ನೆಟ್ಫ್ಲಿಕ್ಸ್ನಲ್ಲಿ ಕಾಡುಗಳ್ಳ: ‘ದಿ ಹಂಟ್ ಫಾರ್ ವೀರಪ್ಪನ್’ ಟೀಸರ್ ಬಿಡುಗಡೆ, ಸ್ಟ್ರೀಮ್ ಯಾವಾಗ?
Veerappan: ಈಗಾಗಲೇ ಹಲವು ಸಿನಿಮಾಗಳು ವೀರಪ್ಪನ್ ಬಗ್ಗೆ ಬಂದಿವೆ. ಇದೀಗ ವೀರಪ್ಪನ್ ಕುರಿತಾದ ಡಾಕ್ಯುಮೆಂಟರಿಯೊಂದು ಬಿಡುಗಡೆಗೆ ರೆಡಿಯಾಗಿದೆ. ನೆಟ್ಫ್ಲಿಕ್ಸ್ನಲ್ಲಿ ಟೀಸರ್ ಬಿಡುಗಡೆ ಆಗಿದೆ.
ಎಷ್ಟು ಹೇಳಿದರೂ ಮುಗಿಯದು ಕಾಡುಗಳ್ಳ ವೀರಪ್ಪನ್ (Veerappan) ಕತೆ. ವೀರಪ್ಪನ್ ಬಗ್ಗೆ ಈಗಾಗಲೇ ಹಲವು ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಒಂದೊಂದು ಸಿನಿಮಾಗಳು ಒಂದೊಂದು ರೀತಿಯಲ್ಲಿ ವೀರಪ್ಪನ್ ಕತೆ ಹೇಳಿವೆ. ಪ್ರತಿ ಬಾರಿಯೂ ಜನ ವೀರಪ್ಪನ್ ಕುರಿತು ತಿಳಿಯಲು ಸಿನಿಮಾ ನೋಡಿ ಗೆಲ್ಲಿಸಿದ್ದಾರೆ. ವೀರಪ್ಪನ್ಗೆ ಇರುವ ಈ (ಕು)ಖ್ಯಾತಿಯಿಂದಲೇ ನೆಟ್ಫ್ಲಿಕ್ಸ್ (Netflix) ಸಹ ವೀರಪ್ಪನ್ ಅನ್ನು ತನ್ನ ವೇದಿಕೆ ತಂದಿದೆ. ವೀರಪ್ಪನ್ ಕುರಿತು ಡಾಕ್ಯುಮೆಂಟರಿಯನ್ನು ನೆಟ್ಫ್ಲಿಕ್ಸ್ ನಿರ್ಮಿಸಿದ್ದು ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಿದೆ.
ಕರ್ನಾಟಕ ಹಾಗೂ ತಮಿಳುನಾಡು ಅರಣ್ಯ ಪ್ರದೇಶ, ಅಲ್ಲಿನ ನಿವಾಸಿಗಳು, ಆಚಾರಗಳು, ಅಲ್ಲಿನ ಕತೆಗಳ ಬಗ್ಗೆ ನೆಟ್ಫ್ಲಿಕ್ಸ್ಗೆ ವಿಶೇಷ ಆಸಕ್ತಿ ಇದ್ದಂತಿದೆ. ಆಸ್ಕರ್ ಪಡೆದ ಭಾರತದ ಡಾಕ್ಯುಮೆಂಟರಿ ‘ಎಲಿಫೆಂಟ್ ವಿಸ್ಪರ್’ ಸಹ ಅದೇ ಭಾಗದ ಕತೆಯನ್ನು ಹೊಂದಿತ್ತು. ಈಗ ಕರ್ನಾಟಕ, ತಮಿಳುನಾಡು ಗಡಿಗಳ ಅರಣ್ಯದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ರಾಜಾರೋಷದಿಂದ ಮೆರೆದ ಕಾಡುಗಳ್ಳನ ಕತೆಯನ್ನು ಡಾಕ್ಯುಮೆಂಟರಿ ನಿರ್ಮಾಣಕ್ಕೆ ಆಯ್ದುಕೊಂಡಿದೆ.
ಇಂದಷ್ಟೆ (ಜುಲೈ 27) ನೆಟ್ಫ್ಲಿಕ್ಸ್ ವೀರಪ್ಪನ್ ಕುರಿತಾದ ‘ದಿ ಹಂಟ್ ಫಾರ್ ವೀರಪ್ಪನ್’ ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಿದೆ. ಟೀಸರ್ನಲ್ಲಿನ ಹಿನ್ನೆಲೆ ಧ್ವನಿ, ”ಆಧುನಿಕ ಜಗತ್ತು ಈ ರೀತಿಯ ಒಬ್ಬ ಅಪರಾಧಿಯನ್ನು ನೋಡೇ ಇಲ್ಲ. ವೀರಪ್ಪನ್ನಂಥಹಾ ಒಬ್ಬ ವ್ಯಕ್ತಿ ಅಥವಾ ಅಪರಾಧಿ ಭೂಮಿಯ ಮೇಲಿಲ್ಲ ಎಂದಿದೆ. ‘ಆತ ಎರಡು ರಾಜ್ಯಗಳಿಂದ ಹಣ ಸುಲಿಗೆ ಮಾಡುತ್ತಿದ್ದ. ಅವನದ್ದು ಭಯೋತ್ಪಾದನೆ ಅಲ್ಲ, ದಂಗೆ ಅಲ್ಲ. ‘ವೀರಪ್ಪನ ಮಾದರಿ’ ಎಂಬ ಪ್ರತ್ಯೇಕ ಮಾದರಿಯಿಂದಲೇ ಅವನ ಕುಕೃತ್ಯಗಳನ್ನು ಗುರುತಿಸಬೇಕು” ಎಂದಿದೆ.
ಇದನ್ನೂ ಓದಿ: Netflix: ನೆಟ್ಫ್ಲಿಕ್ಸ್ನಲ್ಲಿ ಖಾಲಿ ಇದೆ ಕೆಲಸ: ಸಂಬಳ 7.38 ಕೋಟಿ
‘ದಿ ಹಂಟ್ ಫಾರ್ ವೀರಪ್ಪನ್’ ಡಾಕ್ಯುಮೆಂಟರಿ ಆಗಿದ್ದು ನಿಜವಾದ ವ್ಯಕ್ತಿಗಳು, ವಿಡಿಯೋಗಳು, ಸ್ಥಳಗಳು, ದಾಖಲೆಗಳನ್ನು ಡಾಕ್ಯುಮೆಂಟರಿಯಲ್ಲಿ ತೋರಿಸಲಾಗುತ್ತದೆ. ವೀರಪ್ಪನ್ ಕಾರ್ಯಾಚಾರಣೆಯಲ್ಲಿ ಭಾಗಿಯಾಗಿದ್ದ ಕರ್ನಾಟಕದ ಹಾಗೂ ತಮಿಳುನಾಡಿನ ಅಧಿಕಾರಿಗಳ ಸಂದರ್ಶನಗಳು, ಹೇಳಿಕೆಗಳು ಸಹ ಡಾಕ್ಯುಮೆಂಟರಿಯಲ್ಲಿ ದಾಖಲಾಗುವ ಸಾಧ್ಯತೆ ಇದೆ. ಈಗ ಬಿಡುಗಡೆ ಮಾಡಿರುವ ಟೀಸರ್ನಲ್ಲಿ ಲಾಲ್ ಕೃಷ್ಣ ಅಡ್ವಾಣಿ ವೀರಪ್ಪನ್ ಬಗ್ಗೆ ಮಾತನಾಡಿರುವ ದೃಶ್ಯದ ತುಣುಕು ಸೇರಿದಂತೆ ವೀರಪ್ಪನ್ರ ಹಲವು ವಿಡಿಯೋ ದೃಶ್ಯಗಳು ಸಹ ಇವೆ.
The journey from a smuggler to a legendary bandit, and the infamous chase that left the whole country watching.
Catch the #TheHuntForVeerappan, premieres 4th August in English, Hindi, Tamil, Telugu, Kannada and Malayalam, only on Netflix. pic.twitter.com/D8J35HufPb
— Netflix India (@NetflixIndia) July 27, 2023
ವೀರಪ್ಪನ್ ನೆನೆದರೆ ಕನ್ನಡಿಗರಿಗೆ ಮೊದಲು ನೆನಪಾಗುವುದು ಡಾ ರಾಜ್ಕುಮಾರ್ ಅಪಹರಣ. 108 ದಿನಗಳ ಕಾಲ ರಾಜ್ಕುಮಾರ್ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವೀರಪ್ಪನ್ ವಿದೇಶಗಳಲ್ಲಿಯೂ ಸುದ್ದಿಯಾಗಿಬಿಟ್ಟಿದ್ದ. ಆ ವಿಷಯ, ವಿಡಿಯೋಗಳು ಸಹ ಡಾಕ್ಯುಮೆಂಟರಿಯಲ್ಲಿ ಇರಲಿವೆ ಎಂಬುದು ಸುಲಭದ ಊಹೆ. ವೀರಪ್ಪನ್ ಬಗ್ಗೆ ಈ ಹಿಂದೆ ಕೆಲವಾರು ಸಿನಿಮಾಗಳು ಬಂದಿವೆ. ಆ ಸಿನಿಮಾಗಳು ಹೇಳದೆ ಉಳಿಸಿದ್ದ ಹಲವು ಘಟನೆಗಳನ್ನು ಈ ಡಾಕ್ಯುಮೆಂಟರಿ ಹೊರಗೆ ತರುತ್ತದೆಯೇ ನೋಡಬೇಕು. ಡಾಕ್ಯುಮೆಂಟರಿ ಆಗಸ್ಟ್ 4ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಂ ಆಗಲಿದೆ.
1991 ರಲ್ಲಿ ಕನ್ನಡದಲ್ಲಿ ‘ವೀರಪ್ಪನ್’ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು, ವೀರಪ್ಪನ್ ಆಗಿ ನಟ ದೇವರಾಜ್ ನಟಿಸಿದ್ದರು. ಆ ಬಳಿಕ ಕಿಶೋರ್ ವೀರಪ್ಪನ್ ಆಗಿ ನಟಿಸಿದ್ದ ‘ಅಟ್ಟಹಾಸ’ 2012 ರಲ್ಲಿ ಬಿಡುಗಡೆ ಆಯ್ತು. ಅದಾದ ಬಳಿಕ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿ, ಶಿವರಾಜ್ ಕುಮಾರ್ ನಟಿಸಿದ್ದ ‘ಕಿಲ್ಲಿಂಗ್ ವೀರಪ್ಪನ್’ ಬಿಡುಗಡೆ ಆಗಿ ಹಿಟ್ ಆಯ್ತು. ತಮಿಳಿನಲ್ಲಿ ವೀರಪ್ಪನ್ ಹೆಸರಿನಲ್ಲಿ ಟಿವಿ ಧಾರಾವಾಹಿ ಸಹ ಪ್ರಸಾರವಾಗಿದೆ. ಈ ವರೆಗೆ ಹಲವರು ವೀರಪ್ಪನ್ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಇದೀಗ ನೆಟ್ಫ್ಲಿಕ್ಸ್ ಮೊದಲ ಬಾರಿಗೆ ಡಾಕ್ಯುಮೆಂಟರಿ ಬಿಡುಗಡೆ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Thu, 27 July 23