ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಶುಕ್ರವಾರ ಶ್ವೇತಭವನಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸಂದರ್ಶನ ನಡೆಸಿರುವುದು ವಿಶೇಷ. ಈ ಸಂವಾದದ ವೇಳೆ ಪ್ರಿಯಾಂಕಾ ಚೋಪ್ರಾ ಗರ್ಭಪಾತ ಕಾನೂನುಗಳು, ವೇತನ ಸಮಾನತೆ ಮತ್ತು ಯುಎಸ್ಎ ನಲ್ಲಿನ ಬಂದೂಕು ಹಕ್ಕು ಸುಧಾರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಅಲ್ಲದೆ ತನ್ನ ವೃತ್ತಿಜೀವನದಲ್ಲಿದ್ದ ವೇತನ ಅಸಮಾನತೆಯ ಬಗ್ಗೆ ಕೂಡ ಪ್ರಿಯಾಂಕಾ ಚೋಪ್ರಾ ಮಾತನಾಡಿದರು. ಈ ವೇಳೆ ತನ್ನ 22 ವರ್ಷಗಳ ವೃತ್ತಿಜೀವನದಲ್ಲಿ ಈ ವರ್ಷ ನಾನು ಮೊದಲ ಬಾರಿಗೆ ಪುರುಷ ಸಹ-ನಟನೊಂದಿಗಿನ ಕೆಲಸದಲ್ಲಿ ಸಮಾನ ವೇತನವನ್ನು ಪಡೆದಿದ್ದೇನೆ ಎಂದು ಪಿಗ್ಗಿ ಬಹಿರಂಗಪಡಿಸಿದರು.
ಈ ವಿಶೇಷ ಸಂವಾದದ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ವೈಟ್ ಹೌಸ್‌ನ ಚಿತ್ರಗಳನ್ನು ಹಂಚಿಕೊಂಡರೆ, ಅವರ ಪತಿ ಗಾಯಕ ನಿಕ್ ಜೋನಾಸ್ ನ್ಯೂಯಾರ್ಕ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅಮೆರಿಕಾದ ಉಪಾಧ್ಯಕ್ಷೆಯನ್ನು ಸಂದರ್ಶಿಸಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗಷ್ಟೇ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಭಾರತದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಭಾರತದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಿಯಾಂಕಾ ಶ್ಲಾಘಿಸಿದ್ದರು. ಮೂರನೇ ವ್ಯಕ್ತಿಯನ್ನು ಸಂಪರ್ಕಿಸದೆ ಗರ್ಭಪಾತವನ್ನು ಪಡೆಯಲು ಮಹಿಳೆ “ಸಂತಾನೋತ್ಪತ್ತಿ ಸ್ವಾಯತ್ತತೆ” ಹೊಂದಿರಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಈ ಆದೇಶದ ಕುರಿತು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ, ಆಯ್ಕೆ ಮಾಡುವ ಹಕ್ಕು ಪ್ರಪಂಚದಾದ್ಯಂತ ಮಹಿಳೆಯರಿಗೆ ಇರಬೇಕಾದ ಏಕೈಕ ಹಕ್ಕಾಗಿದೆ. ಇದೊಂದು ಪ್ರಗತಿಪರ ಹೆಜ್ಜೆ ಎಂದು ಭಾರತದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ನಿರ್ಧಾರವನ್ನು ಸ್ವಾಗತಿಸಿದ್ದರು.
ಪ್ರಿಯಾಂಕಾ ಚೋಪ್ರಾ ತನ್ನ ಅಮೇರಿಕನ್ ಟಿವಿ ಶೋ ಕ್ವಾಂಟಿಕೋ ನಂತರ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ ಹಲವಾರು ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ರುಸ್ಸೋ ಬ್ರದರ್ಸ್ ನಿರ್ಮಿಸಿರುವ ಪ್ರೈಮ್ ವಿಡಿಯೋದ ಸಿಟಾಡೆಲ್‌ನೊಂದಿಗೆ ಪಿಗ್ಗಿ ಒಟಿಟಿ ಫ್ಲಾಟ್ಫಾರ್ಮ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದರ ಜೊತೆಗೆ ಅವರ ಅಭಿನಯದ ಎಂಡಿಂಗ್ ಥಿಂಗ್ಸ್ ಮತ್ತು ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ ಮುಂತಾದ ಹಾಲಿವುಡ್ ಚಿತ್ರಗಳು ಬಿಡುಗಡೆಯ ಹೊಸ್ತಿಲಲ್ಲಿದೆ.
ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ಅಂಗಳದಿಂದ ದೂರವೇ ಉಳಿದಿರುವ ಪಿಗ್ಗಿ ಫರ್ಹಾನ್ ಅಖ್ತರ್ ಅವರ ಜೀ ಲೆ ಝರಾ ಚಿತ್ರದ ಮೂಲಕ ಮತ್ತೆ ಹಿಂದಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರೊಂದಿಗೆ ಪ್ರಿಯಾಂಕಾ ಬಣ್ಣ ಹಚ್ಚಲಿರುವುದು ವಿಶೇಷ.