Kalki On OTT: ಯಾವ ಒಟಿಟಿ ಪಾಲಾಯ್ತು ‘ಕಲ್ಕಿ 2898 ಎಡಿ’ ಸಿನಿಮಾ, ಬಿಡುಗಡೆ ಯಾವಾಗ?
‘ಕಲ್ಕಿ 2898 ಎಡಿ’ ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದ್ದು ಮೊದಲ ದಿನವೇ ಭರ್ಜರಿ ಯಶಸ್ಸು ಗಳಿಸಿದ್ದು ಸಿನಿಮಾ ಗೆಲುವಿನ ಕಡೆ ಮುನ್ನುಗ್ಗುತ್ತಿದೆ. ಇದರ ನಡುವೆ ‘ಕಲ್ಕಿ’ ಸಿನಿಮಾದ ಒಟಿಟಿ ಬಿಡುಗಡೆ ಕುರಿತ ಸುದ್ದಿಗಳು ಹರಿದಾಡುತ್ತಿವೆ. ಅಂದಹಾಗೆ ‘ಕಲ್ಕಿ’ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.
ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಇಂದಷ್ಟೆ (ಜೂನ್ 27) ಬಿಡುಗಡೆ ಆಗಿದೆ. ಮೊದಲ ದಿನವೇ ಸಿನಿಮಾಕ್ಕೆ ಎಲ್ಲೆಡೆಯಿಂದ ಭರಪೂರ ಪ್ರಶಂಸೆ ವ್ಯಕ್ತವಾಗಿದೆ. ಪ್ರಭಾಸ್ ಅಭಿಮಾನಿಗಳು ಮಾತ್ರವೇ ಅಲ್ಲದೆ ಬೇರೆ ನಟರ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು, ಕುಟುಂಬ ಸಮೇತ ಸಿನಿಮಾ ವೀಕ್ಷಿಸುವವರು ಎಲ್ಲರೂ ಬಂದು ಸಿನಿಮಾ ನೋಡುತ್ತಿದ್ದಾರೆ. ಚಿತ್ರಮಂದಿರದಲ್ಲಿ ಮೊದಲ ದಿನ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ‘ಕಲ್ಕಿ’ಯ ಒಟಿಟಿ ಬಿಡುಗಡೆ ಸಹ ಈಗಾಗಲೇ ನಿಗದಿಯಾಗಿಬಿಟ್ಟಿದೆ.
‘ಕಲ್ಕಿ 2898 ಎಡಿ’ ಸಿನಿಮಾಕ್ಕೆ ಸುಮಾರು 650 ಕೋಟಿ ಬಜೆಟ್ ಅನ್ನು ನಿರ್ಮಾಪಕ ಅಶ್ವಿನಿ ದತ್ ಹೂಡಿದ್ದಾರೆ. ಇದೇ ಕಾರಣಕ್ಕೆ ಒಟಿಟಿ ಹಕ್ಕನ್ನು ಭಾರಿ ದೊಡ್ಡ ಮೊತ್ತಕ್ಕೆ ಅಶ್ವಿನಿ ದತ್ ಮಾರಾಟ ಮಾಡಿದ್ದಾರೆ. ಆದರೆ ಚಿತ್ರಮಂದಿರಗಳಲ್ಲಿ ಹೇಗೆ ಸಿನಿಮಾವನ್ನು ಹಣ ಕೊಟ್ಟು ನೋಡಬೇಕೋ ಹಾಗೆಯೇ ಒಟಿಟಿಯಲ್ಲಿಯೂ ಸಹ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಪ್ರೇಕ್ಷಕ ಹಣ ನೊಡಬೇಕಿದೆ.
ಅಮೆಜಾನ್ ಪ್ರೈಂನಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಪ್ರೀಮಿಯಮ್ ಸೆಕ್ಷನ್ನ ಅಡಿ ಚಿತ್ರತಂಡ ಬಿಡುಗಡೆ ಮಾಡಲಿದೆ. ಸುಮಾರು 100 ಅಥವಾ 150 ರೂಪಾಯಿಗಳ ಬೆಲೆ ಇರಿಸಿ ಸಿನಿಮಾವನ್ನು ಬಾಡಿಗೆ ಆಧಾರದಲ್ಲಿ ನೋಡಲು ಅಮೆಜಾನ್ ಪ್ರೈಂ ಒಟಿಟಿ ಬಳಕೆದಾರರಿಗೆ ಅವಕಾಶ ನೀಡಲಿದ್ದಾರೆ. ಒಂದು ತಿಂಗಳ ಬಳಿಕ ಪ್ರೀಮಿಯಂ ಸೆಕ್ಷನ್ನಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಒಂದು ತಿಂಗಳಾದ ಬಳಿಕವಷ್ಟೆ ಕಲ್ಕಿ ಸಿನಿಮಾ ಉಚಿತವಾಗಿ ಅಮೆಜಾನ್ನಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ:Kalki 2898 AD Review: ಕಲಿಯುಗದೊಂದಿಗೆ ದ್ವಾಪರಯುಗದ ಬೆಸುಗೆ ಈ ‘ಕಲ್ಕಿ’
ಅಂದಹಾಗೆ ‘ಕಲ್ಕಿ’ ಸಿನಿಮಾದ ಒಂದು ಅನಿಮೇಷನ್ ಸರಣಿ ಈಗಾಗಲೇ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಆ ಸರಣಿಯಲ್ಲಿ ಪ್ರಭಾಸ್ರ ಭೈರವ ಹಾಗೂ ಭೈರವನ ಆತ್ಮೀಯ ಗೆಳೆಯ ಬುಜ್ಜಿಯ ಸಾಹಸಗಳ ಕುರಿತಾಗಿ ಕತೆಗಳಿವೆ. ಅನಿಮೇಷನ್ ಅನ್ನು ಅಮೆಜಾನ್ಗೆ ಮಾರಾಟ ಮಾಡಿರುವ ಚಿತ್ರತಂಡ, ಸಿನಿಮಾವನ್ನು ಸಹ ಈಗಾಗಲೇ ಅಮೆಜಾನ್ಗೆ ಮಾರಾಟ ಮಾಡಿದೆ.
ಅಮೆಜಾನ್ ಪ್ರೈಂ ಮಾತ್ರವೇ ಅಲ್ಲದೆ ಜೀ5ಗೂ ಸಹ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ. ಅಮೆಜಾನ್ನಲ್ಲಿ ‘ಕಲ್ಕಿ’ ಸಿನಿಮಾದ ಹಿಂದಿ, ಇಂಗ್ಲೀಷ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದರೆ, ಜೀ5 ನಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿಂದೆ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಆ ಬಳಿಕ ಜೀ5 ಬಳಿಕ ಅಮೆಜಾನ್ನಲ್ಲಿಯೂ ಬಿಡುಗಡೆ ಕಂಡಿತ್ತು. ಈಗ ‘ಕಲ್ಕಿ’ ಸಿನಿಮಾ ಸಹ ಇದೇ ಮಾದರಿಯನ್ನು ಅನುಸರಿಸುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ