ಪುನೀತ್ ರಾಜ್‌ಕುಮಾರ್ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’ ಟ್ರೇಲರ್ನಲ್ಲಿ ನಗುವಿನ ಪ್ಯಾಕ್
‘ಫ್ಯಾಮಿಲಿ ಪ್ಯಾಕ್' ಚಿತ್ರದ ಟ್ರೇಲರ್ನಲ್ಲಿ ಕಾಮಿಡಿ ಹೈಲೈಟ್ ಆಗಿದೆ. ಒಂದು ಚೆಂದದ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿರಲಿದೆ ಎಂಬುದರ ಝಲಕ್ಅನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಪಿಆರ್ಕೆ ಸಂಸ್ಥೆ (PRK Production) ಸ್ಥಾಪಿಸಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈಗ ಅವರ ನಿರ್ಮಾಣದ ಮೂರು ಚಿತ್ರಗಳು ಒಂದರ ಹಿಂದೆ ಒಂದರಂತೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಫೆಬ್ರವರಿ 3ರಂದು ಅವರ ನಿರ್ಮಾಣದ ‘ಒನ್ ಕಟ್ ಟೂ ಕಟ್’ ಚಿತ್ರ ರಿಲೀಸ್ ಆಗಿತ್ತು. ಈಗ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆ ನಿರ್ವಹಿಸಿರುವ ‘ಫ್ಯಾಮಿಲಿ ಪ್ಯಾಕ್’ (Family Pack) ರಿಲೀಸ್ಗೆ ರೆಡಿ ಇದೆ. ಇಂದು (ಫೆಬ್ರವರಿ 10) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಕಾಮಿಡಿ ಸಖತ್ ಹೈಲೈಟ್ ಆಗಿದೆ.
ಪುನೀತ್ ರಾಜ್‌ಕುಮಾರ್ ಅವರು ಅಕ್ಟೋಬರ್ 29ರಂದು ನಿಧನ ಹೊಂದಿದ್ದರು. ಅವರ ಅಕಾಲಿಕ ಮರಣ ಸಾಕಷ್ಟು ಜನರಿಗೆ ಶಾಕ್ ನೀಡಿದೆ. ಅವರು ಸಾಕಷ್ಟು ಸಿನಿಮಾ ಕೆಲಸಗಳನ್ನು ಅರ್ಧಕ್ಕೆ ತೊರೆದು ಹೋಗಿದ್ದಾರೆ. ‘ಜೇಮ್ಸ್’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಅವರ ಜನ್ಮದಿನದಂದು ಬಿಡುಗಡೆ ಆಗಲಿದೆ. ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಅಪ್ಪು ಅತಿಥಿ ಪಾತ್ರ ಮಾಡಿದ್ದಾರೆ. ಪಿಆರ್ಕೆ ನಿರ್ಮಾಣದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತಿದೆ. ಈಗ ಅವರ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’ ಟ್ರೇಲರ್ ರಿಲೀಸ್ ಆಗಿದ್ದು, ಇದೇ ತಿಂಗಳು 17ರಂದು ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ.
‘ಫ್ಯಾಮಿಲಿ ಪ್ಯಾಕ್’ ಚಿತ್ರದ ಟ್ರೇಲರ್ನಲ್ಲಿ ಕಾಮಿಡಿ ಹೈಲೈಟ್ ಆಗಿದೆ. ಒಂದು ಚೆಂದದ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿರಲಿದೆ ಎಂಬುದರ ಝಲಕ್ಅನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಹಾಸ್ಯ ಪಾತ್ರಗಳಲ್ಲಿ ಸಾಧು ಕೋಕಿಲ, ರಂಗಾಯಣ ರಘು ಹೈಲೈಟ್ ಆಗಿದ್ದಾರೆ. ಟ್ರೇಲರ್ನಲ್ಲಿ ಅಮಾನುಷ ಶಕ್ತಿ ವಿಚಾರವನ್ನೂ ಪ್ರಸ್ತಾಪ ಮಾಡಿದ್ದು, ಇದನ್ನು ಸಿನಿಮಾದಲ್ಲಿ ಹೇಗೆ ತೋರಿಸಲಾಗಿದೆ ಎಂಬ ಕುತೂಹಲ ಇದೆ.
ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಅರ್ಜುನ್ ಕುಮಾರ್.ಎಸ್ ‘ಫ್ಯಾಮಿಲಿ ಪ್ಯಾಕ್‌ನಂತಹ ಕಥೆಯನ್ನು ಸಿನಿಮಾ ಮಾಡಿ ಪ್ರೈಮ್ ವಿಡಿಯೋಗೆ ತರಲು ನನಗೆ ಸಂತೋಷವಿದೆ. ಸಿನಿಮಾದಲ್ಲಿ ಕಾಮಿಡಿ ಜತೆ ಹಲವು ವಿಚಾರಗಳನ್ನು ಹೇಳಲಾಗಿದೆ. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗಾಗಿ ಕಾದಿದ್ದೇವೆ’ ಎಂದಿದ್ದಾರೆ ಅರ್ಜುನ್ ಕುಮಾರ್.
2017ರ ಜುಲೈ 20ರಂದು ಪಿಆರ್ಕೆ ಪ್ರೊಡಕ್ಷನ್ ಸ್ಥಾಪನೆ ಆಯಿತು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ನಿರ್ಮಾಣ ಸಂಸ್ಥೆ ಆರಂಭಗೊಂಡಿದೆ. ‘ಕವಲುದಾರಿ’ ಈ ಪ್ರೊಡಕ್ಷನ್ ಹೌಸ್ನಿಂದ ಹೊರ ಬಂದ ಮೊದಲ ಸಿನಿಮಾ. 2019ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ನಂತರ ‘ಮಾಯಾಭಜಾರ್ 2016’, ಲಾ, ಫ್ರೆಂಚ್ ಬಿರಿಯಾನಿ ಸಿನಿಮಾಗಳು ಈ ಪ್ರೊಡಕ್ಷನ್ ಹೌಸ್ನಿಂದ ಮೂಡಿ ಬಂದಿವೆ.
ಕಳೆದ ವರ್ಷಾಂತ್ಯಕ್ಕೆ ಪಿಆರ್ಕೆ ಮತ್ತೆ ಕೆಲಸ ಆರಂಭಿಸುವ ಬಗ್ಗೆ ಬರೆದುಕೊಂಡಿತ್ತು. ‘ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯ. ಆದರೆ ಪುನೀತ್ ರಾಜ್‌ಕುಮಾರ್ ಅವರು ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿ.ಆರ್.ಕೆ ಪ್ರೊಡಕ್ಷನ್ಸ್ ಮತ್ತು ಪಿ.ಆರ್.ಕೆ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತ ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಪಿಆರ್ಕೆ ಸಂಸ್ಥೆ ಬರೆದುಕೊಂಡಿತ್ತು.
ಇದನ್ನೂ ಓದಿ: ಅಮೇಜಾನ್ ಪ್ರೈಮ್ನಲ್ಲಿ ಪಿಆರ್ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್?
ಸಲ್ಮಾನ್ ಖಾನ್ಗೆ ಸಿಕ್ಸ್ ಪ್ಯಾಕ್ ಇರೋದು ನಿಜವೇ? ಒಂದು ವಿಡಿಯೋದಿಂದ ಬಯಲಾಯ್ತು ಸತ್ಯ
Published On - 4:36 pm, Thu, 10 February 22