ಕಿರುತೆರೆ ನಟ ಪರ್ಲ್ ವಿ. ಪುರಿ ಅವರು ತಮ್ಮ ಪಾಡಿಗೆ ತಾವು ಹಾಯಾಗಿದ್ದರು. ಆದರೆ ಕಳೆದ ಕೆಲವೇ ದಿನಗಳಲ್ಲಿ ಅವರು ಪಡಬಾರದ ಕಷ್ಟವನ್ನೆಲ್ಲ ಅನುಭವಿಸುವಂತಾಯಿತು. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಅವರು ಜೈಲಿಗೂ ಹೋಗಿಬಂದಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಬದುಕು ಹೇಗೆ ಛಿದ್ರವಾಗಿದೆ ಎಂಬುದನ್ನು ಪರ್ಲ್ ವಿ. ಪುರಿ ವಿವರಿಸಿದ್ದಾರೆ.
‘ಜನರನ್ನು ಪರೀಕ್ಷಿಸಲು ಬದುಕಿಗೆ ತನ್ನದೇ ಆದ ಮಾರ್ಗಗಳಿವೆ. ಇತ್ತೀಚಿಗೆ ನಾನು ಅಜ್ಜಿಯನ್ನು ಕಳೆದುಕೊಂಡಿದ್ದೆ. ಅವರು ನಿಧನರಾಗಿ 17ನೇ ದಿನಕ್ಕೆ ನನ್ನ ತಂದೆ ಕೂಡ ಮೃತರಾದರು. ಆನಂತರ ನನ್ನ ತಾಯಿಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಬಳಿಕ ನನ್ನ ಮೇಲೆ ಇಂಥ ಕೆಟ್ಟ ಆರೋಪ ಬಂತು. ಕಳೆದ ಕೆಲವು ದಿನಗಳು ನನ್ನ ಪಾಲಿಗೆ ದುಸ್ವಪ್ನವಾಗಿವೆ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಪರ್ಲ್ ವಿ. ಪುರಿ ಬರೆದುಕೊಂಡಿದ್ದಾರೆ.
‘ರಾತ್ರೋರಾತ್ರಿ ನನ್ನನ್ನು ಒಬ್ಬ ಕ್ರಿಮಿನಲ್ ರೀತಿಯಲ್ಲಿ ಆಲೋಚಿಸುವಂತೆ ಮಾಡಲಾಯಿತು. ಇದೆಲ್ಲವೂ ಆಗಿದ್ದು ನನ್ನ ತಾಯಿಗೆ ಕ್ಯಾನ್ಸರ್ ಚಿಕಿತ್ಸೆ ನಡೆಯುತ್ತಿರುವ ಮಧ್ಯದಲ್ಲೇ. ಇದು ನನ್ನ ಭದ್ರತೆಯ ಭಾವವನ್ನೇ ಛಿದ್ರಗೊಳಿಸಿತು. ತುಂಬ ಅಸಹಾಯಕತೆ ಕಾಡಿತು. ಈಗಲೂ ನಾನು ಮರಗಟ್ಟಿದವನಂತೆ ಇದ್ದೇನೆ. ಆದರೆ ಈಗ ನನಗೆ ಪ್ರೀತಿ, ಬೆಂಬಲ ತೋರಿದ ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳನ್ನು ಭೇಟಿಯಾಗುವ ಸಮಯ. ನನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕೆ ಧನ್ಯವಾದಗಳು. ಸತ್ಯ ಮೇವ ಜಯತೆ ಎಂಬುದನ್ನು ಬಲವಾಗಿ ನಂಬಿದವನು ನಾನು. ದೇಶದ ಕಾನೂನು, ನ್ಯಾಯಾಂಗ ಮತ್ತು ದೇವರಲ್ಲಿ ನನಗೆ ಭರವಸೆ ಇದೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಇರಲಿ’ ಎಂದು ಪರ್ಲ್ ವಿ. ಪುರಿ ಬರೆದುಕೊಂಡಿದ್ದಾರೆ.
ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪರ್ಲ್ ವಿ. ಪುರಿ ಮೇಲೆ ಕೇಸ್ ದಾಖಲಾಗಿತ್ತು. ಆದರೆ ಬಾಲಕಿಯ ತಂದೆಯ ದುರುದ್ದೇಶದಿಂದ ಈ ಆರೋಪ ಮಾಡಲಾಗಿತ್ತು ಎಂದು ಸ್ವತಃ ಬಾಲಕಿಯ ಕುಟುಂದವರು ಹೇಳಿದ್ದರು. ಬಳಿಕ ಪರ್ಲ್ ವಿ. ಪುರಿಗೆ ಜಾಮೀನು ಸಿಗುವಂತಾಯಿತು.
ಇದನ್ನೂ ಓದಿ:
ಅಪ್ರಾಪ್ತೆ ಮೇಲೆ ರೇಪ್ ಮಾಡಿದ ಆರೋಪ ಹೊತ್ತ ನಟ ಪರ್ಲ್ ವಿ. ಪುರಿಗೆ ಸಂತ್ರಸ್ತೆಯ ತಾಯಿ ಬೆಂಬಲ; ಬಿಗ್ ಟ್ವಿಸ್ಟ್
Pearl V Puri: ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಕಿರುತೆರೆ ನಟ ಪರ್ಲ್ ವಿ. ಪುರಿಗೆ ಸಿಕ್ತು ರಿಲೀಫ್