ಸಖತ್ ಅದ್ದೂರಿಯಾಗಿದೆ ‘ದಿ ರಾಜಾ ಸಾಬ್’ ಟ್ರೇಲರ್: ಹೈಪ್ ಸೃಷ್ಟಿಸಿದ ಹಾರರ್ ಕಹಾನಿ
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ನೂರಾರು ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ಅನಾವರಣ ಮಾಡಲಾಯಿತು. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಡಿಜಿಟಲ್ ವೇದಿಕೆಗಳಲ್ಲಿ ಕೂಡ ಈ ಟ್ರೇಲರ್ ಭರ್ಜರಿ ವೀವ್ಸ್ ಪಡೆಯುತ್ತಿದೆ.

ನಟ ಪ್ರಭಾಸ್ (Prabhas) ಮತ್ತು ನಿರ್ದೇಶಕ ಮಾರುತಿ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ದಿ ರಾಜಾ ಸಾಬ್’ ಸಿನಿಮಾ ಮೇಲೆ ಅಭಿಮಾನಿಗಳಿಗೆ ತುಂಬಾ ನಿರೀಕ್ಷೆ ಇದೆ. ಇದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ. ಈಗ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಇದು ಹಾರರ್ ಕಾಮಿಡಿ ಶೈಲಿಯ ಸಿನಿಮಾ ಎಂಬುದು ವಿಶೇಷ. ಆ ಕಥೆಯಲ್ಲಿ ನಿರ್ದೇಶಕ ಮಾರುತಿ ಅವರು ಹೃದಯಸ್ಪರ್ಶಿ ಅಂಶಗಳನ್ನೂ ಬೆರೆಸಿದ್ದಾರೆ. ಪ್ರಭಾಸ್ ಅಭಿಮಾನಿಗಳು ‘ದಿ ರಾಜಾ ಸಾಬ್’ ಸಿನಿಮಾದ ಟ್ರೇಲರ್ (The Raja Saab Trailer) ನೋಡಿ ಖುಷಿಪಟ್ಟಿದ್ದಾರೆ.
ತುಂಬಾ ದೊಡ್ಡ ಮಟ್ಟದಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಚಿತ್ರತಂಡ ಹೇಳುತ್ತಿದೆ. ಮೇಕಿಂಗ್ ದೃಷ್ಟಿಯಿಂದ ಸಿನಿಮಾ ಸಖತ್ ಹೈಪ್ ಸೃಷ್ಟಿ ಮಾಡಿದೆ. ಭಾರತೀಯ ಚಿತ್ರರಂಗದ ಯಾವುದೇ ಸಿನಿಮಾದಲ್ಲಿ ಇದುವರೆಗೆ ಕಂಡಿರದ ಅತಿದೊಡ್ಡ ಹಾರರ್ ಸೆಟ್ ಈ ಸಿನಿಮಾದಲ್ಲಿದೆ. ನೋಡುಗರಿಗೆ ಭಯ ಉಂಟುಮಾಡುವ ಜೊತೆಗೆ ದೃಶ್ಯ ವೈಭವವನ್ನು ಪ್ರೇಕ್ಷಕರೆದು ತರಲಿದೆ. ಜೊತೆಗೆ ಭರ್ಜರಿ ಆ್ಯಕ್ಷನ್ ಕೂಡ ಇರಲಿದೆ.
ಬಿಡುಗಡೆ ಆಗುತ್ತಿದ್ದಂತೆಯೇ ಈ ಟ್ರೇಲರ್ ದಾಖಲೆ ಬರೆಯುತ್ತಿದೆ. ಚಿತ್ರದ ಬಿಡುಗಡೆಗೆ ಸುಮಾರು 3 ತಿಂಗಳ ಮುಂಚೆಯೇ 3 ನಿಮಿಷಗಳಿಗಿಂತ ಹೆಚ್ಚಿನ ಅವಧಿಯ ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಮೂಲಕ ಚಿತ್ರದ ಭವ್ಯತೆಯ ಬಗ್ಗೆ ತಮ್ಮ ವಿಶ್ವಾಸವನ್ನು ನಿರ್ಮಾಪಕರು ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ 105 ಚಿತ್ರಮಂದಿರಗಳಲ್ಲಿ ಟ್ರೈಲರ್ ಬಿಡುಗಡೆ ಮಾಡಿ ಸಂಭ್ರಮಿಸಲಾಗಿದೆ. ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ಅನಾವರಣ ಆಗಿದೆ.
‘ದಿ ರಾಜಾ ಸಾಬ್’ ಟ್ರೇಲರ್ ಬಿಡುಗಡೆ ಬಗ್ಗೆ ನಿರ್ದೇಶಕ ಮಾರುತಿ ಮಾತನಾಡಿದ್ದಾರೆ ‘ಈ ಸಿನಿಮಾದೊಂದಿಗೆ ನಾವು ಪ್ರತಿ ಅರ್ಥದಲ್ಲಿಯೂ ಭವ್ಯವಾದ, ಭಾವನಾತ್ಮಕವಾದ ಹಾಗೂ ಮನರಂಜನೆಯ ಪ್ರಪಂಚವನ್ನು ಸೃಷ್ಟಿಸಲು ಬಯಸಿದ್ದೇವೆ. ಟ್ರೇಲರ್ ಕೇವಲ ಒಂದು ಸಣ್ಣ ಝಲಕ್ ಅಷ್ಟೇ. ಪ್ರಭಾಸ್ ಈ ಪಾತ್ರಕ್ಕೆ ಸಾಟಿಯಿಲ್ಲದ ಶಕ್ತಿಯಾಗಿದ್ದಾರೆ’ ಎಂದು ನಿರ್ದೇಶಕರು ಹೇಳಿದ್ದಾರೆ.
‘ದಿ ರಾಜಾ ಸಾಬ್’ ಸಿನಿಮಾ ಟ್ರೇಲರ್:
‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯ ಟಿಜಿ ವಿಶ್ವ ಪ್ರಸಾದ್ ಅವರು ಮಾತನಾಡಿ, ‘ಭಾರತದ ಅತಿದೊಡ್ಡ ಹಾರರ್ ಸೆಟ್ ನಿರ್ಮಾಣ ಮಾಡುವುದರಿಂದ ಹಿಡಿದು ರೆಬೆಲ್ ಸ್ಟಾರ್ ಪ್ರಭಾಸ್ ಅವರ ಹೊಸ ಅವತಾರ ಸೃಷ್ಟಿಸುವುದು ನಿಜಕ್ಕೂ ಒಂದು ಸ್ಮರಣೀಯ ಅನುಭವ ಆಗಿತ್ತು. ಈ ಪ್ಯಾನ್ ಇಂಡಿಯಾ ವೈಭವವನ್ನು ನೋಡುಗರಿಗೆ ಉಣಬಡಿಸುವುದು ನಮ್ಮ ಗುರಿಯಾಗಿದೆ. ಟ್ರೇಲರ್ಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಮ್ಮ ನಂಬಿಕೆ ಬಲವಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಜೊತೆ ಸಿನಿಮಾ: ಸ್ವೀಟಿ ಅನುಷ್ಕಾ ಶೆಟ್ಟಿ ಹೇಳಿದ್ದೇನು?
2026ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅಂದರೆ, ಜನವರಿ 9ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಪ್ರಭಾಸ್ ಜೊತೆ ಸಂಜಯ್ ದತ್, ಜರೀನಾ ವಹಾಬ್, ಬೋಮನ್ ಇರಾನಿ, ಮಾಳವಿಕಾ ಮೋಹನನ್, ರಿಧಿ ಕುಮಾರ್, ನಿಧಿ ಅಗರ್ವಾಲ್ ಮುಂತಾದವರು ನಟಿಸಿದ್ದಾರೆ. ಟಿಜಿ ವಿಶ್ವ ಪ್ರಸಾದ್ ಹಾಗೂ ಕೃತಿ ಪ್ರಸಾದ್ ಅವರು ನಿರ್ಮಾಣ ಮಾಡಿದ್ದಾರೆ. ಥಮನ್ ಎಸ್. ಅವರ ಸಂಗೀತ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




