ಲವ್ ಜಿಹಾದ್ ಆರೋಪ ಹೊತ್ತ ‘ಅನ್ನಪೂರ್ಣಿ’ ಸಿನಿಮಾ ಮತ್ತೆ ಒಟಿಟಿಯಲ್ಲಿ ಲಭ್ಯ; ಆದರೆ ಒಂದು ಟ್ವಿಸ್ಟ್
2023ರಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಅನ್ನಪೂರ್ಣಿ’ ಸಿನಿಮಾವನ್ನು ಒಟಿಟಿಯಿಂದ ತೆಗೆದುಹಾಕಲಾಗಿತ್ತು. ಆದರೆ ಈಗ ಮತ್ತೆ ಒಟಿಟಿಯಲ್ಲಿ ಈ ಚಿತ್ರದ ವೀಕ್ಷಣೆಗೆ ಅವಕಾಶ ಸಿಗುತ್ತಿದೆ. ನಯನತಾರಾ, ಅಚ್ಯುತ್ ಕುಮಾರ್, ಸತ್ಯರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೆಟ್ಫ್ಲಿಕ್ಸ್ ಒಟಿಟಿಯಲ್ಲಿಈ ಚಿತ್ರ ಮರುಬಿಡುಗಡೆ ಆಗುತ್ತಿದೆ.
ನಟಿ ನಯನತಾರಾ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕೆಲವು ಸಿನಿಮಾಗಳು ವಿವಾದಕ್ಕೆ ಒಳಗಾಗಿದ್ದೂ ಉಂಟು. ನಯನತಾರಾ ನಟನೆಯ ತಮಿಳಿನ ‘ಅನ್ನಪೂರ್ಣಿ’ ಸಿನಿಮಾ 2023ರ ಡಿಸೆಂಬರ್ನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತು. ಆದರೆ ಆ ಚಿತ್ರದಲ್ಲಿನ ಕೆಲವು ದೃಶ್ಯಗಳು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿವೆ ಎಂಬ ಟೀಕೆ ಕೂಡ ಕೇಳಿಬಂದಿತ್ತು. ಆದ್ದರಿಂದ ಒಟಿಟಿ ಪ್ಲಾಟ್ಫಾರ್ಮ್ನಿಂದ ‘ಅನ್ನಪೂರ್ಣಿ’ ಸಿನಿಮಾವನ್ನು ತೆಗೆಯಲಾಗಿತ್ತು. ಈಗ ಮತ್ತೆ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಆದರೆ ಒಂದು ಟ್ವಿಸ್ಟ್ ಇದೆ.
‘ಅನ್ನಪೂರ್ಣಿ’ ಸಿನಿಮಾದ ಶೀರ್ಷಿಕೆಯೇ ಸೂಚಿಸುವಂತೆ ಇದರಲ್ಲಿ ಅಡುಗೆಯ ಕುರಿತಾದ ಕಹಾನಿ ಇದೆ. ‘ದಿ ಗಾಡೆಸ್ ಆಫ್ ಫುಡ್’ ಎಂಬ ಟ್ಯಾಗ್ಲೈನ್ ಕೂಡ ಈ ಸಿನಿಮಾಗೆ ಇದೆ. ಈ ಚಿತ್ರದಲ್ಲಿ ಲವ್ ಜಿಹಾದ್ನ ಅಂಶಗಳು ಇವೆ ಎಂದು ಕೆಲವರು ಆರೋಪಿಸಿದ್ದರಿಂದ ನಿರ್ಮಾಪಕರು ಕ್ಷಮೆ ಕೇಳಿದ್ದರು. ಅಲ್ಲದೇ, ಕೆಲವು ಬದಲಾವಣೆ ಮಾಡುವುದಾಗಿ ತಿಳಿಸಿದ್ದರು.
ಈಗ ನೆಟ್ಫ್ಲಿಕ್ಸ್ನಲ್ಲಿ ಮತ್ತೆ ‘ಅನ್ನಪೂರ್ಣಿ’ ಸಿನಿಮಾದ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಆಗಸ್ಟ್ 9ರಿಂದ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗುತ್ತಿದೆ. ಟ್ವಿಸ್ಟ್ ಏನೆಂದರೆ, ಭಾರತದಲ್ಲಿ ಇದು ಪ್ರಸಾರ ಆಗುವುದಿಲ್ಲ! ಇನ್ನುಳಿದ ದೇಶಗಳಲ್ಲಿ ‘ಅನ್ನಪೂರ್ಣಿ’ ಚಿತ್ರವನ್ನು ವೀಕ್ಷಿಸಬಹುದು. ಈ ಬಾರಿ ಚಿತ್ರತಂಡದವರು ಏನಾದರೂ ಬದಲಾವಣೆ ಮಾಡಿದ್ದಾರಾ ಇಲ್ಲವಾ ಎಂಬುದು ಆಗಸ್ಟ್ 9ರಂದು ತಿಳಿಯಲಿದೆ.
2023ರಲ್ಲಿ ‘ಅನ್ನಪೂರ್ಣಿ’ ಸಿನಿಮಾ ವಿವಾದಕ್ಕೆ ಒಳಗಾದಾಗ ನಟಿ ನಯನತಾರಾ ಅವರು ಬೇಸರ ವ್ಯಕ್ತಪಡಿಸಿದ್ದರು. ಜನರಿಗೆ ಸ್ಫೂರ್ತಿ ನೀಡುವುದು ಈ ಸಿನಿಮಾದ ಉದ್ದೇಶವೇ ಹೊರತು ಯಾರಿಗೂ ನೋವುಂಟು ಮಾಡುವುದಲ್ಲ ಎಂದು ಅವರು ಹೇಳಿದ್ದರು. ನಿಲೇಶ್ ಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕನ್ನಡದ ಖ್ಯಾತ ನಟ ಅಚ್ಯುತ್ ಕುಮಾರ್ ಅವರು ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಶ್ರೀರಾಮನಿಗೆ ಅಪಮಾನ ಆರೋಪ: ನಯನತಾರಾ ವಿರುದ್ಧ ಪ್ರಕರಣ ದಾಖಲು
ಚಿತ್ರರಂಗದಲ್ಲಿ ನಯನತಾರಾ ಅವರಿಗೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಅವರು ಕಳೆದ ವರ್ಷ ‘ಜವಾನ್’ ಚಿತ್ರದ ಮೂಲಕ ಬಾಲಿವುಡ್ಗೂ ಕಾಲಿಟ್ಟು ಭರ್ಜರಿ ಗೆಲುವು ಪಡೆದರು. ಈಗ ಹಲವಾರು ಸಿನಿಮಾಗಳು ಅವರ ಕೈಯಲ್ಲಿ ಇವೆ. ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲೂ ನಯನತಾರಾ ಅಭಿನಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:38 pm, Wed, 7 August 24