‘ಸಲಾರ್’ಗೆ ನೋ ಅನ್ನಲು ರೆಡಿಯಾಗಿದ್ದ ಪ್ರಭಾಸ್ ನಿರ್ಣಯ ಬದಲಿಸಿದ್ದು ಏಕೆ?
Prabhas-Prashanth: ‘ಸಲಾರ್’ ಸಿನಿಮಾ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು, ಆದರೆ ಪ್ರಭಾಸ್ಗೆ ‘ಸಲಾರ್’ ಸಿನಿಮಾದಲ್ಲಿ ನಟಿಸಲು ಇಷ್ಟವಿರಲಿಲ್ಲವಂತೆ ಕಾರಣವೇನು?
ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾ ಬಿಡುಗಡೆ ಆಗಲು ಕೆಲವು ಗಂಟೆಗಳಷ್ಟೆ ಬಾಕಿ ಇದೆ. ಸಿನಿಮಾದಲ್ಲಿ ಪ್ರಭಾಸ್ರಷ್ಟೆ ಪ್ರಮುಖ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಿದ್ದಾರೆ. ‘ಸಲಾರ್’ ಸಿನಿಮಾ ಭಾರತದ ಭಾರಿ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಪ್ರಭಾಸ್ ಅಭಿಮಾನಿಗಳಂತೂ ಈ ಸಿನಿಮಾಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಪ್ರಮುಖ ನಟರಾದ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಇಬ್ಬರೂ ಸಹ ಈ ಸಿನಿಮಾಕ್ಕೆ ನೋ ಎನ್ನಲು ನಿಶ್ಚಯ ಮಾಡಿದ್ದರಂತೆ!
ರಾಜಮೌಳಿ ಜೊತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಪ್ರಭಾಸ್, ‘‘ಕೆಜಿಎಫ್ 2’ ಸಿನಿಮಾ ಬಳಿಕ ಎಲ್ಲರೂ ಪ್ರಶಾಂತ್ ಬಗ್ಗೆ ಮಾತನಾಡುತ್ತಿದ್ದರು, ನನ್ನ ಅಭಿಮಾನಿಗಳು, ಕುಟುಂಬದವರು, ಗೆಳೆಯರು ಸಹ ನೀನು ‘ಕೆಜಿಎಫ್’ ಸಿನಿಮಾದಲ್ಲಿ ಇರಬೇಕಿತ್ತು, ನೀನು ಆ ಸಿನಿಮಾ ಮಾಡಬೇಕಿತ್ತು ಎನ್ನುತ್ತಿದ್ದರು. ಬಳಿಕ ಅಭಿಮಾನಿಗಳು, ಪ್ರಶಾಂತ್ ಜೊತೆ ಸಿನಿಮಾ ಮಾಡು ಎಂದು ಒತ್ತಾಯಿಸಲು ಆರಂಭಿಸಿದರು. ಆದರೆ ನಾನು ಎಂದೂ ಯಾವ ನಿರ್ದೇಶಕರನ್ನು ಸಹ ನನಗಾಗಿ ಸಿನಿಮಾ ಮಾಡಿ ಎಂದವನಲ್ಲ, ಆದರೆ ಪ್ರಶಾಂತ್ ಬಂದು ನನ್ನನ್ನು ಕೇಳಿದರೆ ಚೆನ್ನಾಗಿರುತ್ತದೆ ಎಂಬುದು ಮನಸ್ಸಿನಲ್ಲಿತ್ತು’’ ಎಂದಿದ್ದಾರೆ ಪ್ರಭಾಸ್.
‘‘ಅಷ್ಟರಲ್ಲಾಗಲೆ ‘ಆದಿಪುರುಷ್’ ಹಾಗೂ ‘ಕಲ್ಕಿ’ ಸಿನಿಮಾಗಳನ್ನು ಒಪ್ಪಿಕೊಂಡಾಗಿತ್ತು. ನನ್ನ ಡೇಟ್ಸ್ಗಳು ಸಹ ಲಾಕ್ ಆಗಿಬಿಟ್ಟಿದ್ದವು. ಅದೇ ಸಮಯಕ್ಕೆ ನಿರ್ಮಾಪಕರೊಬ್ಬರು ಬಂದು, ಪ್ರಶಾಂತ್ ನೀಲ್ ನಿಮ್ಮನ್ನು ಭೇಟಿ ಆಗಬೇಕಂತೆ ಎಂದರು. ನನಗೆ ಅನುಮಾನ ಬಂತು, ಒಮ್ಮೊಮ್ಮೆ ಈ ನಿರ್ಮಾಪಕರು ಬೇಕೆಂದೇ ಈ ರೀತಿಯ ಗೇಮ್ಗಳನ್ನಾಡುತ್ತಾರೆ, ಹಾಗಾಗಿ ನಾನು ಖಾತ್ರಿ ಪಡಿಸಿಕೊಂಡೆ ನಿಜವಾಗಿಯೂ ಪ್ರಶಾಂತ್ ನನ್ನನ್ನು ಭೇಟಿ ಆಗಬೇಕು ಎಂದಿದ್ದಾರಾ ಎಂದು. ಅವರು ಹೌದು ಎಂದರು. ನಾನು ಸರಿ ಅಂದೆ’’ ಎಂದರು.
ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೆ ಪ್ರಭಾಸ್, ಪ್ರಶಾಂತ್ ನೀಲ್, ಶ್ರುತಿ ಹಾಸನ್ ಪಡೆದ ಸಂಭಾವನೆ ಎಷ್ಟು?
‘‘ಅದಾದ ಬಳಿಕ ಒಂದು ದಿನ ನಾವಿಬ್ಬರೂ ಭೇಟಿ ಆದೆವು, ಇಬ್ಬರೂ ತುಸು ನಾಚಿಕೆ ಸ್ವಭಾವದವರು ಹಾಗಾಗಿ ಅಂದು ಹೆಚ್ಚು ಮಾತನಾಡಲಿಲ್ಲ, ಕೇವಲ ಇಷ್ಟದ ಸಿನಿಮಾ, ‘ಕೆಜಿಎಫ್’, ‘ಬಾಹುಬಲಿ’ ಬಗ್ಗೆ ಅಷ್ಟೆ ಮಾತನಾಡಿದೆವು. ಆದರೆ ಅಂದು ನಮ್ಮಿಬ್ಬರ ವ್ಯಕ್ತಿತ್ವ ಒಂದೇ ರೀತಿ ಇದ್ದಿದ್ದನ್ನು ಇಬ್ಬರೂ ಗುರುತಿಸಿದೆವು. ಅದಾದ ಬಳಿಕ ಒಂದು ದಿನ ಹೊಂಬಾಳೆಯವರು ಕಾಲ್ ಮಾಡಿ, ಪ್ರಶಾಂತ್ ನಿಮ್ಮೊಟ್ಟಿಗೆ ಸಿನಿಮಾ ಮಾಡಬೇಕಂತೆ, ನಿಮ್ಮ 45 ದಿನದ ಡೇಟ್ಸ್ ಸಾಕಂತೆ ಎಂದು ಹೇಳಿದ್ದಾಗಿ ನೆನಪು ಮಾಡಿಕೊಂಡರು ಪ್ರಭಾಸ್.
‘‘ಅದಾಗಲೇ ‘ಆದಿಪುರುಷ್’, ‘ಕಲ್ಕಿ’ನಲ್ಲಿ ಬ್ಯುಸಿಯಾಗಿದ್ದ ನಾನು ಪ್ರಶಾಂತ್ಗೆ ಹೇಗೆ ನೋ ಹೇಳುವುದು ಎಂದು ನನ್ನ ಮ್ಯಾನೇಜರ್ ಜೊತೆ ಒಂದು ದಿನವೆಲ್ಲ ಯೋಚನೆ ಮಾಡಿದೆ. ಹೇಗಾದರೂ ಮಾಡಿ ನೋ ಹೇಳಲೇ ಬೇಕು ಎಂದು ನಿರ್ಧರಿಸಿದ್ದೆ ಏಕೆಂದರೆ ನನ್ನ ಬಳಿ ಅದಾಗಲೇ ಎರಡು ದೊಡ್ಡ ಸಿನಿಮಾಗಳಿತ್ತು. ಆ ಬಳಿಕ ಯೋಚಿಸಿದೆ, ಒಂದೊಮ್ಮೆ, ನಾನು ಪ್ರಶಾಂತ್ ಸಿನಿಮಾಕ್ಕೆ ನೋ ಎಂದಿದ್ದೇನೆಂದು ಅಭಿಮಾನಿಗಳಿಗೆ ಗೊತ್ತಾದರೆ ಅವರು ನನ್ನನ್ನು ಕೊಂದೇ ಬಿಡುತ್ತಾರೆ. ಹೇಗೋ ‘ಕಲ್ಕಿ’ ಸಿನಿಮಾದ ಚಿತ್ರೀಕರಣ ಬೇಗನೇ ಮುಗಿಯುವುದಿಲ್ಲ, ಅದರ ನಡುವೆಯೇ ಅಡ್ಜಸ್ಟ್ ಮಾಡಿಕೊಂಡು ಮಾಡಿಬಿಡೋಣ ಎಂದುಕೊಂಡು ಓಕೆ ಹೇಳಿಬಿಟ್ಟೆ’’ ಎಂದರು ಪ್ರಭಾಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ