ಒಟಿಟಿ ಪ್ರಿಯರಿಗೆ ಹಬ್ಬ; ಒಂದೇ ದಿನ ಎರಡು ಸೂಪರ್ ಹಿಟ್ ಚಿತ್ರ, ಒಂದು ವೆಬ್ ಸೀರಿಸ್ ಒಟಿಟಿಗೆ
ಒಟಿಟಿ ಪ್ರಿಯರಿಗೆ ಈ ವಾರ ಹಬ್ಬ. ಅಕ್ಟೋಬರ್ 31 ರಂದು ಎರಡು ಸೂಪರ್ ಹಿಟ್ ಚಿತ್ರಗಳಾದ 'ಕಾಂತಾರ: ಚಾಪ್ಟರ್ 1' ಮತ್ತು 'ಲೋಕಃ: ಚಾಪ್ಟರ್ 1-ಚಂದ್ರ' ಒಟಿಟಿಗೆ ಲಗ್ಗೆ ಇಡುತ್ತಿವೆ. ಇದರ ಜೊತೆಗೆ, 'ಮಾರಿಗಲ್ಲು' ಎಂಬ ಹೊಸ ಕನ್ನಡ ವೆಬ್ ಸರಣಿಯೂ ಜೀ5 ಮೂಲಕ ಪ್ರಸಾರವಾಗಲಿದೆ. ಪ್ರೇಕ್ಷಕರು ಒಂದೇ ದಿನ ಹೊಸ ಸಿನಿಮಾಗಳು ಹಾಗೂ ಸರಣಿಗಳನ್ನು ಮನೆಯಲ್ಲೇ ಆನಂದಿಸಬಹುದು.

ಥಿಯೇಟರ್ನಲ್ಲಿ ಪ್ರತಿ ವಾರ ಎಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆಯೋ ಅದಕ್ಕಿಂತ ಹೆಚ್ಚಿನ ಸಿನಿಮಾ ಹಾಗೂ ವೆಬ್ ಸರಣಿಗಳು ಒಟಿಟಿಯಲ್ಲಿ (OTT) ರಿಲೀಸ್ ಆಗುತ್ತವೆ. ಪ್ರತಿ ವಾರ ಹೊಸ ಹೊಸ ಸರಣಿಗಳು ಬರುವುದರಿಂದ ವೀಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿರುತ್ತದೆ. ಕೆಲವು ವಾರ ಸಪ್ಪೆ ಎನಿಸಿದರೆ ಇನ್ನೂ ಕೆಲವು ವಾರ ಸಾಕಷ್ಟು ಸಿನಿಮಾಗಳು ಒಟ್ಟಾಗಿ ಬರುತ್ತವೆ. ಈ ವಾರ ಒಟಿಟಿ ಪ್ರಿಯರಿಗೆ ಸುಗ್ಗಿ. ಎರಡು ಸೂಪರ್ ಹಿಟ್ ಚಿತ್ರ ಹಾಗೂ ಒಂದು ವೆಬ್ ಸರಣಿ ಬಿಡುಗಡೆ ಕಾಣುತ್ತಿದೆ.
‘ಕಾಂತಾರ: ಚಾಪ್ಟರ್ 1’
ಅಕ್ಟೋಬರ್ 2ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿ ಸಾಕಷ್ಟು ಗಮನ ಸೆಳೆಯುತ್ತಿರುವ ಸಿನಿಮಾ ಎಂದರೆ ಅದು ‘ಕಾಂತಾರ: ಚಾಪ್ಟರ್ 1’. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುರುವ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿತ್ತು. ಅಕ್ಟೋಬರ್ 31ರಂದು ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಆಗಲಿದೆ. ಸದ್ಯ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಮಾತ್ರ ಸಿನಿಮಾ ಪ್ರಸಾರ ಕಾಣಲಿದೆ.
ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗಿ 50 ದಿನಗಳ ಬಳಿಕ ಒಟಿಟಿಗೆ ಬರುತ್ತವೆ. ಆದರೆ, ಕಾಂತಾರ ತಂಡ ಪ್ರೈಮ್ ಅವರ ಜೊತೆ ಬೇರೆಯದೇ ರೀತಿಯ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ, ಸಿನಿಮಾ ರಿಲೀಸ್ ಆದ 30 ದಿನಕ್ಕೆ ಒಟಿಟಿಗೆ ಕಾಲಿಡುತ್ತಿದೆ. ಇದರಿಂದ ಥಿಯೇಟರ್ ಕಲೆಕ್ಷನ್ ಕಡಿಮೆ ಆಗಬಹುದು.
‘ಲೋಕಃ: ಚಾಪ್ಟರ್ 1-ಚಂದ್ರ’
ಮಲಯಾಳಂನ ‘ಲೋಕಃ: ಚಾಪ್ಟರ್ 1-ಚಂದ್ರ’ ಸಿನಿಮಾ ರಿಲೀಸ್ ಆಗಿ ಹಲವು ವಾರಗಳು ಕಳೆದಿವೆ. ಈ ಚಿತ್ರ ಮಲಯಾಳಂನಲ್ಲಿ 300 ಕೋಟಿ ರೂಪಾಯಿ ಬಾಚಿಕೊಂಡಿದೆ. ಸೂಪರ್ ಹೀರೋ ಕಥೆಯನ್ನು ಚಿತ್ರ ಹೊಂದಿದೆ. ಕಲ್ಯಾಣಿ ಪ್ರಿಯದರ್ಶನ್ ಅವರು ಈ ಚಿತ್ರದಲ್ಲಿ ನಾಯಕಿ. ಅವರು ಸೂಪರ್ ಹೀರೋ ಪಾತ್ರ ಮಾಡಿದ್ದಾರೆ. ಈ ಚಿತ್ರ ಅಕ್ಟೋಬರ್ 31ರಂದು ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರ ಕಾಣಲಿದೆ. ಕನ್ನಡದಲ್ಲೂ ಸಿನಿಮಾ ಲಭ್ಯವಿದೆ. ಚಿತ್ರ ಕಥೆ ಬೆಂಗಳೂರಲ್ಲೇ ಸಾಗುತ್ತದೆ ಅನ್ನೋದು ವಿಶೇಷ.
ಇದನ್ನೂ ಓದಿ: ಒಟಿಟಿ ರಿಲೀಸ್ ದಿನಾಂಕ ಘೋಷಿಸಿದ ಬಳಿಕವೂ ಕೋಟಿ ಕೋಟಿ ಬಾಚಿದ ‘ಕಾಂತಾರ: ಚಾಪ್ಟರ್ 1’
‘ಮಾರಿಗಲ್ಲು’
ಕನ್ನಡದಲ್ಲಿ ವೆಬ್ ಸೀರಿಸ್ಗಳ ಸಂಖ್ಯೆ ಕಡಿಮೆ. ಹಾಗಿದ್ದರೂ, ಜೀ5 ಮೂಲಕ ಕೆಲವು ವೆಬ್ ಸೀರಿಸ್ಗಳು ಪ್ರಸಾರ ಕಾಣುತ್ತಿವೆ. ಈಗ ‘ಮಾರಿಗಲ್ಲು’ ಹೆಸರಿನ ವೆಬ್ ಸೀರಿಸ್ ಅಕ್ಟೋಬರ್ 31ರಂದು ಜೀ5 ಒಟಿಟಿ ಮೂಲಕ ಪ್ರದರ್ಶನಕ್ಕೆ ರೆಡಿ ಆಗಿದೆ. ಈ ಸರಣಿಯಲ್ಲಿ ರಂಗಾಯಣ ರಘು ಮೊದಲಾದವರು ನಟಿಸಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಅಂಶವನ್ನು ಹೊಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








