
ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಾ ಇದೆ. ಈ ಸಿನಿಮಾಗಾಗಿ ಪ್ರಭಾಸ್ ಅವರು ತೋರುತ್ತಿರುವ ಕಮಿಟ್‌ಮೆಂಟ್ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ದೀಪಿಕಾ ಹೊರ ಹೋಗಲು ಪ್ರಭಾಸ್ ಅವರ ಈ ಕಮಿಟ್‌ಮೆಂಟ್ ಕಾರಣ ಎಂದು ವರದಿ ಆಗಿದೆ.
ನಿರ್ಮಾಪಕ ಪ್ರಣಯ್ ರೆಡ್ಡಿ ವಂಗ ನೀಡಿರುವ ಮಾಹಿತಿಯಂತೆ, ‘ಸ್ಪಿರಿಟ್ ಚಿತ್ರದ ಶೂಟಿಂಗ್ ಈಗಾಗಲೇ ಶೇಕಡಾ 40ರಷ್ಟು ಪೂರ್ಣಗೊಂಡಿದೆ. ಉಳಿದ ಭಾಗದ ಚಿತ್ರೀಕರಣವನ್ನು ಮುಂದಿನ 2 ರಿಂದ 3 ತಿಂಗಳುಗಳಲ್ಲಿ ಮುಕ್ತಾಯಗೊಳಿಸಲು ನಾವು ಯೋಜನೆ ರೂಪಿಸಿದ್ದೇವೆ. ಈ ಸಿನಿಮಾಗಾಗಿ ಪ್ರಭಾಸ್ ದಿನಕ್ಕೆ ಬರೋಬ್ಬರಿ 16ರಿಂದ 17 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಸಾಮಾನ್ಯವಾಗಿ ಅದ್ದೂರಿ ಆಕ್ಷನ್ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳಿಗಾಗಿ ಬಾಡಿ ಡಬಲ್ ಬಳಸುವುದು ಸಹಜ. ಆದರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ತಮ್ಮ ಯಾವುದೇ ಸಿನಿಮಾಗಳಲ್ಲಿ ಬಾಡಿ ಡಬಲ್ ಬಳಸುವುದಿಲ್ಲ. ಹೀಗಾಗಿ ಪ್ರಭಾಸ್ ಅವರೇ ಖುದ್ದಾಗಿ ಎಲ್ಲಾ ಕಠಿಣ ಆಕ್ಷನ್ ಸೀನ್‌ಗಳಲ್ಲಿ ಭಾಗವಹಿಸುತ್ತಿದ್ದು, ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಯಾವುದೇ ಅವಘಡ ಆಗದಿರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಈ ನಡುವೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯೋಜನೆಯಿಂದ ಹೊರಬಂದಿದ್ದಾರೆ. ‘ಕಲ್ಕಿ 2898 AD’ ಚಿತ್ರದ ಯಶಸ್ಸಿನ ನಂತರ ಈ ಜೋಡಿ ಮತ್ತೆ ಒಂದಾಗಲಿದೆ ಎನ್ನಲಾಗಿತ್ತು. ಆದರೆ ಕಾಲ್ ಶೀಟ್, ಅಧಿಕ ಸಂಭಾವನೆ ಸಮಸ್ಯೆಯಿಂದಾಗಿ ದೀಪಿಕಾ ಈ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಕ್ಕೆ ಕೊನೆಗೂ ಅಸಲಿ ಕಾರಣ ಬಯಲು
ಪ್ರಭಾಸ್ ಈ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಾಸ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.