನಡುಗಿಸುವಂತಹ ಸಸ್ಪೆನ್ಸ್ ಹಾಗೂ ಟ್ವಿಸ್ಟ್‌ಗಳಿಂದ ಈ ಸರಣಿಯು ವೀಕ್ಷಕರನ್ನು ಆರಂಭದಿಂದಲೇ ಕಟ್ಟಿಹಾಕಿದೆ. ಕೇವಲ ಹಾರರ್ ಅಂಶಗಳಿಗೆ ಸೀಮಿತವಾಗದೆ, ಕೌಟುಂಬಿಕ ಭಾವನಾತ್ಮಕ ಸನ್ನಿವೇಶಗಳು ಮತ್ತು ನಿಗೂಢ ರೋಮಾಂಚನವನ್ನು ಸರಿಸಮಾನವಾಗಿ ಬೆರೆಸಿರುವುದು ಪ್ರೇಕ್ಷಕರನ್ನು ಗಾಢವಾಗಿ ಆಕರ್ಷಿಸಿದೆ. ರಹಸ್ಯಗಳ ಗೂಡಾಗಿರುವ ಪುರಾತನ ಹಿರಿಯರ ಮನೆಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ವರ್ಷಗಳಿಂದ ಮುಚ್ಚಿಹೋಗಿದ್ದ ಸತ್ಯಗಳು ಮತ್ತು ಅಸಹಜ ಘಟನೆಗಳ ಸುತ್ತ ತೆರೆದುಕೊಳ್ಳುತ್ತದೆ.
ಸರಣಿಯ ಈ ಅಭೂತಪೂರ್ವ ಯಶಸ್ಸಿನ ಕುರಿತು ಮಾತನಾಡಿದ ಜೀ ಕನ್ನಡ ಹಾಗೂ ಜೀ ಪವರ್ ಮುಖ್ಯ ವಾಹಿನಿ ಅಧಿಕಾರಿ ಮತ್ತು ಕನ್ನಡ ಜೀ5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಅಯ್ಯನ ಮನೆ 2 ಸರಣಿಯು 100 ಮಿಲಿಯನ್ ವೀಕ್ಷಣೆ ನಿಮಿಷಗಳ ಬೃಹತ್ ಮೈಲಿಗಲ್ಲನ್ನು ದಾಟಿರುವುದು ಮತ್ತು ಕರ್ನಾಟಕದ ಪ್ರೇಕ್ಷಕರಿಂದ ಈ ಮಟ್ಟದ ಅದ್ಭುತ ಪ್ರತಿಕ್ರಿಯೆ ಪಡೆದಿರುವುದು ನಮಗೆ ಹೆಮ್ಮೆ ತಂದಿದೆ’ ಎಂದು ಅವರು ಹೇಳಿದ್ದಾರೆ.
‘ಕೌಟುಂಬಿಕ ಭಾವನೆಗಳು ಹಾಗೂ ಅತಿಮಾನುಷ ಕೌತುಕದ ಕಥಾಹಂದರವನ್ನು ಜನರು ಎಷ್ಟು ಪ್ರೀತಿಸಿದ್ದಾರೆ ಎಂಬುದಕ್ಕೆ ಈ ಸಾಧನೆಯೇ ಸಾಕ್ಷಿ. ಜೀ5ನಲ್ಲಿ ನಾವು ಸಾಂಸ್ಕೃತಿಕವಾಗಿ ಬೇರೂರಿರುವ, ಪ್ರಭಾವಿ ಹಾಗೂ ಆಕರ್ಷಕ ಸ್ಥಳೀಯ ಕಥೆಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಈ ಯಶಸ್ಸು ಕನ್ನಡ ಕಂಟೆಂಟ್ ಬೆಳವಣಿಗೆಗೆ ಹಾಗೂ ಮನಮುಟ್ಟುವ ಕಥೆಗಳನ್ನು ನೀಡುವ ನಮ್ಮ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲವಾಗಿದೆ’ ಎಂದು ದೀಪಕ್ ಶ್ರೀರಾಮುಲು ತಿಳಿಸಿದ್ದಾರೆ.
ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಆರಂಭಿಸಿದ ‘ಅಯ್ಯನ ಮನೆ 2’ ವೆಬ್ ಸೀರಿಸ್
ತನ್ನ ಯಶಸ್ವಿ ಡಿಜಿಟಲ್ ಪ್ರದರ್ಶನ ಮತ್ತು ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ಕನ್ನಡ ಮನರಂಜನೆಯ ಶ್ರೀಮಂತಿಕೆಯನ್ನು ಬಿಂಬಿಸುವ ಪ್ರಾದೇಶಿಕ ಕಥೆಗಳನ್ನು ನೀಡುವ ಜೀ5ನ ಬದ್ಧತೆಯನ್ನು ‘ಅಯ್ಯನ ಮನೆ 2’ ಮತ್ತಷ್ಟು ಬಲಪಡಿಸಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.