‘ಕಾಂತಾರ’ ಚಿತ್ರದ (Kantara Movie) ‘ವರಾಹ ರೂಪಂ..’ ಹಾಡು ವಿವಾದದಿಂದ ಸಮಸ್ಯೆ ಎದುರಿಸಿತ್ತು. ಕೇರಳದ ಸ್ಥಳೀಯ ನ್ಯಾಯಾಲಯ ಈ ಹಾಡನ್ನು ಪ್ರಸಾರ ಮಾಡದಂತೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ‘ಹೊಂಬಾಳೆ ಫಿಲ್ಮ್ಸ್’ (Hombale Films) ಕೇರಳ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಆದರೆ, ಇದನ್ನು ಹೈಕೋರ್ಟ್ ರದ್ದು ಮಾಡಿ ಆದೇಶ ನೀಡಿದೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ಕಾರಣದಿಂದ ಹಾಡಿನ ಟ್ಯೂನ್ ಬದಲಿಸಲಾಗಿದೆ.
‘ವರಾಹ ರೂಪಂ..’ ಹಾಡು ‘ಕಾಂತಾರ’ ಕ್ಲೈಮ್ಯಾಕ್ಸ್ನಲ್ಲಿ ಬರುತ್ತದೆ. ಈ ಸಾಂಗ್ ಸಾಕಷ್ಟು ಗಮನ ಸೆಳೆದಿತ್ತು. ಹಾಡನ್ನು ಕೇಳಿ ಎಲ್ಲರೂ ಥ್ರಿಲ್ ಆಗಿದ್ದರು. ಸಿನಿಮಾ ರಿಲೀಸ್ ಆದ ಕೆಲ ವಾರಗಳ ನಂತರದಲ್ಲಿ ‘ತೈಕ್ಕುಡಂ ಬ್ರಿಡ್ಜ್’ ಕೇಸ್ ದಾಖಲು ಮಾಡಿತ್ತು. ಕೋರ್ಟ್ನಲ್ಲಿ ಕೇಸ್ ಅವರ ಪರವಾಗಿ ಆಯಿತು. ಈ ಕಾರಣದಿಂದ ಎಲ್ಲಾ ಪ್ಲಾಟ್ಫಾರ್ಮ್ಗಳಿಂದ ಹಾಡನ್ನು ತೆಗೆಯಲಾಯಿತು. ಈಗ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಪ್ರೈಮ್ನಲ್ಲಿ ಪ್ರಸಾರಕಂಡ ವರ್ಷನ್ನಲ್ಲಿ ಹಾಡಿನ ಟೋನ್ ಬದಲಿಸಲಾಗಿದೆ.
‘ವರಾಹ ರೂಪಂ..’ ಹಾಡಿನ ಟೋನ್ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ಇದನ್ನು ಕೇಳಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ಹಾಡನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಹೊಸ ಹಾಡಿನ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಕೋರ್ಟ್ನಲ್ಲಿ ನಡೆಯುತ್ತಿರುವ ಕೇಸ್ ವಿಚಾರದಲ್ಲಿ ಹೊಂಬಾಳೆ ಫಿಲ್ಮ್ಸ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
‘ವರಾಹ ರೂಪಂ..’ ಹಾಡನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ಗಳಲ್ಲಿ ಅಪ್ಲೋಡ್ ಮಾಡಲಾಗಿತ್ತು. ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ನಿಂದ ಹಳೆಯ ಹಾಡನ್ನು ಡಿಲೀಟ್ ಮಾಡಲಾಗಿದೆ. ಹೊಸ ಹಾಡು ಯಾವಾಗ ಅಪ್ಲೋಡ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ವರಾಹ ರೂಪಂ..’ ವಿವಾದ: ಹೊಂಬಾಳೆಗೆ ಹಿನ್ನಡೆ; ಮೇಲ್ಮನವಿ ಅರ್ಜಿ ವಜಾ ಮಾಡಿದ ಕೇರಳ ಹೈಕೋರ್ಟ್
ಹೈಕೋರ್ಟ್ ಹೇಳಿದ್ದೇನು?
‘ಅಧೀನ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ನಾವು ಮಧ್ಯ ಪ್ರವೇಶಿಸಬಾರದು. ಹಾಗೆ ಮಾಡಿದರೆ ಅಧೀನ ನ್ಯಾಯಾಲಯಗಳು ಬಲಗುಂದಿದಂತೆ ಆಗುತ್ತವೆ. ಅಧೀನ ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಿದರೆ ಅರ್ಜಿದಾರರ ಶಾಸನಬದ್ಧ ಹಕ್ಕುಗಳಿಗೆ ಚ್ಯುತಿಯಾಗುತ್ತದೆ. ಎಲ್ಲಾ ಮೇಲ್ಮನವಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಕೋರ್ಟ್ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಲಿದೆ’ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.