Sushmita Sen: ಮಂಗಳಮುಖಿ ವೇಷದಲ್ಲಿ ಸುಷ್ಮಿತಾ ಸೇನ್; 23 ವರ್ಷದ ಮಗಳ ಪ್ರತಿಕ್ರಿಯೆ ಏನು?
Shree Gauri Sawant | Taali: ಸುಷ್ಮಿತಾ ಸೇನ್ ನಟಿಸುತ್ತಿರುವ ಹೊಸ ವೆಬ್ ಸಿರೀಸ್ಗೆ ‘ಥಾಲಿ’ ಎಂದು ಹೆಸರು ಇಡಲಾಗಿದೆ. ಅಲ್ಲದೇ ಫಸ್ಟ್ಲುಕ್ ಕೂಡ ರಿಲೀಸ್ ಮಾಡಲಾಗಿದೆ.
ನಟಿ ಸುಷ್ಮಿತಾ ಸೇನ್ (Sushmita Sen) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಮಿಸ್ ಯೂನಿವರ್ಸ್’ ಆಗಿ ಮಿಂಚಿದ ಬಳಿಕ ಅವರು ನಟಿಯಾಗಿ ಸಾಕಷ್ಟು ಹೆಸರು ಮಾಡಿದರು. 1996ರಿಂದಲೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಪಾತ್ರ ಮತ್ತು ಕಥೆಯನ್ನು ಅಳೆದು-ತೂಗಿ ಅವರು ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಒಟಿಟಿ ಕ್ಷೇತ್ರದಲ್ಲೂ ಅವರು ಸಕ್ರಿಯರಾಗಿದ್ದಾರೆ. ಈಗ ಸುಷ್ಮಿತಾ ಸೇನ್ ಒಂದು ಹೊಸ ವೆಬ್ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಬಾರಿ ಅವರು ಮಾಡುತ್ತಿರುವುದು ಮಂಗಳಮುಖಿ (Transgender) ಪಾತ್ರ! ಅವರ ಈ ಪಾತ್ರ ಮಾಡುತ್ತಿರುವುದರ ಬಗ್ಗೆ ದತ್ತು ಮಗಳು ರಿನೀ ಸೇನ್ (Renee Sen) ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.
ಸುಷ್ಮಿತಾ ಸೇನ್ ನಟಿಸುತ್ತಿರುವ ಹೊಸ ವೆಬ್ ಸಿರೀಸ್ಗೆ ‘ಥಾಲಿ’ ಎಂದು ಹೆಸರು ಇಡಲಾಗಿದೆ. ಅಲ್ಲದೇ ಫಸ್ಟ್ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಇದು ನೈಜ ಘಟನೆಗಳನ್ನು ಆಧರಿಸಿ ಮೂಡಿಬರುತ್ತಿರುವ ವೆಬ್ ಸಿರೀಸ್. ಸಾಮಾಜಿಕ ಹೋರಾಟದ ಮೂಲಕ ಗುರುತಿಸಿಕೊಂಡ ಮಂಗಳಮುಖಿ ಶ್ರೀಗೌರಿ ಸಾವಂತ್ ಅವರ ಜೀವನದ ವಿವರಗಳನ್ನು ಕೇಂದ್ರವಾಗಿಟ್ಟುಕೊಂಡು ‘ಥಾಲಿ’ ಸಿದ್ಧವಾಗುತ್ತಿದೆ. ಶ್ರೀಗೌರಿ ಸಾವಂತ್ ಅವರ ಪಾತ್ರದಲ್ಲಿ ಸುಷ್ಮಿತಾ ಸೇನ್ ಅಭಿನಯಿಸುತ್ತಿದ್ದಾರೆ.
ಈವರೆಗೂ ಹತ್ತಾರು ಬಗೆಯ ಪಾತ್ರಗಳನ್ನು ಮಾಡಿರುವ ಸುಷ್ಮಿತಾ ಸೇನ್ ಅವರು ಈಗ ಮಂಗಳಮುಖಿ ಪಾತ್ರ ಮಾಡುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಅವರ ದತ್ತು ಪುತ್ರಿ ರಿನೀ ಸೇನ್ಗೆ ಈಗ 23 ವರ್ಷ ವಯಸ್ಸು. ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ‘ಅಮ್ಮ.. ನಿಮ್ಮನ್ನು ಕಂಡರೆ ತುಂಬ ಹೆಮ್ಮೆ ಎನಿಸುತ್ತಿದೆ. ನಿಮ್ಮನ್ನು ತುಂಬ ಪ್ರೀತಿಸುತ್ತೇನೆ’ ಎಂದು ಅವರು ಕಮೆಂಟ್ ಮಾಡಿದ್ದಾರೆ.
ಶ್ರೀಗೌರಿ ಸಾವಂತ್ ಅವರ ಪಾತ್ರವನ್ನು ಮಾಡುತ್ತಿರುವುದಕ್ಕೆ ಸ್ವತಃ ಸುಷ್ಮಿತಾ ಸೇನ್ಗೆ ಸಖತ್ ಖುಷಿ ಇದೆ. ‘ಇಂಥ ಸುಂದರ ವ್ಯಕ್ತಿಯ ಪಾತ್ರ ಮಾಡುತ್ತಿರುವುದಕ್ಕೆ, ಅವರ ಕಥೆಯನ್ನು ಜಗತ್ತಿಗೆ ತಿಳಿಸುತ್ತಿರುವುದಕ್ಕೆ ನನಗೆ ತುಂಬ ಹೆಮ್ಮೆ ಎನಿಸುತ್ತದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ವೆಬ್ ಸರಣಿಗೆ ರವಿ ಜಾದವ್ ನಿರ್ದೇಶನ ಮಾಡುತ್ತಿದ್ದಾರೆ. ಮುಂಬೈನಲ್ಲಿ ಈಗಾಗಲೇ ಶೂಟಿಂಗ್ ಆರಂಭ ಆಗಿದೆ. ಇದು ವೂಟ್ ಸೆಲೆಕ್ಟ್ನಲ್ಲಿ ಪ್ರಸಾರ ಆಗಲಿದೆ. ರಿಲೀಸ್ ಡೇಟ್ ಬಗ್ಗೆ ಇನ್ನಷ್ಟೇ ಘೋಷಣೆ ಆಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:09 am, Fri, 7 October 22