‘ಮಾಸ್ಟರ್‌ ಶೆಫ್‌ ಇಂಡಿಯಾ 2023ʼ ಸ್ಪರ್ಧೆಯ ಟಾಪ್​ 12 ಹಂತಕ್ಕೆ ಬಂದ ಕನ್ನಡಿಗ ಹರೀಶ್‌ ಕ್ಲೋಸ್‌ಪೇಟ್‌

Master Chef India 2023: ದೇಶದ ಬೇರೆ ಬೇರೆ ರಾಜ್ಯಗಳ ಸ್ಪರ್ಧಿಗಳು ʻಮಾಸ್ಟರ್‌ ಶೆಫ್‌ ಇಂಡಿಯಾ 2023ʼ ರಿಯಾಲಿಟಿ ಶೋನಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಈ ಶೋನಲ್ಲಿ ಗೆಲುವಿಗೆ ವೀಕ್ಷಕರ ವೋಟಿಂಗ್​ ಕೂಡ ಮುಖ್ಯವಾಗುತ್ತದೆ. ಕರ್ನಾಟಕದ ವೀಕ್ಷಕರಿಂದ ತಮಗೆ ವೋಟ್​ ಸಿಗಲಿದೆ ಎಂಬ ಆತ್ಮವಿಶ್ವಾಸದಿಂದ ಬೆಂಗಳೂರಿನ ಹರೀಶ್‌ ಕ್ಲೋಸ್‌ಪೇಟ್‌ ಮುನ್ನುಗ್ಗುತ್ತಿದ್ದಾರೆ.

‘ಮಾಸ್ಟರ್‌ ಶೆಫ್‌ ಇಂಡಿಯಾ 2023ʼ ಸ್ಪರ್ಧೆಯ ಟಾಪ್​ 12 ಹಂತಕ್ಕೆ ಬಂದ ಕನ್ನಡಿಗ ಹರೀಶ್‌ ಕ್ಲೋಸ್‌ಪೇಟ್‌
ಹರೀಶ್‌ ಕ್ಲೋಸ್‌ಪೇಟ್‌
Follow us
ಮದನ್​ ಕುಮಾರ್​
|

Updated on: Nov 01, 2023 | 6:41 PM

ರಾಷ್ಟ್ರಮಟ್ಟದ ರಿಯಾಲಿಟಿ ಶೋನಲ್ಲಿ ಕರುನಾಡಿನ ಪ್ರತಿಭಾವಂತರು ಸದ್ದು ಮಾಡುತ್ತಾರೆ. ಈಗ ಬೆಂಗಳೂರಿನ ಉದ್ಯಮಿ, ಬಾಣಸಿಗ ಹರೀಶ್‌ ಕ್ಲೋಸ್‌ಪೇಟ್‌ (Harish Closepet) ಕೂಡ ಆ ಸಾಲಿನಲ್ಲಿ ಇದ್ದಾರೆ. ಬಿಡುವಿನ ಸಮಯದಲ್ಲಿ ಮಗಳ ಲಂಚ್​ ಬಾಕ್ಸ್​ ಸಲುವಾಗಿ ಅಡುಗೆ ಮಾಡುವುದನ್ನು ಹವ್ಯಾಸವಾಗಿ ರೂಢಿಸಿಕೊಂಡ ಅವರು ಈಗ ರಾಷ್ಟ್ರ ಮಟ್ಟದ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೌದು, ಹರೀಶ್‌ ಕ್ಲೋಸ್‌ಪೇಟ್‌ ಅವರು ‘ಸೋನಿ ಲಿವ್​​’ (Sony Liv) ಒಟಿಟಿಯ ʻಮಾಸ್ಟರ್‌ ಶೆಫ್‌ ಇಂಡಿಯಾ 2023ʼ (Master Chef India 2023) ಅಡುಗೆ ಸ್ಪರ್ಧೆಯಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಟಾಪ್‌ 12 ಸ್ಪರ್ಧಿಗಳಲ್ಲಿ ಅವರು ಕೂಡ ಆಯ್ಕೆ ಆಗಿದ್ದಾರೆ. ಕನ್ನಡಿಗನಾಗಿರುವ ಹರೀಶ್​ ಅವರು ಹಲವು ರೌಂಡ್ ಕಠಿಣ ಆಡಿಷನ್​ಗಳನ್ನು ದಾಟಿ ಈ ಹಂತಕ್ಕೆ ಬಂದಿದ್ದಾರೆ.

ಸಾವಿರಾರು ಮಹಿಳೆಯರು ಕೆಲಸ ಮಾಡುವ ಕರಕುಶಲ ವಸ್ತುಗಳ ಉದ್ಯಮವನ್ನು ಹರೀಶ್​ ಕ್ಲೋಸ್​ಪೇಟ್​ ನಡೆಸುತ್ತಿದ್ದಾರೆ. ಈ ಕೆಲಸದ ನಡುವೆ, ಬಿಡುವು ಸಿಕ್ಕಾಗ ಪುತ್ರಿಯ ಕಾಲೇಜು ಲಂಚ್​ ಬಾಕ್ಸ್​ ಸಲುವಾಗಿ ಅವರು ಅಡುಗೆ ಮಾಡಿ ಕಳಿಸುತ್ತಿದ್ದರು. ಆ ಸಂದರ್ಭದ ವಿಡಿಯೋಗಳನ್ನು ಚಿತ್ರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ‘ಹ್ಯಾರಿಸ್​ ಲಂಚ್​ ಬಾಕ್ಸ್​’ ಎಂಬ ಅವರ ಸೋಶಿಯಲ್​ ಮೀಡಿಯಾ ಖಾತೆ ಸಖತ್​ ಫೇಮಸ್​ ಆಯಿತು. ಈ ಮೊದಲೇ ಚಾಲ್ತಿಯಲ್ಲಿದ್ದ ಇತರೆ ಶೆಫ್​ಗಳ ನಡುವೆಯೂ ಹರೀಶ್​ ಅವರು ವಿಶೇಷವಾಗಿ ಗುರುತಿಸಿಕೊಂಡರು. ಅವರ ಸರಳತೆ ಮತ್ತು ವಿಶೇಷತೆ ಎಲ್ಲರಿಗೂ ಇಷ್ಟವಾಯಿತು.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ಲಭ್ಯವಿರುವ ಈ ಐದು ಮಸಾಲೆ ಪದಾರ್ಥಗಳು ಅಸಿಡಿಟಿ ಸಮಸ್ಯೆಗೆ ಪರಿಹಾರ 

ಬಿಸ್ನೆಸ್​ ಸಲುವಾಗಿ ವಿದೇಶಕ್ಕೆ ತೆರಳಿದ್ದಾಗ ಅಲ್ಲಿನ ಖಾದ್ಯಗಳ ಬಗ್ಗೆಯೂ ಹರೀಶ್ ಅವರು ತಿಳಿದುಕೊಳ್ಳುತ್ತಿದ್ದರು. ಅದನ್ನು ಸ್ಥಳೀಯ ವಿಧಾನದಲ್ಲಿ ಪ್ರಯೋಗಿಸಲು ಆರಂಭಿಸಿದರು. ಈ ಹವ್ಯಾಸವೇ ಅವರಿಗೆ ಹೊಸ ಅವಕಾಶದ ಬಾಗಿಲು ತೆರೆದುಕೊಟ್ಟಿತು. ಸೋನಿ ಟಿವಿಯ ʻಮಾಸ್ಟರ್‌ ಶೆಫ್‌ʼ ರಿಯಾಲಿಟಿ ಶೋ ಕುರಿತು ಪ್ರಕಟಣೆ ಹೊರಬಿದ್ದಾಗ ಹರೀಶ್‌ ಕ್ಲೋಸ್‌ಪೇಟ್ ಅವರು ಆಡಿಷನ್‌ ನೀಡಲು ಮುಂದಾದರು. ಆ ಸ್ಪರ್ಧೆಯಲ್ಲಿ ಘಟಾನುಘಟಿಗಳು ಭಾಗವಹಿಸುತ್ತಾರೆ. 5 ಸ್ಟಾರ್​ ಹೋಟೆಲ್‌ಗಳ ಅಡುಗೆ ಕಲಿತು ಬಂದವರೂ ಇರುತ್ತಾರೆ. ಹಾಗಿದ್ದರೂ ಕೂಡ ಕುಟುಂಬದವರ ಬೆಂಬಲ ಮತ್ತು ಪ್ರೋತ್ಸಾಹದಿಂದ ಆಡಿಷನ್​ ನೀಡಿದ ಹರೀಶ್ ಅವರು ಸೆಲೆಕ್ಟ್​ ಆದರು. ಹಲವು ಸುತ್ತುಗಳ ಪೈಪೋಟಿ ನೀಡಿ, ಅವರೀಗ ‘ಟಾಪ್​ 12’ ಹಂತಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ನ್ಯೂಸ್ 9 ಪ್ಲಸ್ ಹೊಸ ಶೋ ‘ಹಮ್ದರ್ದ್ ಖಾಲಿಸ್ ಮಸಾಲೆ: ಫಿಲ್ಮಿ ಮಸಾಲಾ’ ನೀಡಲಿದೆ ರುಚಿ ಮತ್ತು ರಂಜನೆ

ದೇಶದ ಬೇರೆ ಬೇರೆ ರಾಜ್ಯಗಳ ಸ್ಪರ್ಧಿಗಳು ʻಮಾಸ್ಟರ್‌ ಶೆಫ್‌ ಇಂಡಿಯಾ 2023ʼ ಶೋನಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಗೆಲುವಿಗೆ ವೀಕ್ಷಕರ ವೋಟಿಂಗ್​ ಕೂಡ ಮುಖ್ಯವಾಗಿದೆ. ಕರ್ನಾಟಕದ ವೀಕ್ಷಕರಿಂದ ತಮಗೆ ವೋಟ್​ ಸಿಗಲಿದೆ ಎಂಬ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾರೆ ಬೆಂಗಳೂರಿನ ಹರೀಶ್‌ ಕ್ಲೋಸ್‌ಪೇಟ್‌. ʻನಾವು ಅಡುಗೆ ಮಾಡುವ ಸಂದರ್ಭದಲ್ಲಿ ಯಾವುದನ್ನು ಕೂಡ ಅಳೆದು-ತೂಗಿ ಹಾಕಬಾರದು. ಖುಷಿಯಿಂದ ಅಡುಗೆ ಮಾಡಬೇಕು. ಅಲ್ಲದೇ, ಪ್ರೀತಿಯಿಂದ ಮಾಡುವ ಅಡುಗೆಯು ಹೆಚ್ಚು ರುಚಿಯಾಗಿರುತ್ತದೆ. ಅದೇ ನನ್ನ ಯಶಸ್ಸಿನ ಗುಟ್ಟುʼ ಎಂದು ಹರೀಶ್‌ ಕ್ಲೋಸ್‌ಪೇಟ್‌ ಹೇಳಿದ್ದಾರೆ. 58ನೇ ವಯಸ್ಸಿನಲ್ಲಿ ಅವರು ಈ ಶೋನಲ್ಲಿ ಭಾಗವಹಿಸುವ ಮೂಲಕ ಕ್ರಿಯಾಶೀಲತೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.