ಅನೇಕ ಕಾರಣಗಳಿಂದಾಗಿ ‘ಸಲಾರ್’ (Salaar) ಸಿನಿಮಾದ ಶೂಟಿಂಗ್ ಮುಂದೂಡಲ್ಪಡುತ್ತಲೇ ಇದೆ. ಈ ಚಿತ್ರದ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದಷ್ಟು ಬೇಗ ಈ ಸಿನಿಮಾವನ್ನು ನೋಡಬೇಕು ಎಂಬುದು ಫ್ಯಾನ್ಸ್ ಬಯಕೆ. ಆದರೆ ಒಂದಿಲ್ಲೊಂದು ಸಮಸ್ಯೆಯಿಂದಾಗಿ ಶೂಟಿಂಗ್ ತಡವಾಗುತ್ತಲೇ ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ ಮೂರನೇ ವಾರದಲ್ಲಿ ಪ್ರಭಾಸ್ (Prabhas) ಅವರು ‘ಸಲಾರ್’ ಚಿತ್ರೀಕರಣದಲ್ಲಿ ಭಾಗಿ ಆಗಬೇಕಿತ್ತು. ಆದರೆ ಅವರ ಮನೆಯಲ್ಲೀಗ ಸೂತಕದ ವಾತಾವರಣ ಸೃಷ್ಟಿ ಆಗಿದೆ. ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು (Krishnam Raju) ನಿಧನರಾಗಿರುವುದು ತೀವ್ರ ನೋವುಂಟು ಮಾಡಿದೆ. ಒಂದಷ್ಟು ದಿನಗಳ ಕಾಲ ಪ್ರಭಾಸ್ ಅವರು ಎಲ್ಲ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯಲಿದ್ದಾರೆ ಎನ್ನಲಾಗಿದೆ.
ಕೃಷ್ಣಂ ರಾಜು ಮತ್ತು ಪ್ರಭಾಸ್ ಅವರ ನಡುವೆ ತುಂಬ ಆತ್ಮೀಯತೆ ಇತ್ತು. ಪ್ರಭಾಸ್ ವೃತ್ತಿಜೀವನಕ್ಕೆ ಕೃಷ್ಣಂ ರಾಜು ಅವರು ಮಾರ್ಗದರ್ಶಕರಾಗಿದ್ದರು. ಹಾಗಾಗಿ ಅವರನ್ನು ಕಳೆದುಕೊಂಡಿದ್ದು ‘ಸಲಾರ್’ ಹೀರೋಗೆ ಭಾವನಾತ್ಮಕವಾಗಿ ತುಂಬಲಾರದ ನಷ್ಟ ಆಗಿದೆ. ಪ್ರಭಾಸ್ ಮದುವೆಯನ್ನು ನೋಡಬೇಕು, ಪ್ರಭಾಸ್ ಮಕ್ಕಳ ಜೊತೆ ತಾವು ನಟಿಸಬೇಕು ಎಂಬ ಆಸೆಯನ್ನು ಕೃಷ್ಣಂ ರಾಜು ಇಟ್ಟುಕೊಂಡಿದ್ದರು. ಆದರೆ ಆ ಎಲ್ಲ ಆಸೆಗಳು ಈಡೇರುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.
ದೊಡ್ಡಪ್ಪನ ನಿಧನದಿಂದ ಪ್ರಭಾಸ್ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಎಲ್ಲರೂ ಸಮಾಧಾನ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಪ್ರಭಾಸ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈ ವೇಳೆ ಪ್ರಭಾಸ್ ಅವರು ಕುಟುಂಬದ ಸದಸ್ಯರ ಜೊತೆಯಲ್ಲಿ ಇರಬೇಕಾದ್ದು ತುಂಬ ಅಗತ್ಯ. ಹಾಗಾಗಿ ಸದ್ಯಕ್ಕೆ ಎಲ್ಲ ಶೂಟಿಂಗ್ ಮುಂದೂಡಲಾಗಿದೆ.
‘ಸಲಾರ್’ ಸಿನಿಮಾಗೆ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಕೆಜಿಎಫ್’ ಚಿತ್ರದ ಭಾರಿ ಯಶಸ್ಸಿನ ಬಳಿಕ ಅವರು ಈ ಸಿನಿಮಾ ಕೈಗೆತ್ತಿಕೊಂಡರು. ಹಾಗಾಗಿ ‘ಸಲಾರ್’ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅದರಲ್ಲೂ ‘ಕೆಜಿಎಫ್: ಚಾಪ್ಟರ್ 2’ ಸಾರ್ವಕಾಲಿಕ ಹಿಟ್ ಆಗಿರುವುದರಿಂದ ಪ್ರಶಾಂತ್ ನೀಲ್ ಅವರ ಕೆಲಸ ಮೇಲೆ ಪ್ರೇಕ್ಷಕರಿಗೆ ಎಲ್ಲಿಲ್ಲದಷ್ಟು ಭರವಸೆ ಮೂಡಿದೆ.
ಬೃಹತ್ ಸೆಟ್ಗಳಲ್ಲಿ ‘ಸಲಾರ್’ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ. ‘ಹೊಂಬಾಳೆ ಫಿಲ್ಮ್ಸ್’ ಮೂಲಕ ಅದ್ದೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ವಿಜಯ್ ಕಿರಗಂದೂರು ಅವರು ಈ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡುತ್ತಿದ್ದಾರೆ. ಶ್ರುತಿ ಹಾಸನ್ ಅವರು ಪ್ರಭಾಸ್ಗೆ ಹೀರೋಯಿನ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.