ಹಿಂದಿ ಚಿತ್ರರಂಗಕ್ಕೆ ಹೊಸ ಡಾನ್ ಆಗ್ತಾರಾ ಹೃತಿಕ್ ರೋಷನ್?
‘ಧುರಂಧರ್’ ಚಿತ್ರದ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಅವರು ‘ಡಾನ್ 3’ ತಂಡದಿಂದ ಹೊರನಡೆದರು. ಈಗ ಹೊಸ ಡಾನ್ ಯಾರಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಹೃತಿಕ್ ರೋಷನ್ ಹೆಸರು ಕೇಳಿಬಂದಿದೆ. ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಹೃತಿಕ್ ರೋಷನ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಮೊದಲು ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಅವರು ಡಾನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಆ ಬಳಿಕ ಡಾನ್ ಆಗುವ ಅವಕಾಶ ರಣವೀರ್ ಸಿಂಗ್ (Ranveer Singh) ಅವರಿಗೆ ಸಿಕ್ಕಿತ್ತು. ಆದರೆ ಅವರು ಡಾನ್ ಆಗಲು ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಹೃತಿಕ್ ರೋಷನ್ (Hrithik Roshan) ಅವರು ಮುಂದಿನ ಡಾನ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಹೃತಿಕ್ ರೋಷನ್ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ‘ಡಾನ್ 3’ (Don 3) ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಡಾನ್ 3’ ಸಿನಿಮಾಗೆ ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ರಣವೀರ್ ಸಿಂಗ್ ಹೀರೋ ಎಂದು ಘೋಷಿಸಲಾಗಿತ್ತು. ಆದರೆ ‘ಧುರಂಧರ್’ ಸಿನಿಮಾದ ಸೂಪರ್ ಸಕ್ಸಸ್ ನಂತರ ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದರು. ‘ಧುರಂಧರ್’ ರೀತಿಯ ಸಿನಿಮಾ ಮಾಡಿದ ಬಳಿಕ ಮತ್ತೆ ಡಾನ್ ಪಾತ್ರ ಮಾಡುವುದು ಅವರಿಗೆ ಸರಿ ಎನಿಸಲಿಲ್ಲ.
ಹಾಗಾದರೆ ಡಾನ್ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಅವರು ತಲೆ ಕೆಡಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಜೊತೆ ಫರ್ಹಾನ್ ಅಖ್ತರ್ ಅವರು ಬಹುಕಾಲದ ಸ್ನೇಹ ಹೊಂದಿದ್ದಾರೆ. ಈ ಮೊದಲು ಕೂಡ ಅವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿದ್ದಾರೆ. ಆ ಕಾರಣದಿಂದಲೇ ಹೃತಿಕ್ ರೋಷನ್ ಅವರು ಡಾನ್ ಪಾತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ.
ಸದ್ಯಕ್ಕೆ ‘ಡಾನ್ 3’ ಸಿನಿಮಾ ಕುರಿತು ಮಾತುಕಥೆ ಆರಂಭಿಕ ಹಂತದಲ್ಲಿ ಇದೆ. ಅಂತಿಮವಾಗಿ ಹೃತಿಕ್ ರೋಷನ್ ಅವರು ಒಪ್ಪಿಕೊಳ್ಳುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ‘ಡಾನ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ಡಾನ್ ಪಾತ್ರ ಮಾಡಲು ಅವರೇ ಸೂಕ್ತ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ‘ಧುರಂದರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ
2023ರ ಆಗಸ್ಟ್ ತಿಂಗಳಲ್ಲಿ ‘ಡಾನ್ 3’ ಸಿನಿಮಾಗೆ ರಣವೀರ್ ಸಿಂಗ್ ಹೀರೋ ಎಂದು ಘೋಷಿಸಲಾಗಿತ್ತು. ಆಗ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಅವರು ಮಾಡಿದ್ದ ಡಾನ್ ಪಾತ್ರವನ್ನು ಈಗ ರಣವೀರ್ ಸಿಂಗ್ ಸರಿಯಾಗಿ ನಿಭಾಯಿಸುತ್ತಾರಾ ಎಂಬ ಅನುಮಾನ ಎದುರಾಗಿತ್ತು. ಕಡೆಗೂ ಅವರು ಡಾನ್ ಪಾತ್ರವನ್ನು ಬಿಟ್ಟುಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




