ನಟ ಅಜಯ್ ದೇವಗನ್ (Ajay Devgn) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಅವರು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಕೆಲವೊಮ್ಮೆ ಅವರ ಲೆಕ್ಕಾಚಾರ ತಪ್ಪಾಗುತ್ತದೆ. ಪಾತ್ರಗಳ ಆಯ್ಕೆಯಲ್ಲಿ ಅವರು ಕೂಡ ಎಡವಿದ್ದುಂಟು. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ಭೋಲಾ’ (Bholaa) ಸಿನಿಮಾ. ಈ ಚಿತ್ರಕ್ಕೆ ಸ್ವತಃ ಅಜಯ್ ದೇವಗನ್ ಅವರು ನಿರ್ದೇಶನ ಮಾಡಿದ್ದರು. ನಿರ್ಮಾಣದ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಆದರೆ ಈ ಸಿನಿಮಾದಿಂದ ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಈಗ ‘ಭೋಲಾ’ ಸಿನಿಮಾ ಒಟಿಟಿಗೆ ಬಂದಿದೆ. ಅಮೇಜಾನ್ ಪ್ರೈಂ ವಿಡಿಯೋ (Amazon Prime Video) ಮೂಲಕ ಈ ಚಿತ್ರ ಸ್ಟ್ರೀಮ್ ಆಗುತ್ತಿದೆ. ಆದರೆ ಉಚಿತವಾಗಿ ಅಲ್ಲ!
ಸಾಮಾನ್ಯವಾಗಿ ಒಟಿಟಿ ಚಂದಾದಾರರಾಗಿರುವ ಗ್ರಾಹಕರಿಗೆ ಅದರಲ್ಲಿನ ಎಲ್ಲ ಸಿನಿಮಾಗಳನ್ನು ಉಚಿತವಾಗಿ ನೋಡುವ ಅವಕಾಶ ಸಿಗುತ್ತದೆ. ಆದರೆ ‘ಭೋಲಾ’ ತಂಡ ಬೇರೆ ದಾರಿ ಅನುಸರಿಸಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಆದರೆ ಈ ಒಟಿಟಿಗೆ ಚಂದಾದಾರರಾಗಿರುವವರು ಕೂಡ ‘ಭೋಲಾ’ ಸಿನಿಮಾ ನೋಡಬೇಕು ಎಂದರೆ 399 ರೂಪಾಯಿ ನೀಡಬೇಕು!
ಇದನ್ನೂ ಓದಿ: ಏಳು ತಿಂಗಳ ಬಳಿಕ ಒಟಿಟಿಗೆ ಬಂದ ಹೃತಿಕ್ ರೋಷನ್ ಸಿನಿಮಾ ತಲುಪಲಿದೆ 40 ಕೋಟಿ ಜನರಿಗೆ
ಬಾಕ್ಸ್ ಆಫೀಸ್ನಲ್ಲಿ ‘ಭೋಲಾ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ. ತಿಂಗಳುಗಟ್ಟಲೆ ಪ್ರದರ್ಶನ ಕಂಡರೂ ಈ ಸಿನಿಮಾ ಒಟ್ಟು ಗಳಿಸಿದ್ದು 82 ಕೋಟಿ ರೂಪಾಯಿ ಮಾತ್ರ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಆಗಿದ್ದರಿಂದ ಬಾಕ್ಸ್ ಆಫೀಸ್ನಿಂದ ಬಂದ ಹಣದಿಂದ ಏನೇನೂ ಲಾಭ ಆಗಲಿಲ್ಲ. ಹಾಗಾಗಿ ಒಟಿಟಿ ಮೂಲಕ ಹಣ ಮಾಡಲು ‘ಭೋಲಾ’ ತಂಡ ಪ್ರಯತ್ನಿಸುತ್ತಿದೆ.
ಮಾರ್ಚ್ 30ರಂದು ‘ಭೋಲಾ’ ಸಿನಿಮಾ ಬಿಡುಗಡೆ ಆಯಿತು. ಇದು ತಮಿಳಿನಲ್ಲಿ ಕಾರ್ತಿ ನಟಿಸಿದ್ದ ‘ಖೈದಿ’ ಸಿನಿಮಾದ ಹಿಂದಿ ರಿಮೇಕ್. ಆದರೆ ಹಿಂದಿಯಲ್ಲಿ ಈ ಚಿತ್ರವನ್ನು ಅಜಯ್ ದೇವಗನ್ ಅವರು 3ಡಿ ಅವತರಣಿಕೆಯಲ್ಲಿ ರಿಲೀಸ್ ಮಾಡಿದರು. ಹಾಗಿದ್ದರೂ ಕೂಡ ಪ್ರೇಕ್ಷಕರಿಂದ ‘ಭೋಲಾ’ ಸಿನಿಮಾಗೆ ಮೆಚ್ಚುಗೆ ಸಿಗಲಿಲ್ಲ. ಒಟಿಟಿ ಪ್ಲಾಟ್ಫಾರ್ಮ್ಗಳು ಪ್ರಬಲವಾಗಿರುವ ಈ ಕಾಲಘಟ್ಟದಲ್ಲಿ ರಿಮೇಕ್ ಸಿನಿಮಾಗಳು ಹೆಚ್ಚು ಯಶಸ್ಸು ಕಾಣುತ್ತಿಲ್ಲ. ಹಾಗಾಗಿ ರಿಮೇಕ್ ಎಂಬುದು ಕೂಡ ‘ಭೋಲಾ’ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು. ಟಬು, ಸಂಜಯ್ ಮಿಶ್ರಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಭೋಲಾ’ ಬಿಡುಗಡೆ ಆದಾಗ ಕನ್ನಡದಲ್ಲಿ ‘ಗುರುದೇವ್ ಹೊಯ್ಸಳ’ ಮತ್ತು ತೆಲುಗಿನಲ್ಲಿ ‘ದಸರಾ’ ಚಿತ್ರ ಬಿಡುಗಡೆ ಆಗಿ ಪೈಪೋಟಿ ನೀಡಿದ್ದವು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.