ಒಟಿಟಿಯಲ್ಲಿ ದಾಖಲೆ ಬರೆದ ʼಅಯ್ಯನ ಮನೆʼ ವೆಬ್ ಸರಣಿ
Ayyana Mane Web series: ಕನ್ನಡದಲ್ಲಿ ಒಳ್ಳೆಯ ವೆಬ್ ಸರಣಿಗಳು ನಿರ್ಮಾಣವಾಗುತ್ತಿಲ್ಲ ಎಂಬ ಕೂಗು ಕೆಲ ವರ್ಷಗಳಿಂದಲೂ ಕೇಳಿ ಬರುತ್ತಿತ್ತು. ಕಳೆದ ವಾರ ‘ಅಯ್ಯನ ಮನೆ’ ಹೆಸರಿನ ವೆಬ್ ಸರಣಿ ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಒಂದೇ ವಾರಕ್ಕೆ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ ಈ ವೆಬ್ ಸರಣಿ.

ಇಂಗ್ಲೀಷ್, ಹಿಂದಿ, ತೆಲುಗು, ತಮಿಳು ವೆಬ್ ಸರಣಿಗಳು ಒಟಿಟಿಗಳಲ್ಲಿ ಸಖತ್ ಗಮನ ಸೆಳೆಯುತ್ತಿವೆ. ಆದರೆ ಕನ್ನಡದಲ್ಲಿ ಒಳ್ಳೆಯ ವೆಬ್ ಸರಣಿಗಳಿಲ್ಲ (web series) ಎಂಬ ಕೊರಗು ಮೊದಲಿನಿಂದಲೂ ಇತ್ತು. ಇತ್ತೀಚೆಗೆ ಬಿಡುಗಡೆ ಆದ ಕನ್ನಡದ ವೆಬ್ ಸರಣಿ ‘ಅಯ್ಯನ ಮನೆ’ ಆ ಕೊರಗನ್ನು ನೀಗಿಸಿದೆ. ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅಯ್ಯನ ಮನೆ’ ವೆಬ್ ಸರಣಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಂದ ವೀಕ್ಷಣೆ ಪಡೆದು ಒಟಿಟಿಯಲ್ಲಿ ಹೊಸ ದಾಖಲೆ ಬರೆದಿದೆ.
ZEE5 ಒಟಿಟಿಯಲ್ಲಿ ‘ಅಯ್ಯನ ಮನೆ’ ವೆಬ್ ಸರಣಿ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಇದೇ ಮೊದಲ ಬಾರಿಗೆ ZEE5 ನಲ್ಲಿ ಕನ್ನಡದ ವೆಬ್ ಸರಣಿಯೊಂದು ಬಿಡುಗಡೆ ಆಗಿದೆ. ಅದಕ್ಕೆ ಭರಪೂರ ಪ್ರತಿಕ್ರಿಯೆ ವೀಕ್ಷಕರಿಂದ ಸಿಗುತ್ತಿದೆ. ‘ಅಯ್ಯನ ಮನೆ’ ಮಿನಿ ವೆಬ್ ಸರಣಿಯಾಗಿದ್ದು, ಮೊದಲ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆ ದೊರೆತಿದೆ. ಆ ಮೂಲಕ ಇನ್ನಷ್ಟು ಹೊಸ ತಂಡಗಳು ವೆಬ್ ಸರಣಿ ನಿರ್ಮಾಣಕ್ಕೆ ಪ್ರಯತ್ನಿಸಲು ಸ್ಪೂರ್ತಿ ದೊರೆತಿದೆ.
ಏಪ್ರಿಲ್ 25ರಂದು ‘ಅಯ್ಯನ ಮನೆ’ ವೆಬ್ ಸರಣಿ ಜೀ5 ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೆ 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ ಈ ವೆಬ್ ಸರಣಿ. ಪ್ರಾದೇಶಿಕ ಭಾಷೆಯ ವೆಬ್ ಸರಣಿಯೊಂದು ಈ ಮಟ್ಟದ ವೀಕ್ಷಣೆ ಕಂಡಿರುವುದು ಸರಳ ಸಾಧನೆಯಲ್ಲ, ಈ ಸಾಧನೆ ಸಹಜವಾಗಿಯೇ ‘ಅಯ್ಯನ ಮನೆ’ ತಂಡಕ್ಕೆ ಖುಷಿ ತಂದಿದೆ.
ಇದನ್ನೂ ಓದಿ:‘ಅಯ್ಯನ ಮನೆ’ ಶೂಟಿಂಗ್: ಕ್ಯಾಮೆರಾ ಹಿಂದಿನ ಹಾಸ್ಯ
‘ಅಯ್ಯನ ಮನೆ’ ವೆಬ್ ಸರಣಿಯ ಪ್ರಮುಖ ಪಾತ್ರ ಜಾಜಿ ಯಾಗಿ ನಟಿಸಿರುವ ಖುಷಿ ರವಿ ವೆಬ್ ಸರಣಿಯ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದು, ‘ಅಯ್ಯನ ಮನೆ ಭಾಗವಾಗಿರುವುದು ನಿಜಕ್ಕೂ ಅವಿಸ್ಮರಣೀಯ ಅನುಭವ. ನನ್ನ ಪಾತ್ರದ ದೃಶ್ಯಗಳನ್ನು ಚಿತ್ರೀಕರಣ ಮಾಡುವುದು ಸವಾಲಿನ ಕೆಲಸ ಆಗಿತ್ತು. ಆಗ ಪಟ್ಟ ಶ್ರಮಕ್ಕೆ ಈಗ ಫಲ ದೊರೆತಿದೆ. ಇಷ್ಟು ಕಡಿಮೆ ಅವಧಿಯಲ್ಲಿ ವೆಬ್ ಸರಣಿ ದಾಖಲೆ ಬರೆದಿದೆ. ನನ್ನ ಪಾತ್ರವೂ ವೀಕ್ಷಕರಿಗೆ ಇಷ್ಟವಾಗಿದೆ. ನಿರ್ಮಾಪಕರಿಗೆ ಹಾಗೂ ಜೀ5ಗೆ ತುಂಬಾ ಕೃತಜ್ಞನಾಗಿದ್ದೇನೆ” ಎಂದಿದ್ದಾರೆ.
ನಿರ್ದೇಶಕ ರಮೇಶ್ ಇಂದಿರಾ ಮಾತನಾಡಿ, “ಅಯ್ಯನ ಮನೆ ಭಯ, ನಂಬಿಕೆ ಮತ್ತು ಕುಟುಂಬವನ್ನು ಪ್ರತಿಬಿಂಬಿಸುವ ಕಥೆ. ಇದು ಈ ರೀತಿಯ ಮೈಲಿಗಲ್ಲು ಸೃಷ್ಟಿಸಿರುವುದು ಖುಷಿಯ ವಿಷಯ. ನಾನು ಪ್ರತಿ ಫ್ರೇಮ್‌ನಲ್ಲೂ ಇಷ್ಟಪಟ್ಟು ಕೆಲಸ ಮಾಡಿದ್ದೇನೆ. ನನ್ನ ಅದ್ಭುತ ಪಾತ್ರವರ್ಗಕ್ಕೆ ನಾನು ಕೃತಜ್ಞನಾಗಿದ್ದೇನೆ: ಖುಷಿ, ಅಕ್ಷಯ, ಮಾನಸಿ ಮತ್ತು ಅದ್ಭುತ ತಂಡ. ZEE5 ಈ ರೀತಿಯ ಕಥೆಗಳಿಗೆ ಜೀವ ತುಂಬಲು ಸಹಾಯ ಮಾಡಿದೆ. ಅಯ್ಯನ ಮನೆ ಕೇವಲ ಆರಂಭ ಎಂದು ಹೇಳಿದ್ದಾರೆ.
‘ಅಯ್ಯನ ಮನೆ’ ಹೆಸರೇ ಸೂಚಿಸುವಂತೆ ನಿಗೂಢ ಕತೆ ಹೊಂದಿರುವ ಮಿನಿ ವೆಬ್ ಸರಣಿ. ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ನಡೆಯುವ ಕತೆ ಇದು. ಸೊಸೆಯಾಗಿ ಜಾಜಿ ಗಂಡನ ಮನೆಗೆ ಬಂದ ಬಳಿಕ ಅಲ್ಲಿ ನಡೆಯುವ ಸರಣಿ ಕೊಲೆಗಳು ಸ್ವತಃ ಜಾಜಿಗೆ ಅನುಮಾನ ಮೂಡಿಸುತ್ತವೆ. ಮನೆಯ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತದೆ. ಆ ಸರಣಿ ಕೊಲೆಗಳಿಗೆ ಕಾರಣ ಏನು? ಸರಣಿ ಕೊಲೆಗಳು ಅಂತ್ಯ ಹೇಗಾಗುತ್ತವೆ? ಎಂಬುದನ್ನು ‘ಅಯ್ಯನ ಮನೆ’ ಕತೆಯನ್ನು ಒಳಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ