ಪುತ್ರ ಆರ್ಯನ್ ಖಾನ್ಗೆ ಕೆಲಸ ಕೊಡಿಸಲು ದೊಡ್ಡ ಕಂಪನಿ ಮುಖ್ಯಸ್ಥರ ಜತೆ ಮಾತಾಡಿದ್ದ ಶಾರುಖ್
ನಟ ಶಾರುಖ್ ಖಾನ್ ಅವರು ಬಣ್ಣದ ಲೋಕದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಮಗ ಆರ್ಯನ್ ಖಾನ್ಗಾಗಿ ಅವರು ಇನ್ನೊಬ್ಬರ ಬಳಿ ಕೆಲಸ ಕೇಳಿಕೊಂಡು ಹೋಗಿದ್ದರು ಎಂಬುದು ಅಚ್ಚರಿಯ ಸಂಗತಿ. ಈ ಬಗ್ಗೆ ಸ್ವತಃ ಶಾರುಖ್ ಖಾನ್ ಅವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ಮಕ್ಕಳ ಭವಿಷ್ಯದ ಬಗ್ಗೆ ಎಲ್ಲ ತಂದೆ-ತಾಯಿಗಳಿಗೆ ಚಿಂತೆ ಇರುತ್ತದೆ. ಈ ಚಿಂತೆ ಶಾರುಖ್ ಖಾನ್ ಅವರಿಗೂ ತಪ್ಪಿದ್ದಲ್ಲ. ಬಾಲಿವುಡ್ನಲ್ಲಿ ಶಾರುಖ್ ಖಾನ್ ಅವರು ತುಂಬ ಕಷ್ಟಪಟ್ಟು ಸ್ಟಾರ್ ಆಗಿದ್ದಾರೆ. ಈಗ ಅವರ ಮಕ್ಕಳು ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡಬೇಕು ಎಂದು ಶಾರುಖ್ ಖಾನ್ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ಮಾಡಿದ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ. ಪುತ್ರ ಆರ್ಯನ್ ಖಾನ್ಗೆ ಒಂದು ಕೆಲಸ ಕೊಡಲಿಸಲು ಶಾರುಖ್ ಖಾನ್ ಅವರು ನೆಟ್ಫ್ಲಿಕ್ಸ್ ಮುಖ್ಯಸ್ಥರ ಜೊತೆ ಮಾತನಾಡಿದ್ದರು ಎಂಬುದು ಈಗ ಬಹಿರಂಗ ಆಗಿದೆ.
‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ (The Ba***ds of Bollywood) ವೆಬ್ ಸರಣಿಗೆ ಆರ್ಯನ್ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಟೈಟಲ್ ಅನಾವರಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ಉಪಸ್ಥಿತರಿದ್ದರು. ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ಬಂಡವಾಳ ಹೂಡಿದ್ದಾರೆ. ಮಗನಿಗಾಗಿ ತಾವು ಮಾಡಿದ ಪ್ರಯತ್ನ ಏನು ಎಂಬುದನ್ನು ಶಾರುಖ್ ವಿವರಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆರ್ಯನ್ ಖಾನ್ ಅವರು ಹೀರೋ ಆಗಬೇಕಿತ್ತು. ಆದರೆ ನಂತರ ಅವರ ಗಮನ ನಿರ್ದೇಶನದ ಕಡೆಗೆ ಹೋಯಿತು. ‘ನಿರ್ದೇಶನ ಮತ್ತು ನಿರ್ಮಾಣದ ಕೆಲಸವನ್ನು ಆರ್ಯನ್ ಖಾನ್ ಅಮೆರಿಕದಲ್ಲಿ ಕಲಿತಿದ್ದಾನೆ. ಅದಕ್ಕೂ ಮೊದಲು ನಾನು ನೆಟ್ಫ್ಲಿಕ್ಸ್ ಮುಖ್ಯಸ್ಥರ ಜೊತೆ ಮಾತನಾಡಿದ್ದೆ. ಆರ್ಯನ್ಗೆ ನೆಟ್ಫ್ಲಿಕ್ಸ್ನಲ್ಲಿ ಕೆಲಸ ಕೊಡಿ ಅಂತ ಕೇಳಿದ್ದೆ. ಯಾರಿಗಾದರೂ ಅವನು ಸಹಾಯಕನಾಗಿ ಕೆಲಸ ಮಾಡಲಿ ಅಂತ ನಾನು ಬಯಸಿದ್ದೆ. ಆದರೆ ಕೊವಿಡ್ ಬಂದಿದ್ದರಿಂದ ಆರ್ಯನ್ ವಾಪಸ್ ಭಾರತಕ್ಕೆ ಬಂದ’ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಯಶ್ ನನ್ನ ಸ್ನೇಹಿತ’: ದುಬೈನಲ್ಲಿ ಕೂಗಿ ಹೇಳಿದ ಶಾರುಖ್ ಖಾನ್; ವಿಡಿಯೋ ವೈರಲ್
ಶಾರುಖ್ ಖಾನ್ ಅವರು ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ಸಿನಿಮಾದ ಟೈಟಲ್ ಟೀಸರ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಜನರು ನನಗೆ ತೋರಿಸಿದ ಪ್ರೀತಿಯಲ್ಲಿ ಅರ್ಧದಷ್ಟು ಪ್ರೀತಿಯನ್ನು ಮಕ್ಕಳಿಗೆ ನೀಡಿದರೂ ಸಾಕಾಗುತ್ತದೆ’ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಶಾರುಖ್ ಪುತ್ರಿ ಸುಹಾನಾ ಖಾನ್ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 2ನೇ ಸಿನಿಮಾದಲ್ಲಿ ಅವರು ಶಾರುಖ್ ಜೊತೆ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಅವರು ಸಿನಿಮಾಗಳ ಆಯ್ಕೆಯಲ್ಲಿ ತುಂಬ ಎಚ್ಚರಿಕೆ ವಹಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.