ಚಿತ್ರರಂಗಕ್ಕೆ ಪವನ್ ಕಲ್ಯಾಣ್ ಪುತ್ರ ಎಂಟ್ರಿ, ಯಾವ ಸಿನಿಮಾ?
Pawan Kalyan: ರಾಜಕಾರಣಿಯಾದ ಬಳಿಕ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರವೇ ಆಗಿಬಿಟ್ಟಿದ್ದಾರೆ. ಆದರೆ ತಮ್ಮ ಬದಲಿಗೆ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಪವನ್ ಕಲ್ಯಾಣ್ ಪುತ್ರ ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಯಾವುದು ಆ ಸಿನಿಮಾ? ಅಕಿರಾ ಪಾತ್ರವೇನು?
ಪವನ್ ಕಲ್ಯಾಣ್ ತೆಲುಗಿನ ಸೂಪರ್ ಸ್ಟಾರ್ ನಟ. ಕೆಲವು ಹಿರಿಯ ನಿರ್ಮಾಪಕರ ಪ್ರಕಾರ, ಪವನ್ ಕಲ್ಯಾಣ್ಗೆ ಪ್ರಭಾಸ್, ಜೂ ಎನ್ಟಿಆರ್ ಅವರುಗಳಿಗಿಂತಲೂ ಹೆಚ್ಚು ಅಭಿಮಾನಿಗಳಿದ್ದಾರೆ. ಆದರೆ ಈಗ ಅವರು ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ. ರಾಜಕೀಯದಲ್ಲಿ ಬಹಳ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರವೇ ಆಗಿಬಿಟ್ಟಿದ್ದಾರೆ. ಚುನಾವಣೆಗೆ ಮುಂಚೆ ಮೂರು ಸಿನಿಮಾಗಳಲ್ಲಿ ಪವನ್ ನಟಿಸುತ್ತಿದ್ದರು. ಅವು ಸಹ ನಿಂತು ಹೋಗಿವೆ. ಆದರೆ ಪವನ್ ಸಿನಿಮಾಗಳಿಂದ ದೂರಾದರೂ ಅವರ ಪುತ್ರ ಈಗ ಸಿನಿಮಾಕ್ಕೆ ಎಂಟ್ರಿ ನೀಡಿದ್ದಾರೆ. ಈಗಾಗಲೇ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ.
ಚುನಾವಣೆ ಪ್ರಚಾರಕ್ಕೆ ಪವನ್ ಕಲ್ಯಾಣ್ ತೆರಳುವ ಮುಂಚೆ ಅವರು ‘ಓಜಿ’, ‘ಹರಿಹರ ವೀರಮಲ್ಲು’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಮೂರು ಸಿನಿಮಾಗಳ ಚಿತ್ರೀಕರಣ ಅರ್ಧದಷ್ಟು ಮುಗಿದಿತ್ತು. ಆದರೆ ಆ ನಂತರ ಮೂರು ಸಿನಿಮಾಗಳು ಅರ್ಧಕ್ಕೆ ನಿಂತಿವೆ. ಇದೀಗ ಮತ್ತೆ ಕೆಲ ಸಿನಿಮಾಗಳ ಚಿತ್ರೀಕರಣವನ್ನು ಪವನ್ ಪ್ರಾರಂಭಿಸಿದ್ದು, ಇವುಗಳಲ್ಲಿ ‘ಓಜಿ’ ಸಿನಿಮಾದ ಮೇಲೆ ಪವನ್ ಕಲ್ಯಾಣ್ಗೆ ಬಹಳ ನಿರೀಕ್ಷೆ ಇದೆ.
ಇದನ್ನೂ ಓದಿ:ತೆಲುಗು ಸಿನಿಮಾ ಟಿಕೆಟ್ ದರಗಳ ಹೆಚ್ಚಳ ಯಾಕೆ? ವಿವರಿಸಿದ ಪವನ್ ಕಲ್ಯಾಣ್
ಚುನಾವಣೆ ಗೆದ್ದ ಬಳಿಕ ಕಾರ್ಯಕ್ರಮವೊಂದರಲ್ಲಿ ‘ಓಜಿ’ ಸಿನಿಮಾ ಚೆನ್ನಾಗಿದೆ ನೋಡಿ ಎಂದಿದ್ದರು. ‘ಓಜಿ’ ಸಿನಿಮಾದ ಮೇಲೆ ನಂಬಿಕೆ ಇರುವ ಕಾರಣಕ್ಕೆ ಪವನ್ ಕಲ್ಯಾಣ್, ತಮ್ಮ ಪುತ್ರನನ್ನು ಇದೇ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಿಸುತ್ತಿದ್ದಾರೆ. ‘ಓಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಪುತ್ರ ಅಕಿರಾ ನಂದ ನಟಿಸಿದ್ದಾರೆ. ಪವನ್ ಕಲ್ಯಾಣ್ ಪಾತ್ರದ ಯೌವ್ವನದ ಪಾತ್ರದಲ್ಲಿ ಅಕಿರಾ ನಂದ ನಟಿಸಿದ್ದಾರೆ. ಈಗಾಗಲೇ ಅಕಿರಾ ನಂದ ನಟನೆಯ ಭಾಗಗಳ ಚಿತ್ರೀಕರಣ ಸಹ ಆಗಿ ಹೋಗಿದೆಯಂತೆ.
ಅಕಿರಾ ನಂದ ಶೀಘ್ರವೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆಂದು ಸ್ವತಃ ರಾಮ್ ಚರಣ್ ಇತ್ತೀಚೆಗೆ ಹೇಳಿದ್ದಾರೆ. ಅನ್ಸ್ಟಾಪೆಬಲ್ ವಿತ್ ಬಾಲಯ್ಯ ಟಾಕ್ ಶೋನಲ್ಲಿ ರಾಮ್ ಚರಣ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಕೆಲವು ಸಿನಿಮಾ ಕಾರ್ಯಕ್ರಮಗಳಲ್ಲಿ ಸಹ ಪಾಲ್ಗೊಳ್ಳಲು ಅಕಿರಾ ಆರಂಭಿಸಿದ್ದು, ರಾಜಮಂಡ್ರಿಯಲ್ಲಿ ನಡೆದ ‘ಗೇಮ್ ಚೇಂಜರ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ನಲ್ಲಿಯೂ ಸಹ ಅಕಿರಾ ನಂದ ಭಾಗಿಯಾಗಿದ್ದರು. ರಾಮ್ ಚರಣ್ ಜೊತೆಗೆ ಅವರು ಆ ಶೋಗೆ ಹೋಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Wed, 8 January 25