ಎಂದೆಂದಿಗೂ ಪ್ರಸ್ತುತ ಎಸ್ಎಲ್ ಭೈರಪ್ಪ: ‘ಪರ್ವ’ ನಾಟಕಕ್ಕೆ ಪ್ರತಿ ಬಾರಿ ಸಿಗುವ ಜನಸ್ಪಂದನೆಯೇ ಸಾಕ್ಷಿ
ಲೇಖಕ ಎಸ್ಎಲ್ ಭೈರಪ್ಪ ಅವರ ಕೃತಿಗಳಲ್ಲಿ ‘ಪರ್ವ’ ಕಾದಂಬರಿಗೆ ವಿಶೇಷ ಸ್ಥಾನವಿದೆ. ಇದರ ನಾಟಕ ರೂಪಕ್ಕೆ ಜನರಿಂದ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. 8 ಗಂಟೆಗಳ ಅವಧಿಯ ಈ ದೀರ್ಘ ರಂಗ ಪ್ರಯೋಗ ನೀಡುವ ಅನುಭವವೇ ಭಿನ್ನ. ಪ್ರತಿ ಬಾರಿ ಈ ನಾಟಕ ಪ್ರದರ್ಶನ ಆದಾಗಲೂ ಜನರು ಬಹಳ ಆಸಕ್ತಿಯಿಂದ ಕಣ್ತುಂಬಿಕೊಳ್ಳುತ್ತಾರೆ.

ಹಿರಿಯ ಲೇಖಕ ಎಸ್ಎಲ್ ಭೈರಪ್ಪ (SL Bhyrappa) ಅವರು ಇನ್ನಿಲ್ಲ ಎಂಬ ವಿಷಯ ತಿಳಿದು ಅಪಾರ ಸಂಖ್ಯೆಯ ಓದುಗರಿಗೆ ನೋವಾಗಿದ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಎಸ್ಎಲ್ ಭೈರಪ್ಪ ಅವರ ಸಾಹಿತ್ಯ ಕೃತಿಗಳನ್ನು ಮೆಲುಕು ಹಾಕಲಾಗುತ್ತಿದೆ. ಆ ಮೂಲಕ ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಎಸ್ಎಲ್ ಭೈರಪ್ಪ ಅವರು ನೀಡಿದ ಕೊಡುಗೆ ಅಪಾರ. ಹಲವಾರು ಕಾದಂಬರಿಗಳನ್ನು ಅವರು ಬರೆದಿದ್ದರು. ಅವುಗಳ ಪೈಕಿ ಕೆಲವನ್ನು ಆಧರಿಸಿ ಸಿನಿಮಾಗಳು ಸಿದ್ಧವಾದವು. ಭೈರಪ್ಪ ಬರೆದ ‘ಪರ್ವ’ (Parva) ಕಾದಂಬರಿಯನ್ನು ಆಧರಿಸಿ ರಂಗಪ್ರಯೋಗ ಮಾಡಲಾಗಿದೆ. ಪ್ರಕಾಶ್ ಬೆಳವಾಡಿ (Prakash Belawadi) ಅವರು ಈ ನಾಟಕಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಯಶಸ್ವಿಯಾಗಿ ಹಲವಾರು ಬಾರಿ ಪ್ರದರ್ಶನ ಕಂಡಿದೆ.
‘ಪರ್ವ’ ಕಾದಂಬರಿಯಲ್ಲಿ ಎಸ್ಎಲ್ ಭೈರಪ್ಪ ಅವರು ಮಹಾಭಾರತದ ಕಥೆಯನ್ನು ತಮ್ಮದೇ ರೀತಿಯಲ್ಲಿ ನಿರೂಪಿಸಿದ್ದಾರೆ. ಅದಕ್ಕೆ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ನಾಟಕದ ರೂಪ ನೀಡಿದ್ದಾರೆ. ಇದು ಬರೋಬ್ಬರಿ 8 ಗಂಟೆಗಳ ನಾಟಕ. ಸಿನಿಮಾ, ಐಪಿಎಲ್, ಸೋಶಿಯಲ್ ಮೀಡಿಯಾ ರಾರಾಜಿಸುವ ಈ ಕಾಲದಲ್ಲಿ, ಅವುಗಳಿಗೆ ಹೋಲಿಸಿದರೆ ನಾಟಕಗಳ ಬಗ್ಗೆ ಆಸಕ್ತಿ ತೋರಿಸುವವರ ಸಂಖ್ಯೆ ಕಡಿಮೆ. ಆದರೆ ‘ಪರ್ವ’ ನಾಟಕಕ್ಕೆ ಈ ಮಾತು ಅನ್ವಯ ಆಗುವುದಿಲ್ಲ.
ಪ್ರತಿ ಬಾರಿ ‘ಪರ್ವ’ ನಾಟಕ ಪ್ರದರ್ಶನ ಆದಾಗಲೂ ಜನರು ಅದ್ಭುತ ಸ್ಪಂದನೆ ನೀಡಿದ್ದಾರೆ. ಸಾವಿರ, 2 ಸಾವಿರ ರೂಪಾಯಿ ಟಿಕೆಟ್ ಬೆಲೆ ಇದ್ದರೂ ಕೂಡ ಉತ್ಸಾಹಿ ಪ್ರೇಕ್ಷಕರು ತಿಂಗಳ ಮುಂಚೆಯೇ ಟಿಕೆಟ್ ಬುಕ್ ಮಾಡುತ್ತಾರೆ. ವಾರಾಂತ್ಯದ ಬೇರೆ ಮೋಜು ಮಸ್ತಿಯನ್ನು ಬದಿಗಿಟ್ಟು ನಾಟಕ ನೋಡಲು ಬರುತ್ತಾರೆ. ಅವರೆಲ್ಲರನ್ನೂ ಸೆಳೆದ ಶಕ್ತಿಯೇ ಭೈರಪ್ಪನವರ ಬರವಣಿಗೆ.
ಹೊಸ ತಲೆಮಾರಿನ ಜನತೆಗೆ ತಾಳ್ಮೆ ಕಡಿಮೆ ಎಂಬ ಮಾತಿದೆ. 30 ಸೆಕೆಂಡ್ಸ್ ಇರುವ ರೀಲ್ಸ್ಗಳನ್ನು ಕೂಡ ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ನೋಡುವ ಕಾಲ ಬಂದಿದೆ. ಹಾಗಿದ್ದರೂ ಕೂಡ 8 ಗಂಟೆಗಳ ರಂಗ ಪ್ರಯೋಗವನ್ನು ಆಸಕ್ತಿಯಿಂದ ನೋಡಲು ಬರುವ ಪ್ರೇಕ್ಷಕ ವರ್ಗಕ್ಕೆ ‘ಪರ್ವ’ ನಾಟಕ ತಂಡ ಧನ್ಯವಾದ ಅರ್ಪಿಸುತ್ತದೆ. ಹೌಸ್ಫುಲ್ ಆದ ಸಭಾಂಗಣದಲ್ಲಿ ಎಲ್ಲ ವಯೋಮಾನದ ಪ್ರೇಕ್ಷಕರು ಕಾಣಸಿಗುತ್ತಾರೆ. ಅದು ಎಸ್ಎಲ್ ಭೈರಪ್ಪ ಅವರು ಸಾಹಿತ್ಯಕ್ಕಿರುವ ಮಾಂತ್ರಿಕ ಶಕ್ತಿಗೆ ಸಾಕ್ಷಿ.
ಇದನ್ನೂ ಓದಿ: ಎಸ್ಎಲ್ ಭೈರಪ್ಪ ನಿಧನ: ‘ವಂಶವೃಕ್ಷ’ದಿಂದ ‘ನಾಯಿ ನೆರಳು’ ತನಕ: ಸಿನಿಮಾವಾದ ಕೃತಿಗಳಿವು
1979ರಲ್ಲಿ ‘ಪರ್ವ’ ಕಾದಂಬರಿ ಪ್ರಕಟ ಆಯಿತು. 45 ವರ್ಷಗಳು ಕಳೆದರೂ ಕೂಡ ಅದರ ಪ್ರಸ್ತುತತೆ ಹಾಗೆಯೇ ಇದೆ. ಎಸ್ಎಲ್ ಭೈರಪ್ಪ ಅವರ ಚಿಂತನೆ, ಬರಹ ಎಂದಿಗೂ ಪ್ರಸ್ತುತ ಎಂಬುದಕ್ಕೆ ‘ಪರ್ವ’ ನಾಟಕಕ್ಕೆ ಜನರಿಂದ ಸಿಗುತ್ತಿರುವ ಅದ್ಭುತ ಜನಸ್ಪಂದನೆಯೇ ಸಾಕ್ಷಿ ಆಗಿದೆ. ನಾಟಕ ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ, ವಿಮರ್ಶೆ ಹಂಚಿಕೊಂಡಿದ್ದಾರೆ. ಆ ಮೂಲಕ ಎಸ್ಎಲ್ ಭೈರಪ್ಪ ಅವರ ಬರಹವನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




