ಟ್ರೋಲಿಗರಿಗೆ ರಶ್ಮಿಕಾ ಟಾರ್ಗೆಟ್ ಆಗೋದು ಯಾಕೆ? ಕಿರಿಕ್ ಬೆಡಗಿಯ ರೀಸೆಂಟ್ ಟ್ರೋಲ್ ಇತಿಹಾಸ ಇಲ್ಲಿದೆ..
Rashmika Mandanna Birthday: ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಹಲವು ಬಾರಿ ಟ್ರೋಲ್ ಆಗಿದ್ದುಂಟು. ಆದರೆ ಈ ನೆಗೆಟಿವಿಟಿ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಕನ್ನಡದಿಂದ ಸಿನಿಮಾ ಜರ್ನಿ ಆರಂಭಿಸಿದ ಅವರು ಇಂದು ಬಾಲಿವುಡ್ನಲ್ಲೂ ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ಅವರು ಹೈದರಾಬಾದ್, ಚೆನ್ನೈ, ಮುಂಬೈ ಮುಂತಾದ ನಗರಗಳ ನಡುವೆ ಓಡಾಟ ನಡೆಸುತ್ತಿದ್ದಾರೆ. ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳು ಇವೆ. ರಶ್ಮಿಕಾ ಮಂದಣ್ಣ ಎಲ್ಲೇ ಹೋದರೂ ಅವರನ್ನು ಪಾಪರಾಜಿ ಕ್ಯಾಮೆರಾಗಳು ಫಾಲೋ ಮಾಡುತ್ತವೆ. ಅವರ ಅನೇಕ ಫೋಟೋ (Rashmika Mandanna Photos) ಮತ್ತು ವಿಡಿಯೋಗಳು ವೈರಲ್ ಆಗುತ್ತವೆ. ಆ ಫೋಟೋಗಳಲ್ಲಿ ನೆಟ್ಟಿಗರು ಏನಾದರೊಂದು ಲೋಪವನ್ನು ಕಂಡು ಹಿಡಿಯುತ್ತಾರೆ. ಅದನ್ನೇ ಇಟ್ಟುಕೊಂಡು ಟ್ರೋಲ್ ಮಾಡುತ್ತಾರೆ. ಈ ಕಾರಣದಿಂದ ಆಗಾಗ ರಶ್ಮಿಕಾ ಟ್ರೋಲ್ (Rashmika Mandanna Troll) ಕಾಟಕ್ಕೆ ಒಳಗಾಗುತ್ತಾರೆ. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಕೆಲವರು ನೆಗೆಟಿವ್ ಕಮೆಂಟ್ ಮಾಡುತ್ತಾರೆ. ಹಾಗಂತ ಆ ನೆಗೆಟಿವಿಟಿ ಬಗ್ಗೆ ರಶ್ಮಿಕಾ ಹೆಚ್ಚು ಗಮನ ಹರಿಸುವುದಿಲ್ಲ. ನೆಟ್ಟಿಗರು ಟ್ರೋಲ್ ಮಾಡುವುದನ್ನೂ ನಿಲ್ಲಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಹಲವು ಬಾರಿ ಟ್ರೋಲ್ ಆಗಿದ್ದುಂಟು. ಆ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ..
ಹಿಂದಿ ಪ್ರೇಕ್ಷಕರು ಗರಂ ಆದ್ರು: ನಟಿ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸುವ ಮೂಲಕ ದೊಡ್ಡ ಮಟ್ಟದ ಗೆಲುವು ಪಡೆದುಕೊಂಡರು. ಆ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಯಿತು. ‘ಪುಷ್ಪ’ ಹಿಂದಿ ಅವತರಣಿಕೆಯನ್ನು ಪ್ರಚಾರ ಮಾಡುವಾಗ ರಶ್ಮಿಕಾ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಆಗ ಅವರು ಹಿಂದಿಯಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದರು. ಅವರ ಹಿಂದಿ ಉಚ್ಛಾರಣೆ ಸರಿಯಿಲ್ಲ ಎಂಬ ಕಾರಣಕ್ಕೆ ಜನರು ಟ್ರೋಲ್ ಮಾಡಿದ್ದರು.
‘ನ್ಯಾಷನಲ್ ಕ್ರಶ್’ ಬಿರುದಿಗೆ ತಕರಾರು:
ರಶ್ಮಿಕಾ ಮಂದಣ್ಣ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ಆದರೆ ಅದನ್ನು ಎಲ್ಲರೂ ಒಪ್ಪಿಕೊಂಡಿಲ್ಲ. ಇದೇ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ನಡೆಯುತ್ತದೆ. ‘ಪುಷ್ಪ’ ಚಿತ್ರದ ಪ್ರಚಾರಕ್ಕಾಗಿ ರಶ್ಮಿಕಾ ಅವರು ಮುಂಬೈಗೆ ತೆರಳಿದ್ದಾಗಿನ ಸಂದರ್ಭದ ಕೆಲವು ವಿಡಿಯೋಗಳು ವೈರಲ್ ಆಗಿದ್ದವು. ಅವುಗಳಿಗೆ ಕಮೆಂಟ್ ಮಾಡಿದ ಉತ್ತರ ಭಾರತದ ಸಿನಿಪ್ರಿಯರು ‘ನ್ಯಾಷನಲ್ ಕ್ರಶ್’ ಎಂಬ ಬಿರುದಿನ ಬಗ್ಗೆ ಅಪಸ್ವರ ಎತ್ತಿದ್ದರು.
ಶಾರ್ಟ್ ಡ್ರೆಸ್ ಧರಿಸಿದ್ದಕ್ಕೆ ಟ್ರೋಲ್:
ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅವರು ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡರು. ಅಂದು ಅವರು ಓವರ್ ಸೈಜ್ ಆದ ಶರ್ಟ್ ಧರಿಸಿದ್ದರು. ಅದಕ್ಕೆ ಕಮೆಂಟ್ ಮಾಡಿದ ಅನೇಕರು ಟ್ರೋಲ್ ಮಾಡಿದರು. ರಶ್ಮಿಕಾ ಪ್ಯಾಂಟ್ ಧರಿಸುವುದನ್ನು ಮರೆತಿದ್ದಾರೆ ಎಂದು ನೆಟ್ಟಿಗರು ಅಪಹಾಸ್ಯ ಮಾಡಿದರು.
ಮಕ್ಕಳು ಬೇಡಿಕೊಂಡ್ರೂ ರಶ್ಮಿಕಾ ಸಹಾಯ ಮಾಡಲಿಲ್ಲ:
2022ರ ಆರಂಭದಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಅವರ ಬಳಿ ಸಹಾಯ ಕೇಳಿಕೊಂಡು ಇಬ್ಬರು ಮಕ್ಕಳು ಬಂದಿದ್ದರು. ದಯವಿಟ್ಟು ಏನಾದರೂ ಕೊಡಿ, ಊಟ ಮಾಡಬೇಕು ಎಂದು ಆ ಹೆಣ್ಣು ಮಕ್ಕಳು ಬೇಡಿಕೊಂಡರು. ಆದರೆ ಕೊಡಲು ತಮ್ಮ ಬಳಿ ಏನೂ ಇಲ್ಲ ಎಂದು ರಶ್ಮಿಕಾ ಕೈ ಚೆಲ್ಲಿದರು. ಮಕ್ಕಳನ್ನು ನಿರ್ಲಕ್ಷಿಸಿ ಕಾರಿನಲ್ಲಿ ಕುಳಿತು ಹೊರಟು ಹೋದರು. ಈ ವಿಡಿಯೋ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದರು.
ಓವರ್ ಆ್ಯಕ್ಟಿಂಗ್ ಅಂತಾರೆ ಟ್ರೋಲಿಗರು:
ಮುಂಬೈನಲ್ಲಿ ರಶ್ಮಿಕಾ ಅವರು ಕಾಣಿಸಿಕೊಂಡಾಗ ಪಾಪರಾಜಿಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಫೋಟೋ ತೆಗೆಯಲು ಮುಗಿ ಬೀಳುತ್ತಾರೆ. ಈ ಸಂದರ್ಭದಲ್ಲಿ ರಶ್ಮಿಕಾ ಅವರು ತುಂಬ ಕಾನ್ಫಿಡೆಂಟ್ ಆಗಿ ಪೋಸ್ ನೀಡುತ್ತಾರೆ. ಆದರೆ ಅದನ್ನು ನೋಡಿದ ನೆಟ್ಟಿಗರು ನೆಗೆಟಿವ್ ಕಮೆಂಟ್ ಮಾಡಿದ್ದಕ್ಕೆ ಹಲವು ಉದಾಹರಣೆ ಇದೆ. ರಶ್ಮಿಕಾ ಓವರ್ ಆ್ಯಕ್ಟಿಂಗ್ ಮಾಡುತ್ತಾರೆ ಎಂಬುದು ಬಹುತೇಕ ಮಂದಿಯ ತಕರಾರು.
ಕನ್ನಡದಲ್ಲಿ ಡಬ್ ಮಾಡಲು ಟೈಮ್ ಇಲ್ಲ ಅಂದಿದ್ರು:
‘ಪುಷ್ಪ’ ಸಿನಿಮಾ ಹಲವು ಭಾಷೆಗೆ ಡಬ್ ಆಗಿತ್ತು. ರಶ್ಮಿಕಾ ಮಂದಣ್ಣ ಕನ್ನಡದವರು. ಆದರೆ ‘ಪುಷ್ಪ’ ಸಿನಿಮಾದ ಕನ್ನಡ ವರ್ಷನ್ಗೆ ಅವರು ಡಬ್ ಮಾಡಿರಲಿಲ್ಲ. ಯಾಕೆ ಎಂದು ಕೇಳಿದ್ದಕ್ಕೆ ‘ಅಷ್ಟು ಟೈಮ್ ಇಲ್ಲ’ ಎಂದು ಅವರು ಉತ್ತರ ನೀಡಿದ್ದರು. ಆ ವಿಚಾರವನ್ನು ಇಟ್ಟುಕೊಂಡು ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು.
ವಿಕ್ಕಿ ಕೌಶಲ್ ಜೊತೆ ನಟಿಸಿದ ಜಾಹೀರಾತಿನಲ್ಲೂ ಕಿರಿಕ್:
ನಟ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರು ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಗಂಡಸರ ಒಳ ಉಡುಪು ನೋಡಿ ಮೈ ಮರೆಯುವ ಯೋಗ ಟೀಚರ್ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದರು. ಆ ಜಾಹೀರಾತಿನ ಕಾನ್ಸೆಪ್ಟ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದರು.
ಟ್ರೋಲ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ:
ಸಿನಿಮಾ ವಿಮರ್ಶಕಿ ಅನುಪಮಾ ಚೋಪ್ರಾಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರು ಟ್ರೋಲ್ ಬಗ್ಗೆ ಮಾತನಾಡಿದ್ದರು. ‘ಆರಂಭದಲ್ಲಿ ಟ್ರೋಲ್ಗಳನ್ನು ಸಹಿಸುವುದು ತುಂಬ ಕಷ್ಟ ಆಗುತ್ತಿತ್ತು. ನಮ್ಮದು ಫಿಲ್ಮೀ ಕುಟುಂಬ ಅಲ್ಲ. ಇಲ್ಲಿ ಎಲ್ಲವೂ ನನಗೆ ಹೊಸದಾಗಿತ್ತು. ಜನರು ನನ್ನನ್ನು ಟ್ರೋಲ್ ಮಾಡಿದಾಗ ನಾನು ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೆ. ಉಸಿರು ಕಟ್ಟಿಸುವಂತಹ ವಾತಾವರಣ ನಿರ್ಮಾಣ ಆಗಿತ್ತು. ಜನರು ಎಲ್ಲದರ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ನಿಮ್ಮ ದೇಹ, ಬಣ್ಣ, ರಿಲೇಷನ್ಶಿಪ್ ಸೇರಿದಂತೆ ಎಲ್ಲದರ ಬಗ್ಗೆಯೂ ಜನ ಕಮೆಂಟ್ ಮಾಡುತ್ತಾರೆ. ಚಿಕ್ಕ ಹುಡುಗಿಗೆ ಇದನ್ನೆಲ್ಲ ಸಹಿಸಿಕೊಳ್ಳೋಕೆ ಆಗಲ್ಲ. ತುಂಬ ನೋವಾಗುತ್ತದೆ. ಹಾಗಾಗಿ ನಾನು ಅದರ ಬಗ್ಗೆ ಎಷ್ಟೋ ಬಾರಿ ಮಾತನಾಡಬೇಕಾದ ಅನಿವಾರ್ಯತೆ ಎದುರಾಯಿತು. ಕೆಲಸದ ಬಗ್ಗೆ ಕಮೆಂಟ್ ಮಾಡಿದರೆ ತೊಂದರೆ ಇಲ್ಲ. ಆದರೆ, ನನ್ನ ಬಾಲ್ಯದ ಫೋಟೋ ಬಗ್ಗೆ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟ ಕಮೆಂಟ್ ಮಾಡುವುದು ಸರಿಯಲ್ಲ. ನಾನು 19ನೇ ವಯಸ್ಸಿನಲ್ಲಿ ಇದ್ದಾಗಿನಿಂದಲೂ ಈ ಟ್ರೋಲ್ ಕಾಟ ಶುರುವಾಯಿತು. ಆದರೆ ಈಗ ನಾನು ಈ ವಿಚಾರದಲ್ಲಿ ಕಲ್ಲಾಗಿದ್ದೇನೆ. ಇಂದು ಯಾವುದೇ ಟ್ರೋಲ್ ಕೂಡ ನನಗೆ ಮುಖ್ಯವಾಗುವುದಿಲ್ಲ. ಅದನ್ನೆಲ್ಲ ನಾನು ತುಂಬ ಹಗುರವಾಗಿ ತೆಗೆದುಕೊಳ್ಳುತ್ತೇನೆ. ಎಲ್ಲ ಸ್ಟಾರ್ಗಳು ಸಹ ಇದೇ ರೀತಿ ಆಗಿರುತ್ತಾರೆ ಎನಿಸುತ್ತದೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು.
ಇದನ್ನೂ ಓದಿ:
‘ನಿಮ್ಮಲ್ಲಿ ತುಂಬ ಜನರಿಗೆ ಇದು ಇಷ್ಟ ಆಗಲ್ಲ’ ಎನ್ನುತ್ತಲೇ ಹೊಸ ಫೋಟೋ ಹಂಚಿಕೊಂಡ ರಶ್ಮಿಕಾ; ಏನಿದು ವಿಷಯ?
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್; ಎನರ್ಜಿ ಕಂಡು ವಾವ್ ಎಂದ ಅಭಿಮಾನಿಗಳು
Published On - 7:15 am, Tue, 5 April 22