ತಾವು ಓದಿದ ಸರ್ಕಾರಿ ಶಾಲೆಗೆ 18 ಲಕ್ಷ ರೂ. ದೇಣಿಗೆ ನೀಡಿದ ‘ಪುಷ್ಪ’ ನಿರ್ದೇಶಕ ಸುಕುಮಾರ್​

| Updated By: ಮದನ್​ ಕುಮಾರ್​

Updated on: Aug 04, 2021 | 1:18 PM

ತಾವು ಓದಿದ ಸರ್ಕಾರಿ ಶಾಲೆಯ ಬಗ್ಗೆ ‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರು ಇಂದಿಗೂ ಗೌರವ ಭಾವನೆ ಹೊಂದಿದ್ದಾರೆ. ಈಗ ಅವರು ನೀಡಿರುವ 18 ಲಕ್ಷ ರೂ. ದೇಣಿಗೆ ಹಣದಿಂದ ಶಾಲೆಯಲ್ಲಿ ಎರಡು ಹೊಸ ಕ್ಲಾಸ್​ ರೂಮ್​ಗಳನ್ನು ಕಟ್ಟಲಾಗಿದೆ.

ತಾವು ಓದಿದ ಸರ್ಕಾರಿ ಶಾಲೆಗೆ 18 ಲಕ್ಷ ರೂ. ದೇಣಿಗೆ ನೀಡಿದ ‘ಪುಷ್ಪ’ ನಿರ್ದೇಶಕ ಸುಕುಮಾರ್​
ನಿರ್ದೇಶಕ ಸುಕುಮಾರ್​
Follow us on

ಟಾಲಿವುಡ್​ನ ಸ್ಟಾರ್​ ನಿರ್ದೇಶಕ ಸುಕುಮಾರ್​ (Sukumar) ಅವರು ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಸಿನಿಮಾಗಳಲ್ಲಿ ಬಡವರ ಪರವಾಗಿ ಧ್ವನಿ ಎತ್ತಿರುವ ಅವರು ರಿಯಲ್​ ಲೈಫ್​ನಲ್ಲಿಯೂ ವಿಶಾಲ ಹೃದಯ ಹೊಂದಿದ್ದಾರೆ. ಅದಕ್ಕೆ ಈಗೊಂದು ಲೇಟೆಸ್ಟ್​ ಉದಾಹರಣೆ ಸಿಕ್ಕಿದೆ. ದಶಕಗಳ ಹಿಂದೆ ತಾವು ಓದಿದ್ದ ಸರ್ಕಾರಿ ಶಾಲೆಗೆ (Government School) ಬರೋಬ್ಬರಿ 18 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಸುಕುಮಾರ್​​ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಅಲ್ಲು ಅರ್ಜುನ್​ (Allu Arjun) ನಟನೆಯ ‘ಪುಷ್ಪ’ (Pushpa The Rise) ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವ ಅವರು ಈ ಸಮಾಜಸೇವೆಯ ಕಾರಣದಿಂದ ಸುದ್ದಿ ಆಗಿದ್ದಾರೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮತ್ತಪರು ಗ್ರಾಮದಲ್ಲಿ ಸುಕುಮಾರ್​ ಅವರು ಶಿಕ್ಷಣ ಪಡೆದಿದ್ದರು. ತಾವು ಓದಿದ ಆ ಸರ್ಕಾರಿ ಶಾಲೆಯ ಬಗ್ಗೆ ಅವರು ಇಂದಿಗೂ ಗೌರವ ಭಾವನೆ ಹೊಂದಿದ್ದಾರೆ. ಈಗ ಅವರು ನೀಡಿರುವ 18 ಲಕ್ಷ ರೂ. ದೇಣಿಗೆ ಹಣದಿಂದ ಶಾಲೆಯಲ್ಲಿ ಎರಡು ಹೊಸ ಕ್ಲಾಸ್​ ರೂಮ್​ಗಳನ್ನು ಕಟ್ಟಲಾಗಿದೆ. ಅದರಲ್ಲಿ ಒಂದು ಡಿಜಿಟಲ್​ ಕ್ಲಾಸ್​ ರೂಮ್​ ಒಳಗೊಂಡಿದೆ. ಇತ್ತೀಚೆಗೆ ಇವುಗಳನ್ನು ಉದ್ಘಾಟಿಸಲಾಯಿತು. ಆ ಕಾರ್ಯಕ್ರಮದಲ್ಲಿ ಸುಕುಮಾರ್​, ಜನಸೇನಾ ಶಾಸಕ ರಾಪಕ ವರಪ್ರಸಾದ್​ ಮುಂತಾದ ಗಣ್ಯರು ಭಾಗವಹಿಸಿದ್ದರು.

ಸುಕುಮಾರ್​ ಅವರ ಕಾರ್ಯಕ್ಕೆ ಶಾಸಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ‘ಜೀವನದಲ್ಲಿ ಹಣ ಗಳಿಸಿದ ಜನರು ತಾವು ಬೆಳೆದು ಬಂದ ಊರನ್ನು ಮರೆತುಬಿಡುತ್ತಾರೆ. ​ಕುಟುಂಬದವರನ್ನೂ ಮರೆತು ಹೈದರಾಬಾದ್​ ಮುಂತಾದ ಸಿಟಿಯಲ್ಲಿ ನೆಲೆಸುತ್ತಾರೆ. ಬಡತನದ ಕುಟುಂಬದಲ್ಲಿ ಬೆಳೆದ ಸುಕುಮಾರ್​ ಈಗ ಅವರ ಸಹೋದರ-ಸಹೋದರಿಯರಿಗೆ ನೆರವಾಗಿದ್ದಾರೆ. ಇತ್ತೀಚೆಗೆ ಅವರು ಕೊರೊನಾ ಎರಡನೇ ಅಲೆ ಜೋರಾದಾಗ 45 ಲಕ್ಷ ರೂ. ಖರ್ಚು ಮಾಡಿ ಆಕ್ಸಿಜನ್​ ಪ್ಲಾಂಟ್​ ಸ್ಥಾಪಿಸಿದ್ದರು’ ಎಂದು ಸುಕುಮಾರ್​ ಅವರ ಸಮಾಜಸೇವೆಯನ್ನು ಶಾಸಕ ವರಪ್ರಸಾದ್​ ಶ್ಲಾಘಿಸಿದ್ದಾರೆ.

ಸಕುಮಾರ್​ ನಿರ್ದೇಶನದ ‘ಪುಷ್ಪ’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಈ ಸಿನಿಮಾ 2021ರ ಕ್ರಿಸ್​ಮಸ್​ಗೆ ಬಿಡುಗಡೆ ಆಗಲಿದೆ. ಎರಡು ಪಾರ್ಟ್​ಗಳಲ್ಲಿ ಸಿನಿಮಾ ಮೂಡಿಬರಲಿದ್ದು, ಮೊದಲ ಭಾಗಕ್ಕೆ ‘Pushpa- The Rise’ ಎಂದು ಶೀರ್ಷಿಕೆ ಇಡಲಾಗಿದೆ.

ಇದನ್ನೂ ಓದಿ:

Pushpa: ‘ಪುಷ್ಪ’ ರಿಲೀಸ್​ ಡೇಟ್​ ಜೊತೆಗೆ ಮತ್ತೊಂದು ಮುಖ್ಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅಲ್ಲು ಅರ್ಜುನ್​

ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್​ ಚಾರಿಟೇಬಲ್​ ಟ್ರಸ್ಟ್​