2023ರಲ್ಲಿ ನಟ ಶಾರುಖ್ ಖಾನ್ (Shah Rukh Khan) ಅವರು ಹ್ಯಾಟ್ರಿಕ್ ಗೆಲುವು ಪಡೆದರು. ವರ್ಷದ ಪ್ರಾರಂಭದಲ್ಲಿ ಬಂದ ‘ಪಠಾಣ್’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿತು. ಸೆಪ್ಟೆಂಬರ್ 7ರಂದು ತೆರೆಕಂಡ ‘ಜವಾನ್’ ಸಿನಿಮಾ ಕೂಡ ಅದೇ ರೀತಿ ಅಬ್ಬರಿಸಿತು. ವರ್ಷದ ಕೊನೆಯಲ್ಲಿ, ಅಂದರೆ ಡಿಸೆಂಬರ್ 21ರಂದು ಬಿಡುಗಡೆಯಾದ ‘ಡಂಕಿ’ ಸಿನಿಮಾ (Dunki Movie) ತಕ್ಕಮಟ್ಟಿಗೆ ಕಲೆಕ್ಷನ್ ಮಾಡಿತು. ‘ಜವಾನ್’ ಮತ್ತು ‘ಪಠಾಣ್’ ಚಿತ್ರಕ್ಕೆ ಹೋಲಿಸಿದರೆ ‘ಡಂಕಿ’ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದವರ ಸಂಖ್ಯೆ ಕಡಿಮೆ. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿದರೆ ಸಾಕು ಎಂದುಕೊಂಡ ಪ್ರೇಕ್ಷಕ ವರ್ಗ ದೊಡ್ಡದಿದೆ. ಹಾಗಾಗಿ ‘ಡಂಕಿ’ ಸಿನಿಮಾದ ಒಟಿಟಿ ರಿಲೀಸ್ಗಾಗಿ (Dunki OTT Release) ಅಭಿಮಾನಿಗಳು ಕಾಯುತ್ತಿದ್ದಾರೆ.
‘ಡಂಕಿ’ ಸಿನಿಮಾ ಯಾವಾಗ ಒಟಿಟಿ ಅಂಗಳಕ್ಕೆ ಎಂಟ್ರಿ ನೀಡಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಫೆಬ್ರವರಿ 16ರಂದು ‘ಡಂಕಿ’ ಚಿತ್ರ ಒಟಿಟಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಈ ಬಗ್ಗೆ ಚಿತ್ರತಂಡದಿಂದ ಅಥವಾ ಒಟಿಟಿ ಸಂಸ್ಥೆಯ ಕಡೆಯಿಂದ ಅಧಿಕೃತ ಹೇಳಿಕೆ ಪ್ರಕಟ ಆಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.
ಖ್ಯಾತ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಶಾರುಖ್ ಖಾನ್ ಅವರು ಈ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರ ಮಾಡಿದ್ದಾರೆ. ಅವರ ಜೊತೆ ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೋಮನ್ ಇರಾನಿ ಮುಂತಾದವರು ನಟಿಸಿದ್ದಾರೆ. ವಿಮರ್ಶಕರ ವಲಯದಲ್ಲಿ ‘ಡಂಕಿ’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಮರ್ಷಿಯಲ್ ಅಂಶಗಳು ಜಾಸ್ತಿ ಇರಲಿಲ್ಲ ಎಂಬ ಕಾರಣಕ್ಕೆ ಈ ಸಿನಿಮಾ ಹೆಚ್ಚು ಸದ್ದು ಮಾಡಲಿಲ್ಲ. ಆದರೂ ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 212 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ಶಾರುಖ್ ಖಾನ್? ನಡೆದಿದೆ ದೊಡ್ಡ ಪ್ಲ್ಯಾನ್
ಅಕ್ರಮ ಮಾರ್ಗದ ಮೂಲಕ ಬೇರೆ ದೇಶದ ಗಡಿ ನುಸುಳುವ ಭಾರತೀಯರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ. ರಾಜ್ಕುಮಾರ್ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ವಿಶೇಷವಾದ ವಸ್ತುವಿಷಯವನ್ನು ಪ್ರೇಕ್ಷಕರಿಗೆ ತಿಳಿಸುತ್ತಾರೆ. ‘ಡಂಕಿ’ ಚಿತ್ರದಲ್ಲೂ ಅಂತಹ ಪ್ರಯತ್ನ ಆಗಿದೆ. ಈ ಸಿನಿಮಾ ಒಟಿಟಿ ಮೂಲಕ ಇನ್ನೂ ಹೆಚ್ಚಿನ ಜನರನ್ನು ತಲುಪಲಿದೆ. ಒಟಿಟಿಯಲ್ಲಿ ನೋಡಿದ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.
ಇದನ್ನೂ ಓದಿ: ಶಾರುಖ್ ಖಾನ್ ಬಗ್ಗೆ ‘ಅನಿಮಲ್’ ನಿರ್ದೇಶಕನಿಗೆ ಇರುವ ಅಪಾರ ಗೌರವಕ್ಕೆ ಈ ಮಾತು ಸಾಕ್ಷಿ
ಶಾರುಖ್ ಖಾನ್ ಅವರು ಹ್ಯಾಟ್ರಿಕ್ ಗೆಲುವಿನ ಬಳಿಕ ಹೊಸ ಸಿನಿಮಾ ಆಯ್ಕೆಯಲ್ಲಿ ಅವಸರ ತೋರಿಸಿಲ್ಲ. ಸದ್ಯ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾದ ಘೋಷಣೆ ಬಗ್ಗೆ ಸಖತ್ ನಿರೀಕ್ಷೆ ಇದೆ. ಯಾವ ನಿರ್ದೇಶಕರ ಜೊತೆ ಅವರು ಕೈ ಜೋಡಿಸುತ್ತಾರೆ ಎಂಬುದು ಕೂಡ ಇನ್ನೂ ಬಹಿರಂಗ ಆಗಿಲ್ಲ. ಶಾರುಖ್ ಖಾನ್ ಅವರ ಮಕ್ಕಳು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಗಳು ಸುಹಾನಾ ಈಗಾಗಲೇ ನಟಿಯಾಗಿ ಎಂಟ್ರಿ ನೀಡಿದ್ದಾರೆ. ಪುತ್ರ ಆರ್ಯನ್ ಖಾನ್ ನಟನೆ ಬದಲು ನಿರ್ದೇಶನದ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ