RRR ಸಿನಿಮಾ ಕುರಿತು ಬರಲಿದೆ ಡಾಕ್ಯುಮೆಂಟರಿ, ಹೊರಗೆ ಬರಲಿವೆ ಹಲವು ವಿಷಯ

RRR: Behind and Beyond: ‘RRR: ಬಿಹೈಂಡ್ ಆಂಡ್ ಬಿಯಾಂಡ್’ ಹೆಸರಿನ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಇದೇ ತಿಂಗಳು ಬಿಡುಗಡೆ ಆಗಲಿದೆ. ಈಗಾಗಲೇ ಡಾಕ್ಯುಮೆಂಟರಿಯ ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾ ಟೇಪ್​ಗಳ ನಡುವೆ ರಾಜಮೌಳಿ ಕುಳಿತಿರುವ ಚಿತ್ರವನ್ನು ಪೋಸ್ಟರ್​ನಲ್ಲಿ ಬಳಸಲಾಗಿದೆ. RRR ಸಿನಿಮಾದ ಹಲವು ವಿಷಯಗಳು ಡಾಕ್ಯುಮೆಂಟರಿಯಲ್ಲಿ ಬೆಳಕಿಗೆ ಬರಲಿವೆ.

RRR ಸಿನಿಮಾ ಕುರಿತು ಬರಲಿದೆ ಡಾಕ್ಯುಮೆಂಟರಿ, ಹೊರಗೆ ಬರಲಿವೆ ಹಲವು ವಿಷಯ
ಆರ್​ಆರ್​ಆರ್ ಸಿನಿಮಾ
Follow us
ಮಂಜುನಾಥ ಸಿ.
|

Updated on:Dec 12, 2024 | 11:40 AM

ರಾಜಮೌಳಿ ನಿರ್ದೇಶಿಸಿ ಜೂ ಎನ್​ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ‘RRR’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತು. ಬಾಕ್ಸ್ ಆಫೀಸ್ ಯಶಸ್ಸಿನ ಜೊತೆಗೆ ಆಸ್ಕರ್ ಅಂಗಳಕ್ಕೂ ಹೋಗಿ, ‘ನಾಟು ನಾಟು’ ಹಾಡಿಗೆ ಆಸ್ಕರ್ ಸಹ ಗೆದ್ದಿತು. ‘RRR’ ಸಿನಿಮಾ ಮೂಲಕ ಮತ್ತೊಮ್ಮೆ ವಿಶ್ವದ ಚಿತ್ರರಂಗ ಭಾರತದ ಕಡೆಗೆ ತಿರುಗಿ ನೋಡುವಂತಾಯ್ತು. ಜೇಮ್ಸ್ ಕ್ಯಾಮರನ್, ಸ್ಟಿವನ್ ಸ್ಪೀಪ್​ಬರ್ಗ್ ಅಂಥಹಾ ದಿಗ್ಗಜ ನಿರ್ದೇಶಕರು ‘RRR’ ಸಿನಿಮಾವನ್ನು ಮೆಚ್ಚಿ ಕೊಂಡಾಡಿದರು. ವಿದೇಶದಲ್ಲಿ ಈ ಸಿನಿಮಾ ಭಾರಿ ಯಶಸ್ಸು ಗಳಿಸಿತು. ಭಾರತ ಚಿತ್ರರಂಗದ ಪಾಲಿಗೆ ಅತ್ಯಂತ ಪ್ರಮುಖ ಸಿನಿಮಾ ಆಯ್ತು ‘RRR’ ಇದೀಗ ಈ ಸಿನಿಮಾದ ಡಾಕ್ಯುಮೆಂಟರಿ ನಿರ್ಮಾಣ ಆಗಲಿದೆ.

‘RRR: ಬಿಹೈಂಡ್ ಆಂಡ್ ಬಿಯಾಂಡ್’ ಹೆಸರಿನ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಇದೇ ತಿಂಗಳು ಬಿಡುಗಡೆ ಆಗಲಿದೆ. ಈಗಾಗಲೇ ಡಾಕ್ಯುಮೆಂಟರಿಯ ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾ ಟೇಪ್​ಗಳ ನಡುವೆ ರಾಜಮೌಳಿ ಕುಳಿತಿರುವ ಚಿತ್ರವನ್ನು ಪೋಸ್ಟರ್​ನಲ್ಲಿ ಬಳಸಲಾಗಿದೆ. ‘ವೈಭವವನ್ನು ವಿಶ್ವ ನೋಡಿದೆ, ಈಗ ಅದರ ಹಿಂದಿನ ಕತೆಯನ್ನು ನೋಡಲಿದೆ’ ಎಂದು ಕ್ಯಾಪ್ಷನ್ ನೀಡಲಾಗಿದೆ. ‘RRR’ ಸಿನಿಮಾ ಡಾಕ್ಯುಮೆಂಟರಿಯಲ್ಲಿ ಸಿನಿಮಾದ ಕತೆ ಹುಟ್ಟಿದ ಬಗೆ, ಚಿತ್ರೀಕರಣಕ್ಕೆ ಮಾಡಿಕೊಂಡ ತಯಾರಿ, ಕತೆ ಬೆಳೆದ ರೀತಿ, ಕೋವಿಡ್​ನಿಂದ ಆದ ಹಿನ್ನಡೆ, ಆ ನಂತರ ಮತ್ತೆ ಚಿತ್ರೀಕರಣ ಶುರುವಾಗಿದ್ದು, ಸಿನಿಮಾ ಚಿತ್ರೀಕರಣದಲ್ಲಿ ಎದುರಾದ ಸಮಸ್ಯೆಗಳು ಇನ್ನೂ ಹಲವು ವಿಷಯಗಳನ್ನು ಸ್ವತಃ ರಾಜಮೌಳಿ ಮತ್ತು ಸಿನಿಮಾದ ತಂಡ ಬಿಚ್ಚಿಡಲಿದೆ.

ಇದನ್ನೂ ಓದಿ:ಎರಡು ಭಾಗದಲ್ಲಿ ಬರಲಿದೆ ಮಹೇಶ್​ಬಾಬು-ರಾಜಮೌಳಿ ಸಿನಿಮಾ; ಅಭಿಮಾನಿಗಳಿಗೆ ಬೇಸರ

‘RRR’ ಸಿನಿಮಾದ ಬಗ್ಗೆ ಯೂಟ್ಯೂಬ್​ನಲ್ಲಿ ಈಗಾಗಲೇ ಹಲವಾರು ಬ್ರೇಕ್ ಡೌನ್ ವಿಡಿಯೋಗಳಿವೆ. ಸಿನಿಮಾದ ವಿಎಫ್​ಎಕ್ಸ್ ಹೇಗೆ ಮಾಡಲಾಗಿದೆ, ಸಿನಿಮಾದ ಕಾಸ್ಟ್ಯೂಮ್, ಆಕ್ಷನ್ ಸೀನ್​ಗಳ ಬ್ರೇಕ್ ಡೌನ್ ವಿಡಿಯೋಗಳು ಇವೆ. ಆದರೆ ಅದರ ನಿಜವಾದ ಹಿನ್ನೆಲೆ, ಸಿನಿಮಾದ ತಂತ್ರಜ್ಞಾನ ಇನ್ನಿತರೆ ವಿಚಾರಗಳ ಬಗ್ಗೆ ಖುದ್ದು ಚಿತ್ರತಂಡದವರೇ ಡಾಕ್ಯುಮೆಂಟರಿಯಲ್ಲಿ ಮಾತನಾಡುವ ನಿರೀಕ್ಷೆ ಇದೆ. ಇದರ ಜೊತೆಗೆ ಸಿನಿಮಾ ಆಸ್ಕರ್​ಗೆ ಹೋದಾಗ ಆದ ಅನುಭವ, ಅಲ್ಲಿ ನಡೆದ ಘಟನೆಗಳು, ಆಸ್ಕರ್ ಪ್ರಚಾರ ಇನ್ನೂ ಹಲವು ವಿಷಯಗಳನ್ನು ಡಾಕ್ಯುಮೆಂಟರಿ ಒಳಗೊಂಡಿರಲಿದೆ.

‘RRR: ಬಿಹೈಂಡ್ ಆಂಡ್ ಬಿಯಾಂಡ್’ ಡಾಕ್ಯುಮೆಂಟರಿ ಇದೇ ತಿಂಗಳಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ತೆರೆಗೆ ಬರಲಿದೆ. ‘RRR’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾ ಭಾರತದಲ್ಲಿ ಮಾತ್ರವೇ ಅಲ್ಲದೆ ಅಮೆರಿಕ ಇನ್ನಿತರೆ ಕಡೆಗಳಲ್ಲಿ ತುಂಬಿದ ಗೃಹಗಳ ಪ್ರದರ್ಶನವನ್ನು ಕಂಡಿದೆ. ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಬಳಿಕವಂತೂ ವಿಶ್ವದ ಮೂಲೆ ಮೂಲೆಗಳನ್ನು ತಲುಪಿ ದೊಡ್ಡ ಯಶಸ್ಸು ಗಳಿಸಿತು. ಅಮೆರಿಕದಲ್ಲಿ ಎರಡು ಬಾರಿ ಸಿನಿಮಾ ಬಿಡುಗಡೆ ಆಗಿ, ಎರಡು ಬಾರಿಯೂ ಭಾರಿ ಸಂಖ್ಯೆಯ ಜನರನ್ನು ಆಕರ್ಷಿಸಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Thu, 12 December 24