Vakeel Saab Collection: ಪವನ್ ಕಲ್ಯಾಣ್ ವಕೀಲ್ ಸಾಬ್ ಚಿತ್ರ ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು?
Pawan Kalyan | Vakeel Saab First Day Collection: ವಕೀಲ್ ಸಾಬ್ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರಕ್ಕೆ ಮೊದಲ ದಿನ ಆದ ಕಲೆಕ್ಷನ್ ಎಷ್ಟು ಎಂಬುದಕ್ಕೆ ಉತ್ತರ ಸಿಕ್ಕಿದೆ. ಗಲ್ಲಾಪೆಟ್ಟೆಗೆಯಲ್ಲಿ ವಕೀಲ್ ಸಾಬ್ ಧೂಳೆಬ್ಬಿಸಿದೆ.
ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ವಕೀಲ್ ಸಾಬ್’ ಶುಕ್ರವಾರ (ಏ.9) ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನಾಲ್ಕು ವರ್ಷಗಳ ಬಳಿಕ ಪವನ್ ಕಲ್ಯಾಣ್ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದರಿಂದ ಅವರ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಮೊದಲ ದಿನದ ಟಿಕೆಟ್ಗಳು ಬಹುತೇಕ ಕಡೆಗಳಲ್ಲಿ ಸೋಲ್ಡ್ ಔಟ್ ಆಗಿದ್ದವು. ಪರಿಣಾಮವಾಗಿ ಫಸ್ಟ್ ಡೇ ಈ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಗಿದೆ.
ಸಿನಿಮಾ ವ್ಯವಹಾರಕ್ಕೆ ಈಗ ಮೊದಲಿನಂತಹ ವಾತಾವರಣ ಇಲ್ಲ. ಕೊರೊನಾ ಕಾಟ, ಶೇ.50ರಷ್ಟು ಆಸನ ಮಿತಿಯಂತಹ ಅಡೆತಡೆಗಳಿವೆ. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಲಾಭವನ್ನು ನಿರೀಕ್ಷಿಸುವುದು ಕಷ್ಟವಾಗುತ್ತಿದೆ. ಅದರ ನಡುವೆಯೂ ವಕೀಲ್ ಸಾಬ್ ಸಿನಿಮಾ ಮೊದಲ ದಿನ ಒಳ್ಳೆಯ ಕಮಾಯಿ ಮಾಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಚಿತ್ರಕ್ಕೆ ಏ.9ರಂದು 28 ಕೋಟಿ ರೂ. ಗಳಿಕೆ ಆಗಿದೆ ಎಂಬ ಮಾಹಿತಿ ಕೇಳಿಬಂದಿದೆ.
ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಈ ಚಿತ್ರ ಬಿಡುಗಡೆಯಾಗಿದೆ. ವಿಶ್ವಾದ್ಯಂತ ಪವನ್ ಕಲ್ಯಾಣ್ ಅವರಿಗೆ ಅಭಿಮಾನಿಗಳಿದ್ದು, ಅಲ್ಲೆಲ್ಲವೂ ಫ್ಯಾನ್ಸ್ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ವಿದೇಶಿ ಗಳಿಕೆಯನ್ನೂ ಸೇರಿದರೆ ಮೊದಲ ದಿನವೇ ವಕೀಲ್ ಸಾಬ್ ಅಂದಾಜು 40ರಿಂದ 42 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ. ಆದರೆ ಚಿತ್ರತಂಡದ ಕಡೆಯಿಂದ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಹಿಂದಿಯ ‘ಪಿಂಕ್’ ಸಿನಿಮಾದ ತೆಲುಗು ರಿಮೇಕ್ ಆಗಿ ‘ವಕೀಲ್ ಸಾಬ್‘ ಮೂಡಿಬಂದಿದೆ. ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅತಿಯಾಗಿ ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಡಬ್ಬಾ ಸಿನಿಮಾ ಎಂದು ತೆಗಳಿದ್ದಾರೆ. ಹಾಗಾಗಿ #DisasterVakeelSaab ಎಂಬ ಹ್ಯಾಶ್ಟ್ಯಾಗ್ ಕೂಡ ಟ್ರೆಂಡ್ ಆಗಿತ್ತು. ಇದರ ನಡುವೆಯೂ ಮೊದಲ ದಿನ 40ರಿಂದ 42 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂಬುದೇ ಪವನ್ ಕಲ್ಯಾಣ್ ಫ್ಯಾನ್ಸ್ಗೆ ಖುಷಿ ನೀಡುವ ಸಂಗತಿ.
ಈ ಚಿತ್ರಕ್ಕೆ ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ. ಥಮನ್ ಅವರ ಹಿನ್ನೆಲೆ ಸಂಗೀತ ಎಲ್ಲರಿಗೂ ಇಷ್ಟ ಆಗಿದೆ. ನಿವೇತಾ ಥಾಮಸ್, ಅನನ್ಯಾ, ಅಂಜಲಿ, ಪ್ರಕಾಶ್ ರಾಜ್, ಶ್ರುತಿ ಹಾಸನ್ ಮುಂತಾದವರು ನಟಿಸಿದ್ದಾರೆ. ಮೊದಲ ದಿನ ಕೆಲವು ಕಡೆಗಳಲ್ಲಿ ಪ್ರದರ್ಶನ ವಿಳಂಬವಾದ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಫ್ಯಾನ್ಸ್ ಚಿತ್ರಮಂದಿರಕ್ಕೆ ಕಲ್ಲು ಹೊಡೆದ ಘಟನೆ ಕೂಡ ನಡೆದಿದೆ.
ಇದನ್ನೂ ಓದಿ: Vakeel Saab Review: ವಕೀಲ್ ಸಾಬ್ ಟ್ವಿಟರ್ ವಿಮರ್ಶೆ; ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಯ್ತಾ?
Vakeel Saab: ವಕೀಲ್ ಸಾಬ್ ನೋಡಲು ಬಂದು ಥಿಯೇಟರ್ಗೆ ಕಲ್ಲು ಹೊಡೆದ ಪವನ್ ಕಲ್ಯಾಣ್ ಫ್ಯಾನ್ಸ್! ಕಾರಣ ಏನು?