ನಟ ಪ್ರಕಾಶ್ ರೈಗೆ ಗಾಯ; ಹೈದರಾಬಾದ್ನಲ್ಲಿ ಶಸ್ತ್ರ ಚಿಕಿತ್ಸೆ: ಇಲ್ಲಿದೆ ಹೆಲ್ತ್ ಅಪ್ಡೇಟ್
ಮೂಲಗಳ ಪ್ರಕಾರ, ಧನುಷ್ ನಟನೆಯ ಹೊಸ ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದರು. ಚಿತ್ರೀಕರಣದ ವೇಳೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಸ್ವತಃ ಪ್ರಕಾಶ್ ರೈ ಮಾಹಿತಿ ಹಂಚಿಕೊಂಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರೈ (Prakash Rai) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಾಜಕೀಯದ ಸಿದ್ಧಾಂತದ ಸಲುವಾಗಿ ಎಷ್ಟೇ ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡರೂ ಕೂಡ ಅವರಿಗೆ ಇರುವ ಬೇಡಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಈ ನಡುವೆ ಪ್ರಕಾಶ್ ರೈ (Prakash Raj) ಅವರು ಶೂಟಿಂಗ್ ವೇಳೆ ಬಿದ್ದು ಪೆಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ. ತಕ್ಷಣ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡ ಬಳಿಕ ಅವರು ಹೈದರಾಬಾದ್ಗೆ ತೆರಳಿದ್ದಾರೆ. ಹೈದರಾಬಾದ್ನಲ್ಲಿ ಪ್ರಕಾಶ್ ರೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
ಮೂಲಗಳ ಪ್ರಕಾರ, ಧನುಷ್ ನಟನೆಯ ಹೊಸ ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದರು. ಚಿತ್ರೀಕರಣದ ವೇಳೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಸ್ವತಃ ಪ್ರಕಾಶ್ ರೈ ಮಾಹಿತಿ ಹಂಚಿಕೊಂಡಿದ್ದಾರೆ. ‘ಒಂದು ಸಣ್ಣ ಪೆಟ್ಟಾಗಿದೆ. ಶಸ್ತ್ರ ಚಿಕಿತ್ಸೆಗಾಗಿ ನನ್ನ ಸ್ನೇಹಿತ, ಡಾ. ಗುರುವರೆಡ್ಡಿ ಬಳಿ ತೆರಳುತ್ತಿದ್ದೇನೆ. ನಾನು ಬೇಗ ಗುಣಮುಖನಾಗುತ್ತೇನೆ. ಚಿಂತೆ ಮಾಡಬೇಕಾದ ಅಗತ್ಯ ಇಲ್ಲ. ನನಗಾಗಿ ಪ್ರಾರ್ಥಿಸಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
A small fall.. a tiny fracture.. flying to Hyderabad into the safe hands of my friend Dr Guruvareddy for a surgery. I will be fine nothing to worry .. keep me in your thoughts ??????
— Prakash Raj (@prakashraaj) August 10, 2021
ಇತ್ತೀಚೆಗೆ ಟಾಲಿವುಡ್ನ ಮೂವೀ ಆರ್ಟಿಸ್ಟ್ ಅಸೋಶಿಯೇಷನ್ (MAA) ಚುನಾವಣೆ ಕಾರಣಕ್ಕಾಗಿ ಪ್ರಕಾಶ್ ರೈ ಸುದ್ದಿ ಆಗಿದ್ದರು. MAA ಚುನಾವಣೆಯಲ್ಲಿ ಅವರು ಪ್ರೆಸಿಡೆಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಆದರೆ ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಪ್ರಕಾಶ್ ರೈ ಅವರು ಮೂಲತಃ ತೆಲುಗು ಕಲಾವಿದ ಅಲ್ಲ. ಹಾಗಾಗಿ ಅವರು ಮಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ತಕರಾರು ತೆಗೆಯಲಾಗಿದೆ. ಅದಕ್ಕೆ ಪ್ರಕಾಶ್ ರೈ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.
‘ನಾನು ತೆಲಂಗಾಣದಲ್ಲಿ ಒಂದು ಹಳ್ಳಿಯನ್ನು ದತ್ತು ಪಡೆದುಕೊಂಡಾಗ ಯಾರೂ ಕೂಡ ನಾನು ಸ್ಥಳೀಯನಲ್ಲ ಎಂದು ಹೇಳಲಿಲ್ಲ. ನನ್ನ ಸಹಾಯಕರಿಗಾಗಿ ನಾನು ಹೈದರಾಬಾದ್ನಲ್ಲಿ ಮನೆ ಖರೀದಿಸಿದೆ. ನನ್ನ ಮಗ ಹೈದರಾಬಾದ್ನ ಶಾಲೆಗೆ ಹೋಗುತ್ತಾನೆ. ನನ್ನ ಆಧಾರ್ ವಿಳಾಸ ಕೂಡ ಹೈದರಾಬಾದ್ನದ್ದು. ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ನನಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಯಾವುದೇ ವಿಚಾರಗಳಿಗೆ ನಾನು ಹೊರಗಿನವನು ಎಂಬುದು ಅಡ್ಡಬರಲಿಲ್ಲ. ಈಗ ಯಾಕೆ ಪ್ರಶ್ನೆ ಎದ್ದಿದೆ? ನಾನು ಸ್ಥಳೀಯನಲ್ಲ ಎಂದು ಕೇಳುವವರ ಸಂಕುಚಿತ ಮನೋಭಾವವನ್ನು ಇದು ತೋರಿಸುತ್ತದೆ’ ಎಂದು ಪ್ರಕಾಶ್ ರಾಜ್ ಹೇಳಿದ್ದರು.
ಇದನ್ನೂ ಓದಿ:
ಕನ್ನಡಿಗ ಎಂದು ಪ್ರಕಾಶ್ ರಾಜ್ರನ್ನು ಹೊರಗೆ ಇಡುತ್ತಿರುವ ಟಾಲಿವುಡ್; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?