ರಾಮ್-ಉಪಾಸನಾ ಮಗಳು ಮಲಗುವುದು ಅಂಬಾನಿಯ ಚಿನ್ನದ ತೊಟ್ಟಿಲಿನಲ್ಲಿ ಅಲ್ಲ, ಅದಕ್ಕೂ ಮೀರಿದ ಮೌಲ್ಯವುಳ್ಳ ತೊಟ್ಟಿಲಲ್ಲಿ: ಯಾರು ಕೊಟ್ಟ ತೊಟ್ಟಿಲದು?
Upasana-Ram Charan: ರಾಮ್ ಚರಣ್ ಹಾಗೂ ಉಪಾಸನಾ ಮಗಳು, ಅಂಬಾನಿ ನೀಡಿರುವ ಚಿನ್ನದ ತೊಟ್ಟಿನಲ್ಲಿ ಮಲಗುವುದಿಲ್ಲ ಬದಲಿಗೆ ಅದಕ್ಕಿಂತಲೂ ಹೆಚ್ಚು 'ಮೌಲ್ಯ'ವುಳ್ಳ ತೊಟ್ಟಿಲಿನಲ್ಲಿ ಮಲಗಲಿದ್ದಾರೆ. ಆ ತೊಟ್ಟಿಲಿನ ವಿಶೇಷತೆ ಏನು? ತೊಟ್ಟಿಲು ಕೊಟ್ಟಿದ್ದು ಯಾರು? ಇಲ್ಲಿದೆ ಮಾಹಿತಿ...

ರಾಮ್ ಚರಣ್ (Ram Charan) ಹಾಗೂ ಉಪಾಸನಾ ಕಮ್ಮಿನೇನಿಗೆ (Upasana Kammineni) ಮುದ್ದಾದ ಹೆಣ್ಣು ಮಗು ಜನಿಸಿದೆ. ಲಲಿತಾ ಸಹಸ್ರನಾಮದಿಂದ ಸ್ಪೂರ್ತಿ ಪಡೆದು ಮಗುವಿಗೆ ಕ್ಲಿನ್ ಕಾರಾ (Klin Kaara) ಎಂದು ಹೆಸರಿಟ್ಟಿದ್ದಾರೆ. ಈ ಮಗುವಿಗೆಂದು ಮುಖೇಶ್ ಅಂಬಾನಿ ಚಿನ್ನದ ತೊಟ್ಟಿಲು ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆ ಸುದ್ದಿ ಸುಳ್ಳೆಂದು ಬಳಿಕ ಗೊತ್ತಾಯಿತು. ಒಂದೊಮ್ಮೆ ಅಂಬಾನಿ ಚಿನ್ನದ ತೊಟ್ಟಿಲು ಕೊಟ್ಟಿದ್ದರೂ ರಾಮ್-ಉಪಾಸನಾ ತಮ್ಮ ಮಗಳನ್ನು ಮಲಗಿಸುತ್ತಿದ್ದು ಆ ತೊಟ್ಟಿಲಿನಲ್ಲ, ಬದಲಿಗೆ ಅದಕ್ಕೂ ಮೀರಿದ ‘ಮೌಲ್ಯವುಳ್ಳ’ ತೊಟ್ಟಿಲಿನಲ್ಲಿ. ಮಗು ಹುಟ್ಟುವ ಮುಂಚೆಯೇ ಉಪಾಸನಾ ಆ ಬಗ್ಗೆ ನಿಶ್ಚಯ ಮಾಡಿ ಆಗಿತ್ತು. ಯಾವುದು ಆ ತೊಟ್ಟಿಲು? ಆ ತೊಟ್ಟಿಲು ಕೊಟ್ಟಿದ್ದು ಯಾರು? ಆ ತೊಟ್ಟಿಲಿನ ವಿಶೇಷತೆ ಏನು? ಇಲ್ಲಿ ತಿಳಿಯಿರಿ…
ಉಪಾಸನಾ-ರಾಮ್ರ ಮುದ್ದು ಮಗಳು ಮಲಗುವುದು ಯಾವುದೋ ವಿಶೇಷ ಭಾರಿ ದುಬಾರಿ ತೊಟ್ಟಿಲಿನಲ್ಲ ಬದಲಿಗೆ ತೀರ ಸಾಮಾನ್ಯವಾದ, ಎಲ್ಲರ ಮನೆಯಲ್ಲಿಯೂ ಇರಬಹುದಾದ ಮರದ ತೊಟ್ಟಿಲಿನಲ್ಲೇ. ಆದರೆ ಆ ತೊಟ್ಟಿಲನ್ನು ಮಾಡಿದ ಕೈಗಳು, ಉಡುಗೊರೆಯಾಗಿ ಉಪಾಸನಾಗೆ ಕೊಟ್ಟ ಕೈಗಳಿಂದಾಗಿ ಆ ತೊಟ್ಟಿಲಿಗೆ ಅಂಬಾನಿಯ ಚಿನ್ನದ ತೊಟ್ಟಿಲಿಗಿಂತಲೂ ಹೆಚ್ಚಿನ ಮೌಲ್ಯ ಒದಗಿದೆ.
ಉಪಾಸನಾಗೆ ನೀಡಲಾಗಿರುವ ತೊಟ್ಟಿಲನ್ನು ನಿರ್ಮಿಸಿರುವುದು ಸಾಮಾನ್ಯ ಮಹಿಳೆಯರಲ್ಲ. ಬಹಳ ದಿಟ್ಟ ಮಹಿಳೆಯರು. ಲೈಂಗಿಕ ದೌರ್ಜನಕ್ಕೆ ಒಳಗಾಗಿ ಅದರಿಂದ ಹೊರಬಂದು ಈಗ ತಮ್ಮ ಬದುಕನ್ನು ದೌರ್ಜನ್ಯದ ವಿರುದ್ಧ ಹೋರಾಡಲು ಮುಡುಪಾಗಿಟ್ಟಿರುವ ಮಹಿಳೆಯರಿಂದ. ಲೈಂಗಿಕ ಮಾನವ ಕಳ್ಳಸಾಗಣೆಯಂಥಹಾ ಕೆಟ್ಟ ಜಾಲದಿಂದ ಬದುಕುಳಿದು, ಈಗ ಅದೇ ಜಾಲದ ವಿರುದ್ಧ ಹೋರಾಡುತ್ತಿರುವ ದಿಟ್ಟ ಮಹಿಳೆಯರು ತಮ್ಮ ಕೈಗಳಿಂದ ಕೆತ್ತಿ ಸಿದ್ಧಪಡಿಸಿರುವ ಮರದ ತೊಟ್ಟಿಲಿನಲ್ಲಿ ರಾಮ್-ಉಪಾಸನಾ ಪುತ್ರಿ ಕ್ಲಿನ್ ಕಾರಾ ಮಲಗಳಿದ್ದಾಳೆ. ಈ ಉಡುಗೊರೆಯನ್ನು ಉಪಾಸನಾಗೆ ತಲುಪಿಸಿರುವುದು ದಿಟ್ಟ ಸಾಮಾಜಿಕ ಕಾರ್ಯಕರ್ತೆ ಬೆಂಗಳೂರು ಮೂಲದವರೇ ಆಗಿರುವ ಸುನಿತಾ ಕೃಷ್ಣನ್. ಮಗು ಜನಿಸುವ ಮುನ್ನವೇ ಈ ತೊಟ್ಟಿಲನ್ನು ಸುನಿತಾ ಕೃಷ್ಣನ್, ಉಪಾಸನಾಗೆ ನೀಡಿದ್ದರು.
ಇದನ್ನೂ ಓದಿ:ರಾಮ್ ಚರಣ್-ಉಪಾಸನಾ ಪುತ್ರಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದು ಯಾರು?
ದೌರ್ಜನ್ಯಕ್ಕೆ ಒಳಗಾದ ನೂರಾರು ಮಹಿಳೆಯರನ್ನು, ಮಕ್ಕಳನ್ನು ರಕ್ಷಿಸಿರುವ, ರಕ್ಷಿಸುತ್ತಲೇ ಇರುವ ಪ್ರಜ್ವಲಾ ಫೌಂಡೇಶನ್‌ನ ಸಂಸ್ಥಾಪಕಿ ಸುನಿತಾ ಕೃಷ್ಣನ್ ಅವರೊಟ್ಟಿಗೆ ಉಪಾಸನಾರಿಗೆ ಆಪ್ತ ನಂಟಿದೆ. ಸುನಿತಾ ಈಗ ತಮ್ಮ ಪ್ರಜ್ವಲಾ ಫೌಂಡೇಶನ್ ಮೂಲಕ ಉಡುಗೊರೆಯಾಗಿ ನೀಡಿರುವ ತೊಟ್ಟಿಲಿನ ವಿಡಿಯೋ, ಅದನ್ನು ನಿರ್ಮಿಸುತ್ತಿರುವ ಮಹಿಳೆಯರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಉಪಾಸನಾ ಹಂಚಿಕೊಂಡಿದ್ದು, ದಿಟ್ಟ ಮಹಿಳೆಯರು ನಿರ್ಮಿಸಿರುವ ಗಟ್ಟಿ ತೊಟ್ಟಿಲು ಎಂದು ಬರೆದುಕೊಂಡಿದ್ದಾರೆ.
”ಪ್ರಜ್ವಲಾ ಫೌಂಡೇಶನ್‌ನ ದಿಟ್ಟ ಮಹಿಳೆಯರಿಂದ ಈ ಹೃತ್ಪೂರ್ವಕ ಉಡುಗೊರೆಯನ್ನು ನಾವು ಗೌರವ ಮತ್ತು ವಿನಮ್ರತೆಯಿಂದ ಸ್ವೀಕರಿಸಿದ್ದೇವೆ. ಈ ಕರಕುಶಲ ತೊಟ್ಟಿಲು ಅಪಾರ ಮಹತ್ವವನ್ನು ಹೊಂದಿದೆ, ಇದು ಶಕ್ತಿ, ಸ್ಥಿತಿ ಸ್ಥಾಪಕತ್ವ ಮತ್ತು ಭರವಸೆಯನ್ನು ಸಂಕೇತಿಸುತ್ತದೆ. ಇದು ರೂಪಾಂತರ ಮತ್ತು ಸ್ವಾಭಿಮಾನದ ಪ್ರಯಾಣವನ್ನು ಪ್ರತಿನಿಧಿಸುತ್ತದೆ, ನನ್ನ ಮಗು ಹುಟ್ಟಿನಿಂದಲೇ ಈ ಎಲ್ಲ ಗುಣಗಳ ಪರಿಚಯ ಪಡೆದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ” ಎಂದಿದ್ದಾರೆ ಉಪಾಸನಾ.
ಪ್ರಜ್ವಲಾ ಫೌಂಡೇಶನ್ನೊಂದಿಗೆ ಹಾಗೂ ಸುನಿತಾ ಕೃಷ್ಣನ್ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಉಪಾಸನಾ ಹಾಗೂ ರಾಮ್. ಸುನಿತಾ ಕೃಷ್ಣನ್ ಹಲವು ಬಾರಿ ಕೊಲೆ ಯತ್ನಗಳು, ಆಸಿಡ್ ದಾಳಿಗಳಿಂದ ಪಾರಾಗಿಯೂ ತಮ್ಮ ಧ್ಯೇಯವನ್ನು ಬಿಡದೆ ಹೋರಾಡುತ್ತಿರುವ ದಿಟ್ಟ ಮಹಿಳೆ. ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರವು ಪದ್ಮಶ್ರೀ ನೀಡಿ ಗೌರವಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ