The Kerala Story: ಒಟಿಟಿ ಪ್ರಾಬಲ್ಯ ಹೆಚ್ಚಿರುವಾಗ ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ’ ಬ್ಯಾನ್ ಮಾಡಿದ್ದಕ್ಕೆ ಅರ್ಥವುಂಟೆ?
Ban on The Kerala Story: ಮಮತಾ ಬ್ಯಾನರ್ಜಿ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಪ್ರದರ್ಶನವನ್ನು ನಿಷೇಧಿಸಿರುವುದಕ್ಕೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಈ ಚಿತ್ರ ಉತ್ತಮವಾಗಿ ಪ್ರದರ್ಶನ ಆಗುತ್ತಿದೆ.
ಯಾವುದೇ ಸೂಕ್ಷ್ಮ ವಿಚಾರಗಳ ಬಗ್ಗೆ ಸಿನಿಮಾ ತಯಾರಾದಾಗ ಪರ-ವಿರೋಧ ಚರ್ಚೆ ಆಗುತ್ತದೆ. ಕೆಲವರು ಬ್ಯಾನ್ ಮಾಡಬೇಕು ಎಂಬ ವಾದ ಮುಂದಿಡುತ್ತಾರೆ. ಸದ್ಯ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರಕ್ಕೆ ಹಾಗೆಯೇ ಆಗಿದೆ. ಐಸಿಸ್ ಉಗ್ರ ಸಂಘಟನೆಯ ಕುಮ್ಮಕ್ಕಿನಿಂದ ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ಮತ್ತು ಮತಾಂತರದ ಕುರಿತು ‘ದಿ ಕೇರಳ ಸ್ಟೋರಿ’ ಸಿನಿಮಾ ಸಿದ್ಧವಾಗಿದೆ. ಅದಾ ಶರ್ಮಾ ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾವನ್ನು (The Kerala Story Ban) ಬ್ಯಾನ್ ಮಾಡಲಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ‘ದಿ ಕೇರಳ ಸ್ಟೋರಿ’ ಚಿತ್ರದ ಪ್ರದರ್ಶನವನ್ನು ನಿಷೇಧಿಸಿರುವುದಾಗಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಚಿತ್ರಕ್ಕೆ ಉತ್ತಮ ರೀತಿಯಲ್ಲಿ ಕಲೆಕ್ಷನ್ ಆಗುತ್ತದೆ. ಅಲ್ಲದೇ, ಒಟಿಟಿ ಪ್ರಾಬಲ್ಯ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಯಾವುದೇ ಸಿನಿಮಾವನ್ನು ಚಿತ್ರಮಂದಿರದಲ್ಲಿ ಪ್ರದರ್ಶನ ಆಗದಂತೆ ನಿಷೇಧಿಸುವುದು ಅಪ್ರಸ್ತುತ ಎಂಬ ಮಾತು ಕೇಳಿಬಂದಿದೆ.
ಮೊದಲ ಲಾಕ್ಡೌನ್ ಬಳಿಕ ಒಟಿಟಿ ಪ್ಲಾಟ್ಫಾರ್ಮ್ಗಳ ವ್ಯಾಪ್ತಿ ಹಿರಿದಾಯಿತು. ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳುವ ಬದಲು ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಆರಂಭಿಸಿದರು. ಒಟಿಟಿಗೆ ಚಂದಾದಾರರಾಗುವವರ ಸಂಖ್ಯೆ ಹೆಚ್ಚಿತು. ಈಗ ಹೊಸ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಸಖತ್ ಪೈಪೋಟಿ ಇದೆ. ದೇಶದ ಎಲ್ಲ ಮೂಲೆಗಳನ್ನೂ ಒಟಿಟಿ ತಲುಪುತ್ತದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಒಟಿಟಿ ಮೂಲಕ ಯಾವುದೇ ದೇಶದ ಸಿನಿಮಾವನ್ನು ನೋಡಬಹುದಾಗಿದೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಮಿಂಚಿದ ಅದಾ ಶರ್ಮಾ
‘ದಿ ಕೇರಳ ಸ್ಟೋರಿ’ ಸಿನಿಮಾ ಹಲವು ರಾಜ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಚಿತ್ರಮಂದಿರಗಳು ಬಹುತೇಕ ಭರ್ತಿ ಆಗುತ್ತಿವೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ನಿಷೇಧ ಹೇರಲಾಗಿದೆ. ಒಂದಷ್ಟು ದಿನಗಳು ಕಳೆದ ಬಳಿಕ ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗಲಿದೆ. ಆಗ ಪಶ್ಚಿಮ ಬಂಗಾಳದ ಜನರು ಕೂಡ ಈ ಸಿನಿಮಾವನ್ನು ಒಟಿಟಿ ಮೂಲಕ ವೀಕ್ಷಿಸುತ್ತಾರೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಬ್ಯಾನ್ ಮಾಡಿದ್ದರಲ್ಲಿ ಅರ್ಥವೇ ಇಲ್ಲ ಎನ್ನಬಹುದು.
ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್; ನಿರ್ಧಾರಕ್ಕೆ ಕಾರಣ ತಿಳಿಸಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಪ್ರದರ್ಶನವನ್ನು ನಿಷೇಧಿಸಿರುವುದಕ್ಕೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ನೋಡುವುದು ಬಿಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿದೆ. ಸದ್ಯಕ್ಕೆ ಭಾರತದಲ್ಲಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. 4 ದಿನಕ್ಕೆ 45 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿ ಮುನ್ನುಗ್ಗುತ್ತಿದೆ.
‘ದಿ ಕೇರಳ ಸ್ಟೋರಿ’ ಕಲೆಕ್ಷನ್ ವಿವರ:
ಮೊದಲ ದಿನ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ 8.3 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ ಕಲೆಕ್ಷನ್ ಹೆಚ್ಚಾಯಿತು. ಶನಿವಾರ ಈ ಸಿನಿಮಾ ಬರೋಬ್ಬರಿ 11.22 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನವಾದ ಭಾನುವಾರ 16.40 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸದ್ದು ಮಾಡಿತು. ಸೋಮವಾರ ಬಾಕ್ಸ್ ಆಫೀಸ್ ಹಣೆಬರಹ ಏನಾಗಬಹುದು ಎಂಬ ಕೌತುಕ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ನಾಲ್ಕನೇ ದಿನವಾದ ಮೇ 8ರಂದು ‘ದಿ ಕೇರಳ ಸ್ಟೋರಿ’ ಸಿನಿಮಾ 10 ಕೋಟಿ ರೂಪಾಯಿ ಗಳಿಸಿದೆ ಎಂಬುದು ವಿಶೇಷ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.