ದೇಶಾದ್ಯಂತ ಧೂಳ್ಳೆಬ್ಬಿಸಿದ ‘ಕಾಂತಾರ’ (Kantara) ಚಿತ್ರದ ಬಗ್ಗೆ ದಿನದಿನವೂ ಹೊಸ ಹೊಸ ಅಪ್ಡೇಟ್ಸ್ ಕೇಳಿಬರುತ್ತಿವೆ. ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದ್ದರೂ ಈ ಸಿನಿಮಾ ಈಗಲೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ (Rishab Shetty) ಅವರಿಗೆ ಮೆಚ್ಚುಗೆಯ ಮಳೆ ಸುರಿಸಲಾಗುತ್ತಿದೆ. ತುಳುನಾಡಿನ ಸಂಪ್ರದಾಯವನ್ನು ಸಾರುವ ಈ ಚಿತ್ರಕ್ಕೆ ಇಡೀ ದೇಶವೇ ಮನಸೋತಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ರಜನಿಕಾಂತ್, ಕಂಗನಾ ರಣಾವತ್, ವಿವೇಕ್ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರವನ್ನು ಕೊಂಡಾಡಿದ್ದಾರೆ. ಇಷ್ಟೆಲ್ಲ ಪ್ರಶಂಸೆ ಪಡೆದ ಸಿನಿಮಾವನ್ನು ಮನೆಯಲ್ಲೇ ಕುಳಿತು ಎಂಜಾಯ್ ಮಾಡಬೇಕು ಎಂಬ ಆಸೆ ಎಲ್ಲ ಪ್ರೇಕ್ಷರಿಗೂ ಇದೆ. ಈಗಾಗಲೇ ಚಿತ್ರಮಂದಿರದಲ್ಲಿ ನೋಡಿರುವವರು ಕೂಡ ಈ ಚಿತ್ರದ ಒಟಿಟಿ ರಿಲೀಸ್ಗಾಗಿ ಕಾದಿದ್ದಾರೆ. ಯಾವ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ‘ಕಾಂತಾರ’ ವೀಕ್ಷಣೆಗೆ ಲಭ್ಯವಾಗಲಿದೆ? ಅದಕ್ಕೆ ಉತ್ತರ ಇಲ್ಲಿದೆ. ‘ಅಮೇಜಾನ್ ಪ್ರೈಮ್ ವಿಡಿಯೋ’ (Amazon Prime Video) ಮೂಲಕ ಈ ಚಿತ್ರ ಪ್ರಸಾರ ಆಗಲಿದೆ.
ದಕ್ಷಿಣ ಭಾರತದಲ್ಲಿ ‘ಅಮೇಜಾನ್ ಪ್ರೈಂ ವಿಡಿಯೋ’ ಹೆಚ್ಚು ಪ್ರಾಬಲ್ಯ ಹೊಂದಿದೆ. ನೆಟ್ಫ್ಲಿಕ್ಸ್ಗೆ ಹೋಲಿಸಿದರೆ ದಕ್ಷಿಣದ ಸಿನಿಮಾಗಳು ಹೆಚ್ಚಾಗಿ ಸಿಗುವುದು ಅಮೇಜಾನ್ ಪ್ರೈಂ ವಿಡಿಯೋದಲ್ಲಿ. ಹಾಗಾಗಿ ದಕ್ಷಿಣದ ಮಂದಿ ಹೆಚ್ಚಾಗಿ ಈ ಒಟಿಟಿಗೆ ಚಂದಾದಾರರಾಗಿದ್ದಾರೆ. ‘ಕಾಂತಾರ’ ಕೂಡ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕವೇ ವೀಕ್ಷಣೆಗೆ ಲಭ್ಯವಾಗಲಿದೆ ಎಂಬ ಸುದ್ದಿ ಕೇಳಿ ಸೌತ್ ಪ್ರೇಕ್ಷಕರು ಖುಷಿಪಟ್ಟಿದ್ದಾರೆ.
‘ಕಾಂತಾರ’ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಒಟಿಟಿ ವ್ಯವಹಾರ ನಡೆದಿತ್ತು. ಆದರೆ ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಬೇರೆ ಭಾಷೆಗಳಿಗೆ ಡಬ್ ಮಾಡುವ ಪ್ಲ್ಯಾನ್ ಕೂಡ ಇರಲಿಲ್ಲ. ಆದರೆ ನಂತರದಲ್ಲಿ ಎಲ್ಲವೂ ಬದಲಾಯಿತು. ತಮಿಳು, ಮಲಯಾಳಂ, ಹಿಂದಿ, ತೆಲುಗು ಭಾಷೆಗಳಿಗೆ ಡಬ್ ಆಗಿ ಈ ಚಿತ್ರ ಸಖತ್ ಕಮಾಯಿ ಮಾಡಿತು.
ಈಗಲೂ ಅನೇಕ ಚಿತ್ರಮಂದಿರದಲ್ಲಿ ‘ಕಾಂತಾರ’ ಉತ್ತಮ ರೀತಿಯಲ್ಲಿ ಪ್ರದರ್ಶನ ಕಾಣುತ್ತಿರುವುದರಿಂದ ಒಟಿಟಿ ರಿಲೀಸ್ ಕೊಂಚ ತಡವಾಗಿದೆ. ಹಾಗಿದ್ದರೂ ಕೂಡ ನವೆಂಬರ್ ತಿಂಗಳಲ್ಲೇ ಈ ಚಿತ್ರ ಒಟಿಟಿಗೆ ಕಾಲಿಡಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
‘ಕೆಜಿಎಫ್: ಚಾಪ್ಟರ್ 2’ ನಂತರ ‘ಕಾಂತಾರ’ ಸಿನಿಮಾದಿಂದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಸಖತ್ ಲಾಭ ಆಗಿದೆ. ರಿಷಬ್ ಶೆಟ್ಟಿ ಮಾಡಲಿರುವ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚುವಂತಾಗಿದೆ. ‘ಕಾಂತಾರ 2’ ಬರಲಿ ಎಂದು ಕೂಡ ಅನೇಕರು ಆಸೆ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Thu, 3 November 22