
ಖ್ಯಾತ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜು (Dil Raju) ಮತ್ತೆ ದೊಡ್ಡ ವ್ಯವಹಾರಕ್ಕೆ ಕೈಹಾಕಿದ್ದಾರೆ. ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ ಬೆನ್ನಲ್ಲೇ, ಈಗ ಯಶ್, ರಣ್ಬೀರ್, ಸಾಯಿ ಪಲ್ಲವಿ ಇನ್ನಿತರರು ನಟಿಸಿರುವ ‘ರಾಮಾಯಣ’ ಸಿನಿಮಾದ ಮೇಲೂ ಕಣ್ಣಿಟ್ಟಿದ್ದಾರೆ. ‘ರಾಮಾಯಣ’ ಸಿನಿಮಾಕ್ಕೆ ಭಾರಿ ದೊಡ್ಡ ಮೊತ್ತವನ್ನು ದಿಲ್ ರಾಜು ಆಫರ್ ಮಾಡಿದ್ದು, ಸಿನಿಮಾದ ತೆಲುಗು ರಾಜ್ಯಗಳ ವಿತರಣೆ ಖರೀದಿ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ.
ದಿಲ್ ರಾಜು ಅವರು ‘ಟಾಕ್ಸಿಕ್’ ಚಿತ್ರಕ್ಕಾಗಿ ತೆಲುಗು ರಾಜ್ಯಗಳ ಹಕ್ಕುಗಳನ್ನು ರಿಟರ್ನಬಲ್ ಆಧಾರದ ಮೇಲೆ ಪಡೆದುಕೊಂಡಿದ್ದರು. ಮೊದಲು 108 ಕೋಟಿ ರೂಪಾಯಿಗೆ ಮಾತುಕತೆ ನಡೆದಿತ್ತು. ಆ ನಂತರ ಈ ಮೊತ್ತವನ್ನು 80 ಕೋಟಿ ರೂಪಾಯಿಗೆ ಪರಿಷ್ಕರಿಸಲಾಯಿತು. ಇತ್ತೀಚಿನ ವರದಿಯ ಪ್ರಕಾರ ಕೊನೆಯ ಕ್ಷಣದಲ್ಲಿ ವಿತರಕರು ಸುಮಾರು 75 ಕೋಟಿ ರೂಪಾಯಿ ಪಾವತಿಸಿದ್ದಾರೆ.
ಹಣ ಹಿಂತಿರುಗಿಸುವ ಈ ಒಪ್ಪಂದದ ಮಾದರಿಯಿಂದಾಗಿ ನಿರ್ಮಾಪಕರಿಗೆ ನೇರ ನಷ್ಟದ ಭೀತಿ ಕಡಿಮೆಯಿರುತ್ತದೆ. ಆದರೂ ‘ಕೆಜಿಎಫ್’ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಯಶ್ ಅವರ ಈ ಸಿನಿಮಾ ಮೇಲೆ ತೆಲುಗು ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆ ಇತ್ತು. ಈ ಮಾದರಿಯ ವ್ಯವಹಾರವು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.
ಇದನ್ನೂ ಓದಿ:‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಮಾಡಿದವರ ಮೇಲೆ ಯಶ್ ತಾಯಿ ಗರಂ
ಈಗ ‘ರಾಮಾಯಣ’ ಚಿತ್ರಕ್ಕಾಗಿ ಮತ್ತೊಂದು ಬೃಹತ್ ಮೊತ್ತದ ಮಾತುಕತೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಚೆನ್ನೈನಲ್ಲಿ ವಿತರಕರಿಗಾಗಿ ಆಯೋಜಿಸಿದ್ದ ‘ರಾಮಾಯಣ’ ಸಿನಿಮಾದ ವಿಶೇಷ ಶೋನಲ್ಲಿ ದಿಲ್ ರಾಜು ಭಾಗವಹಿಸಿದ್ದರು. ಸಿನಿಮಾ ದಿಲ್ ರಾಜುಗೆ ಬಹಳ ಮೆಚ್ಚುಗೆ ಆಗಿದ್ದು, ತೆಲುಗು ರಾಜ್ಯಗಳ ಥಿಯೇಟ್ರಿಕಲ್ ಹಕ್ಕುಗಳಿಗಾಗಿ ದಿಲ್ ರಾಜು ಸುಮಾರು 105 ಕೋಟಿ ರೂಪಾಯಿ ಆಫರ್ ಅನ್ನು ನಿರ್ಮಾಪಕಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಡೀಲ್ ಕೂಡ ರಿಟರ್ನಬಲ್ ಅಡ್ವಾನ್ಸ್ ಆಧಾರದ ಮೇಲೆಯೇ ನಡೆಯುತ್ತಿದೆ ಎಂದು ವರದಿಯಾಗಿದೆ.
ಇದೇ ಸಿನಿಮಾದ ಹಿಂದಿ ಆವೃತ್ತಿಯ ವಿತರಣೆ ಹಕ್ಕನ್ನು ಕರಣ್ ಜೋಹರ್ 250 ಕೋಟಿ ರೂಪಾಯಿ ಬೃಹತ್ ಮೊತ್ತಕ್ಕೆ ಖರೀದಿ ಮಾಡಿದ್ದಾರೆ. ಆದರೆ ಹಿಂದಿ ಮಾರುಕಟ್ಟೆ ಬಲು ದೊಡ್ಡದು. ಅದಕ್ಕೆ ಹೋಲಿಸಿದರೆ ತೆಲುಗು ರಾಜ್ಯಗಳಿಗೆ ತುಸು ಹೆಚ್ಚೇ ಮೊತ್ತವನ್ನು ದಿಲ್ ರಾಜು ಆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ. ತೆಲುಗು ಚಿತ್ರರಂಗದ ಕೆಲ ಬಾಕ್ಸ್ ಆಫೀಸ್ ಪಂಡಿತರು ‘ಹುಚ್ಚು ಸಾಹಸ’ ಎಂದು ಸಹ ಬಣ್ಣಿಸಿದ್ದಾರೆ.
ದಿಲ್ ರಾಜು ಅವರಿಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆ ಮತ್ತು ತೆಲುಗು ಮಾರುಕಟ್ಟೆಯ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇದೆ. ಆದರೆ ‘ಟಾಕ್ಸಿಕ್’ ಅನುಭವದ ನಂತರ ಅವರು ‘ರಾಮಾಯಣ’ ಚಿತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತ ಹೂಡುತ್ತಿರುವುದು ಕುತೂಹಲ ಮೂಡಿಸಿದೆ. ಈ ರಿಸ್ಕಿ ನಿರ್ಧಾರವನ್ನು ಅವರು ಕೈಗೂಡಿಸಿಕೊಳ್ಳುತ್ತಾರಾ ಎಂಬುದನ್ನು ಇಡೀ ಚಿತ್ರರಂಗ ಕಾದು ನೋಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Sun, 30 August 26