ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್
ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ದತ್ತು ಪಡೆದುಕೊಂಡಿದೆ. ಈ ಶಾಲೆ ಅಂದಾಜು 133 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ.
ಕಿಚ್ಚ ಸುದೀಪ್ (Kichcha Sudeep) ಅವರು ಮಾಡಿರುವ ಸಮಾಜಮುಖಿ ಕಾರ್ಯಗಳು ಒಂದೆರಡಲ್ಲ. ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅವರು ಸದ್ದಿಲ್ಲದೇ ಅನೇಕ ಕೆಲಸಗಳನ್ನು ಮಾಡುತ್ತಿರುತ್ತಾರೆ. ಆ ಸಲುವಾಗಿಯೇ ‘ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್’ (Kichcha Sudeep Charitable Trust) ಕಾರ್ಯನಿರತವಾಗಿದೆ. ಹಗಲಿರುಳು ಕೆಲಸ ಮಾಡುತ್ತಿರುವ ಈ ಟ್ರಸ್ಟ್ನ ಸದಸ್ಯರು ಅನೇಕರಿಗೆ ನೆರವಾಗುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಅಗತ್ಯ ಇರುವವರಿಗೆ ಸಹಾಯ ನೀಡುವಲ್ಲಿ ‘ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್’ ತೊಡಗಿಕೊಂಡಿದೆ. ಈಗ ಕನ್ನಡ ಶಾಲೆಯೊಂದನ್ನು (Government School) ದತ್ತು ಪಡೆಯುವ ಮೂಲಕ ಮತ್ತೆ ಸುದ್ದಿಯಾಗಿದೆ.
ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ದತ್ತು ಪಡೆದುಕೊಂಡಿದೆ. ಈ ಶಾಲೆ ಅಂದಾಜು 133 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ‘ಶಾಲೆಗಾಗಿ ನಾವು ನೀವು’ ಯೋಜನೆ ಅಡಿಯಲ್ಲಿ ಇದನ್ನು ದತ್ತು ಪಡೆಯಲಾಗಿದೆ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವಂತಹ ಕೆಲಸಗಳನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮಾಡಲಿದೆ.
ಈ ಹಿಂದೆ ಕೂಡ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೆಲವು ಶಾಲೆಗಳನ್ನು ದತ್ತು ಪಡೆಯಲಾಗಿತ್ತು. ಹಲವು ಸರ್ಕಾರಿ ಶಾಲೆಗಳು ಅಳಿವಿನ ಅಂಚಿನಲ್ಲಿವೆ. ಮಕ್ಕಳ ಸಂಖ್ಯೆ ಕೊರತೆಯ ಕಾರಣ ನೀಡಿ ಕೆಲವೆಡೆ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ಬಡಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಲಿದೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಅನೇಕ ಸೆಲೆಬ್ರಿಟಿಗಳು ಪ್ರಯತ್ನಿಸುತ್ತಿದ್ದಾರೆ. ಪ್ರಣಿತಾ ಸುಭಾಷ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ಇಂಥ ಕಾರ್ಯಕ್ಕೆ ಕೈ ಹಾಕುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆಗೆ ಹತ್ತಿರವಾಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಈ ಚಿತ್ರತಂಡಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಸೇರ್ಪಡೆ ಆಗಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ಕನ್ನಡ ಮಾತ್ರವಲ್ಲದೆ, ಹಲವು ಭಾಷೆಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗಲಿದೆ. ಹಾಗಾಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಎಂಟ್ರಿ ಮಹತ್ವ ಎನಿಸಿಕೊಂಡಿದೆ.
ಇದನ್ನೂ ಓದಿ:
ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್ ಕದ್ದ ಬಾಲಿವುಡ್; ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್