‘ಅನಿಮಲ್’ ಸಿನಿಮಾವನ್ನು ಹಿಂದಿಕ್ಕಿದ ಸಣ್ಣ ಬಜೆಟ್ ಸಿನಿಮಾ ‘ಲಾಪತಾ ಲೇಡೀಸ್’
ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಎನಿಸಿಕೊಂಡ ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾವನ್ನು ನಾಲ್ಕು ಕೋಟಿ ಬಜೆಟ್ನ ಸಣ್ಣ ಸಿನಿಮಾ ಹಿಂದಿಕ್ಕಿದೆ.
ಬಜೆಟ್ ದೊಡ್ಡದಿರಲಿ, ಸಣ್ಣದಿರಲಿ, ಸ್ಟಾರ್ ನಟರಿರಲಿ, ಹೊಸಬರ ಸಿನಿಮಾ ಆಗಿರಲಿ, ಕಂಟೆಂಟ್ ಚೆನ್ನಾಗಿದ್ದರೆ ಒಂದಲ್ಲ ಒಂದು ವೇದಿಕೆಯಲ್ಲಿ ಸಿನಿಮಾ ಜನರನ್ನು ತಲುಪುತ್ತದೆ ಹಿಟ್ ಎನಿಸಿಕೊಂಡೇ ತೀರುತ್ತದೆ. ಇದಕ್ಕೆ ತಾಜಾ ಉದಾಹರಣೆ ಹಿಂದಿಯ ‘ಲಾಪತಾ ಲೇಡೀಸ್’. ಕೇವಲ ನಾಲ್ಕು ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿರುವ ಈ ಸಿನಿಮಾ ನೂರಾರು ಕೋಟಿ ಬಜೆಟ್ನ ಸ್ಟಾರ್ ನಟರ ಸಿನಿಮಾ ಆಗಿರುವ ‘ಅನಿಮಲ್’ (Animal) ಅನ್ನು ಸಹ ಹಿಂದಿಕ್ಕಿದೆ. ಯಾವುದೇ ಸ್ಟಾರ್ ನಟರಿಲ್ಲದ, ಸರಳವಾದ ಕತೆಯನ್ನಷ್ಟೆ ಹೊಂದಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಬ್ಲಾಕ್ ಬಸ್ಟರ್ ಸಿನಿಮಾ ‘ಅನಿಮಲ್’ ಅನ್ನು ಹಿಂದಿಕ್ಕಿದೆ, ಬಾಕ್ಸ್ ಆಫೀಸ್ನಲ್ಲಲ್ಲ ಬದಲಿಗೆ ಒಟಿಟಿಯಲ್ಲಿ!
ಮಾರ್ಚ್ 1ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ಲಾಪತಾ ಲೇಡೀಸ್’ ಸಿನಿಮಾ ಚಿತ್ರಮಂದಿರದಲ್ಲಿ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಆದರೆ ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕ ಭಾರಿ ಯಶಸ್ಸು ಗಳಿಸಿಕೊಂಡಿತು. ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆದ ‘ಲಾಪತಾ ಲೇಡೀಸ್’ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದ್ದಾರೆ. ಈ ಮುಂಚೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದ್ದ ‘ಅನಿಮಲ್’ ಸಿನಿಮಾದ ದಾಖಲೆಯನ್ನು ಮುರಿದಿದೆ ‘ಲಾಪತಾ ಲೇಡೀಸ್’.
ಆಮಿರ್ ಖಾನ್ ನಿರ್ಮಾಣ ಮಾಡಿರುವ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಒಂದು ತಿಂಗಳಿಗೆ 13.8 ಮಿಲಿಯನ್ ಅಂದರೆ 1.38 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆಗಿದ್ದ ‘ಅನಿಮಲ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ 1.36 ಕೋಟಿ ವೀಕ್ಷಣೆ ಕಂಡಿತ್ತು. ಇದೀಗ ‘ಅನಿಮಲ್’ ದಾಖಲೆಯನ್ನು ಪುಡಿಗಟ್ಟಿದೆ ‘ಲಾಪತಾ ಲೇಡೀಸ್’ ಸಿನಿಮಾ. ಈ ಖುಷಿಯ ವಿಷಯವನ್ನು ಸಿನಿಮಾದ ನಿರ್ದೇಶಕಿ ಕಿರಣ್ ರಾವ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡ ‘ಲಾಪತಾ ಲೇಡೀಸ್’ ನಿರ್ದೇಶಕಿ ಕಿರಣ್ ರಾವ್
ವಿಶೇಷವೆಂದರೆ, ‘ಲಾಪತಾ ಲೇಡೀಸ್’ ಸಿನಿಮಾದ ಬಿಡುಗಡೆ ಸಮಯದಲ್ಲಿ ನಿರ್ದೇಶಕಿ ಕಿರಣ್ ರಾವ್, ‘ಅನಿಮಲ್’ ಸಿನಿಮಾವನ್ನು ಟೀಕಿಸಿ ಮಾತನಾಡಿದ್ದರು. ‘ಅನಿಮಲ್’ ಸಿನಿಮಾ ಸ್ತ್ರೀ ವಿರೋಧಿ, ಪುರುಷ ಅಹಂಕಾರವನ್ನು ಮೆರೆಸುವ ಸಿನಿಮಾ ಎಂದು ಜರಿದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ‘ಆಮಿರ್ ಖಾನ್ರ ‘ಏ ಕ್ಯಾ ಬೋಲ್ತಿ ತೂ’ ಹಾಡು ಪ್ರಸ್ತಾಪಿಸಿ ಕೆಣಕಿದ್ದರು. ಈಗ ಕಿರಣ್ ರಾವ್ರ ಸಿನಿಮಾ, ಅವರು ವಿರೋಧಿಸಿದ್ದ ‘ಅನಿಮಲ್’ ಸಿನಿಮಾವನ್ನು ಹಿಂದಿಕ್ಕಿ, ಹೆಚ್ಚು ವೀಕ್ಷಣೆ ಕಂಡಿದೆ.
‘ಲಾಪತಾ ಲೇಡೀಸ್’ ಕಳೆದು ಹೋಗುವ ಇಬ್ಬರು ವಧುಗಳ ಬಗೆಗಿನ ಕತೆ. ವಧು ಕಳೆದುಹೋಗಿರುವ ಕತೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳನ್ನು ನಿರ್ದೇಶಕಿ ಕಿರಣ್ ರಾವ್ ಹೇಳಿದ್ದಾರೆ. ಸಿನಿಮಾದಲ್ಲಿ ನಿತಾಂಶಿ ಘೋಯಲ್, ಪ್ರತಿಭಾ ರಂತಾ, ಸ್ಪರ್ಷ್ ಶ್ರೀವತ್ಸ, ಚಯ್ಯಾ ಕದಮ್ ಅಂಥಹಾ ಹೊಸ ನಟರು ನಟಿಸಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ರವಿ ಕಿಶನ್ ನಟಿಸಿದ್ದಾರೆ. ಸಿನಿಮಾಕ್ಕೆ ಆಮಿರ್ ಖಾನ್ ಬಂಡವಾಳ ಹೂಡಿದ್ದಾರೆ. ನಾಲ್ಕು ಕೋಟಿ ಬಜೆಟ್ನ ಈ ಸಿನಿಮಾ ಚಿತ್ರಮಂದಿರದಲ್ಲಿ 21 ಕೋಟಿ ಗಳಿಸಿತ್ತು. ಈಗ ನೆಟ್ಫ್ಲಿಕ್ಸ್ ಮೂಲಕ ದೊಡ್ಡ ಸಂಖ್ಯೆಯ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ