ಆ ನಟನಿಂದ ನನ್ನ ಮದುವೆ ನಿಂತಿತು, ಜೀವನ ಹಾಳಾಯ್ತು: ನಟಿ ಪೂನಂ ಕೌರ್
Poonam Kaur: ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿ ಒಂದು ಸಮಯದಲ್ಲಿ ಖ್ಯಾತ ನಟಿಯಾಗಿದ್ದ ಪೂನಂ ಕೌರ್ ಬಳಿಕ ಹಠಾತ್ತನೆ ಚಿತ್ರರಂಗದಿಂದ ದೂರಾಗಿದ್ದರು. ಇದೀಗ ಸಂದರ್ಶನದಲ್ಲಿ ಮಾತನಾಡಿ, ಕೆಲ ಸಿನಿಮಾ ಮಂದಿ ಮತ್ತು ರಾಜಕಾರಣಿಗಳು ಸೇರಿಕೊಂಡು ಹೇಗೆ ತಮ್ಮ ಬದುಕು ಹಾಳು ಮಾಡಿದರು ಎಂದು ಹೇಳಿಕೊಂಡಿದ್ದಾರೆ.

ಚಿತ್ರರಂಗದ (Sandalwood) ಅದ್ವಾನಗಳು, ಅನ್ಯಾಯಗಳ ಬಗ್ಗೆ ಆಗಾಗ್ಗೆ ಸುದ್ದಿಗಳು ಹೊರ ಬೀಳುತ್ತಲೇ ಇರುತ್ತವೆ. ದೊಡ್ಡ ನಿರ್ಮಾಪಕರು, ನಟರುಗಳು ಮಾಡುವ ಅನ್ಯಾಯ, ತೋರುವ ದರ್ಪಗಳ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಪರ ಭಾಷೆಯಿಂದ ಬಂದು ಇನ್ನೊಂದು ಭಾಷೆಯಲ್ಲಿ ನೆಲೆಗೊಂಡ ನಟಿಯರಿಗಂತೂ ನರಕವನ್ನೇ ತೋರಿಸಲಾಗುತ್ತದೆ. ಇದೀಗ ಒಂದು ಸಮಯದಲ್ಲಿ ಬಲು ಖ್ಯಾತ ನಟಿಯಾಗಿದ್ದ ಪೂನಂ ಕೌರ್ ಅವರು, ಕೆಲ ಸಿನಿಮಾ ಮಂದಿ ಮತ್ತು ರಾಜಕಾರಣಿಗಳು ಸೇರಿಕೊಂಡು ಹೇಗೆ ತಮ್ಮ ಬದುಕು ಹಾಳು ಮಾಡಿದರು ಎಂದು ಹೇಳಿಕೊಂಡಿದ್ದಾರೆ.
ಪೂನಂ ಕೌರ್ ಮೂಲತಃ ಪಂಜಾಬಿನವರಾದರೂ ಜನಪ್ರಿಯತೆ ಗಳಿಸಿದ್ದು ತೆಲುಗು ಚಿತ್ರರಂಗದಲ್ಲಿ. ತೆಲುಗಿನ ಹಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ ಪೂನಂ ಕೌರ್. ಕನ್ನಡದ ‘ಬಂಧು-ಬಳಗ’ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರ ಜೊತೆಯಾಗಿಯೂ ಪೂನಂ ಕೌರ್ ನಟಿಸಿದ್ದಾರೆ. ಆದರೆ 2019 ರ ಬಳಿಕ ಪೂನಂ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಅದೇ ಸಮಯದಲ್ಲಿ ಅವರ ಹೆಸರು ಸುದ್ದಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಲು ಆರಂಭವಾಯ್ತು. ಹಲವು ವರ್ಷಗಳ ಬಳಿಕ ಮಾಧ್ಯಮಗಳ ಮುಂದೆ ಬಂದಿರುವ ಪೂನಂ ಕೌರ್, ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ನಟನೊಬ್ಬನಿಂದ ತಮ್ಮ ಜೀವನವೇ ಹಾಳಾಯ್ತು ಎಂದು ಹೇಳಿಕೊಂಡಿದ್ದಾರೆ.
‘”ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ನನ್ನನ್ನು ಬಳಸಿಕೊಳ್ಳಲು ಪ್ರಯತ್ನಿಸಿದವು. ಅದಕ್ಕಾಗಿ ಅವರು ನನಗೆ ಬೆದರಿಕೆ ಹಾಕಿದರು. ಅವರು ನನಗೆ ಹಣ ಮತ್ತು ಹುದ್ದೆಗಳನ್ನು ಸಹ ನೀಡಿದರು. ಅಂತಿಮವಾಗಿ, ನಾನು ಒಬ್ಬ ನಟನ ವಿರುದ್ಧ ಮಾತನಾಡದಿದ್ದರೆ, ಅವರು ನನ್ನ ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದರು’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಮುಂದುವರೆದು, ‘ನಾನು ನನ್ನ ಸ್ನೇಹಿತನನ್ನು ಮದುವೆಯಾಗಲು ಬಯಸಿದ್ದೆ. ಆದರೆ ಇದ್ದಕ್ಕಿದ್ದಂತೆ, ಪೊಸಾನಿ ಕೃಷ್ಣ ಮುರಳಿ ಅದೇ ಸಮಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನನ್ನ ಬಗ್ಗೆ ಮಾತನಾಡಿದರು. ಅದರಿಂದ ನನ್ನ ಮದುವೆ ನಿಂತು ಹೋಯ್ತು. ಈ ವಿಷಯ ತಿಳಿದಾಗ ನನ್ನ ತಾಯಿಗೆ ಹೃದಯಾಘಾತವಾಯಿತು. ಪೊಸಾನಿ ಕೃಷ್ಣ ಮುರಳಿಯಿಂದಾಗಿ ನನ್ನ ವೈಯಕ್ತಿಕ ಜೀವನವೂ ಹಾಳಾಗಿತ್ತು’ ಎಂದಿರುವ ನಟಿ, ‘ರಾಜಕೀಯ ನಾಯಕರಗೆ ಹತ್ತಿರವಾಗಿರುವ ಯುವತಿಯರಿಗೆ ಏನೂ ಆಗುವುದಿಲ್ಲ, ಅವರು ಆರಾಮವಾಗಿರುತ್ತಾರೆ, ಆದರೆ ಅವರಿಂದ ದೂರವಿರುವವರ ಯುವತಿಯರ ಬಗ್ಗೆ ಕೆಟ್ಟದಾಗಿ ಮಾತನಾಡಲಾಗುತ್ತದೆ’ ಎಂದಿದ್ದಾರೆ ಪೂನಂ.
ನಟ ಹಾಗೂ ವೈಸಿಪಿ ಪಕ್ಷದ ಸದಸ್ಯರಾಗಿದ್ದ ಪೋಸಾನಿ ಕೃಷ್ಣ ಮುರಳಿ, ಪವನ್ ಕಲ್ಯಾಣ್ ವಿರುದ್ಧವಾಗಿ ಮಾಧ್ಯಮಗಳಲ್ಲಿ ಹಲವು ಬಾರಿ ಮಾತನಾಡಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದೂ ಇದೆ. ಪೋಸಾನಿ, ಒಮ್ಮೆ ಸುದ್ದಿಗೋಷ್ಠಿಯಲ್ಲಿ, ಪವನ್ ಕಲ್ಯಾಣ್ ಮತ್ತು ಪೂನಂ ಕೌರ್ ನಡುವೆ ಸಂಬಂಧ ಇದೆ ಎಂದು ಹೇಳಿದ್ದರು. ಇದು ಆಗ ಭಾರಿ ವೈರಲ್ ಸುದ್ದಿಯಾಗಿತ್ತು. ಪವನ್ ಅವರಿಂದ ಆ ನಟಿ (ಪೂನಂ) ಗರ್ಭಿಣಿ ಆಗಿದ್ದಾರೆ ಎಂದು ಸಹ ಪೋಸಾನಿ ಕೃಷ್ಣ ಮುರಳಿ ಹೇಳಿದ್ದರು.
ಪೂನಂ ಕೌರ್, ರಾಹುಲ್ ಗಾಂಧಿ ಜೊತೆಗೆ ‘ಭಾರತ್ ಜೋಡೊ ಯಾತ್ರಾ’ನಲ್ಲಿಯೂ ಭಾಗಿ ಆಗಿದ್ದರು. ಆಗ ಪೂನಂ ಕೌರ್ ಮತ್ತು ರಾಹುಲ್ ಗಾಂಧಿ ಬಗ್ಗೆಯೂ ಕೆಲ ಸುದ್ದಿಗಳನ್ನು ಹರಿಬಿಡಲಾಗಿತ್ತು. ಬಳಿಕ ಸ್ವತಃ ಪೂನಂ ಅವರೇ ಹೇಳಿಕೆ ಬಿಡುಗಡೆ ಮಾಡಿ ಆ ಬಗ್ಗೆ ಸ್ಪಷ್ಟನೆ ನೀಡಬೇಕಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Tue, 6 January 26




