
ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ. ಈಗಾಗಲೇ ಚಿತ್ರಮಂದಿರದಲ್ಲಿ ಎಂಜಾಯ್ ಮಾಡಿರುವ ಪ್ರೇಕ್ಷಕರು ಮತ್ತೊಮ್ಮೆ ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಬಯಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ (Kantara Chapter 1 OTT Release Date) ತಿಳಿಯಲು ಕಾದಿದ್ದ ಎಲ್ಲರಿಗೂ ಈಗ ಗುಡ್ ನ್ಯೂಸ್ ಸಿಕ್ಕಿದೆ. ಅಕ್ಟೋಬರ್ 31ರಂದು ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಈ ಬಗ್ಗೆ ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರೇ ಮುಖ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ. 2022ರಲ್ಲಿ ತೆರೆಕಂಡ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಂದಿದೆ. ರುಕ್ಮಿಣಿ ವಸಂತ್ ಅವರು ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಿಂದ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡಿದೆ. ಭಾರಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಈ ಚಿತ್ರಕ್ಕೆ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಇಂದಿಗೂ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಹಾಗಿರುವಾಗಲೇ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ.
ತುಳುನಾಡಿನ ದೈವದ ಕತೆಯನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಹೇಳಲಾಗಿದೆ. ರಿಷಬ್ ಶೆಟ್ಟಿ ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಗಮನ ಸೆಳೆದಿದೆ. ಜಯರಾಮ್, ಗುಲ್ಶನ್ ದೇವಯ್ಯ, ಪ್ರಕಾಶ್ ತುಮಿನಾಡು ಮುಂತಾದ ಕಲಾವಿದರ ಅಭಿನಯ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ; ಅಪರೂಪದ ವಿಡಿಯೋ
‘ಅಮೇಜಾನ್ ಪ್ರೈಂ ವಿಡಿಯೋ’ ಸಂಸ್ಥೆಯು ‘ಕಾಂತಾರ: ಚಾಪ್ಟರ್ 1’ ಚಿತ್ರದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ವರ್ಷನ್ ಒಟಿಟಿ ಪ್ರಸಾರ ಹಕ್ಕುಗಳನ್ನು ಖರೀದಿಸಿದೆ. ಈ ನಾಲ್ಕು ಭಾಷೆಗಳಲ್ಲಿ ಅಕ್ಟೋಬರ್ 31ರಿಂದ ಸಿನಿಮಾ ಪ್ರಸಾರ ಆಗಲಿದೆ. ಚಿತ್ರಮಂದಿರದಲ್ಲಿ ಸೂಪರ್ ಹಿಟ್ ಆದ ಈ ಚಿತ್ರಕ್ಕೆ ಒಟಿಟಿ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.