‘ಪುಷ್ಪ 2’ ನೋಡಲು ಬಂದಾಗ ಅವಘಡ; ಮೃತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಕೊಟ್ಟ ಅಲ್ಲು ಅರ್ಜುನ್

‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಅವರ ಪುತ್ರ ಶ್ರೀತೇಜ ಗಾಯಗೊಂಡಿದ್ದಾರೆ. ಈ ದುರ್ಘಟನೆಯಿಂದ ಆಘಾತಗೊಂಡ ಅಲ್ಲು ಅರ್ಜುನ್, ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಮತ್ತು ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.

‘ಪುಷ್ಪ 2’ ನೋಡಲು ಬಂದಾಗ ಅವಘಡ; ಮೃತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಕೊಟ್ಟ ಅಲ್ಲು ಅರ್ಜುನ್
ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on:Dec 07, 2024 | 10:50 AM

ಅಲ್ಲು ಅರ್ಜುನ ಅಭಿನಯದ ‘ಪುಷ್ಪ 2’ ಚಿತ್ರ ಗುರುವಾರ (ಡಿಸೆಂಬರ್ 5) ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಸಿನಿಮಾ ರಿಲೀಸ್​ಗೂ ಹಿಂದಿನ ದಿನ ಎಲ್ಲ ಕಡೆಗಳಲ್ಲಿ ಪ್ರೀಮಿಯರ್ ಶೋ ಇಡಲಾಗಿತ್ತು. ಹೈದರಾಬಾದ್​ನ ಐಕಾನಿಕ್ ಥಿಯೇಟರ್​ಗಳಲ್ಲಿ ಒಂದಾದ ‘ಸಂಧ್ಯಾ’ದಲ್ಲೂ ಈ ಸಿನಿಮಾ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ವೀಕ್ಷಣೆಗೆ ಅಲ್ಲು ಅರ್ಜುನ್ ಕೂಡ ಬರಲಿದ್ದಾರೆ ಎಂದು ತಿಳಿಯುತ್ತಿದ್ದಂತೆ ಥಿಯೇಟರ್​ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಈ ವೇಳೆ ಅವಘಡ ಸಂಭವಿಸಿತ್ತು.

‘ಪುಷ್ಪ 2’ ಚಿತ್ರ ವೀಕ್ಷಿಸಲು ಬಂದಿದ್ದ ರೇವತಿ ಹಾಗೂ ಅವರ ಪುತ್ರ ಶ್ರೀತೇಜ ಕಾಲ್ತುಳಿತದಿಂದ ಗಾಯಗೊಂಡಿದ್ದರು. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ರೇವತಿ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾರೆ. ಅವರ ಪುತ್ರ ಶ್ರೀತೇಜ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇವತಿ ಸಾವಿನಿಂದ ಇಡೀ ಕುಟುಂಬ ಶಾಕ್​ಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಅವರು ರೇವತಿ ಸಾವಿನ ಕುರಿತು ಪ್ರತಿಕ್ರಿಯಿಸಿದ್ದಾರೆ. ಮೃತರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

‘ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆ ಕೇಳಿ ಆಘಾತವಾಯಿತು. ಇಬ್ಬರ ಮಕ್ಕಳ ತಾಯಿ ರೇವತಿ ನಿಧನ ಹೊಂದಿದ ವಿಚಾರ ತಿಳಿಯಿತು. ಆ ಕಾರಣದಿಂದಲೇ ಪುಷ್ಪ 2 ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಜನ ಥಿಯೇಟರ್​ಗೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡಬೇಕೆಂಬ ಆಶಯದಿಂದ ಸಿನಿಮಾ ಮಾಡುತ್ತೇವೆ. ಥಿಯೇಟರ್​​ನಲ್ಲಿ ಈ ರೀತಿ ಘಟನೆ ನಡೆದಾಗ ಬೇಸರ ಆಗುತ್ತದೆ’ ಎಂದಿದ್ದಾರೆ ಅಲ್ಲು ಅರ್ಜುನ್.

ಇದನ್ನೂ ಓದಿ: ಕರ್ನಾಟಕದಲ್ಲಿ ‘ಪುಷ್ಪ 2’ ದಾಖಲೆಯ ಕಲೆಕ್ಷನ್; ತೆಲುಗು ಸಿನಿಮಾ ನಮ್ಮಲ್ಲಿ ಇಷ್ಟೊಂದು ಗಳಿಸಿದ್ದು ಇದೇ ಮೊದಲು

‘ನಾವು ಏನೇ ಮಾಡಿದರೇ ಈ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ನಿಮಗಾಗಿ ನಾವು ಇದ್ದೇವೆ. ರೇವತಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ನನ್ನ ಪರವಾಗಿ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡುತ್ತಿದ್ದೇವೆ. ವೈದ್ಯಕೀಯ ಖರ್ಚನ್ನು ನಾವೇ ನೀಡುತ್ತೇವೆ. ನಮ್ಮ ತಂಡದಿಂದ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಶೀಘ್ರದಲ್ಲೇ ರೇವತಿ ಕುಟುಂಬವನ್ನು ಖುದ್ದಾಗಿ ಭೇಟಿ ಮಾಡುತ್ತೇವೆ’ ಎಂದು ಬನ್ನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:49 am, Sat, 7 December 24