
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ‘ಬಿಗ್ ಬಾಸ್ 20’ ವೇದಿಕೆಯಲ್ಲಿ ಪ್ರಮುಖ ವಿಷಯವೊಂದರ ಬಗ್ಗೆ ಧ್ವನಿ ಎತ್ತಿದ್ದಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ ತಂತ್ರಜ್ಞಾನದ ದುರ್ಬಳಕೆ ಕುರಿತು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ಬಳಸಿ ನಕಲಿ ವಿಡಿಯೋಗಳನ್ನು ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆದಂತೆ ಅದರ ದುರ್ಬಳಕೆಯೂ ಹೆಚ್ಚಾಗುತ್ತಿದೆ. ಸಾರ್ವಜನಿಕ ರಂಗದಲ್ಲಿರುವ ಪ್ರಮುಖ ವ್ಯಕ್ತಿಗಳ ಧ್ವನಿ ಹಾಗೂ ಮುಖವನ್ನು ಬಳಸಿ ನಕಲಿ ವಿಡಿಯೋ ಮಾಡಲಾಗುತ್ತಿದೆ. ಈ ಕುರಿತು ‘ವೀಕೆಂಡ್ ಕಾ ವಾರ್’ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ಸುದೀರ್ಘವಾಗಿ ಮಾತನಾಡಿದ್ದಾರೆ. ಇಂತಹ ಸೈಬರ್ ಅಪರಾಧಗಳಿಗೆ ಶೀಘ್ರವೇ ಕಡಿವಾಣ ಬೀಳಬೇಕಿದೆ.
ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋಗಳಲ್ಲಿ ತಮ್ಮ ಮುಖವನ್ನೂ ಬಳಸಿರುವುದಾಗಿ ಸಲ್ಮಾನ್ ಖಾನ್ ಬಹಿರಂಗಪಡಿಸಿದ್ದಾರೆ. ಅಪರಿಚಿತರು ನಕಲಿ ಧ್ವನಿ ಸೇರಿಸಿ ಬೇರೆಯವರಿಗೆ ಬೈಯುವಂತೆ ವಿಡಿಯೋಗಳನ್ನು ರೂಪಿಸುತ್ತಿದ್ದಾರೆ. ಸಾಮಾನ್ಯ ಜನರಿಗೆ ಇವು ನಕಲಿ ಎಂದು ತಿಳಿಯದೆ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಸತ್ಯ ಗೊತ್ತಿದ್ದೂ ವಿಡಿಯೋ ಮಾಡುವವರ ಉದ್ದೇಶ ಕೆಟ್ಟದಾಗಿರುತ್ತದೆ.
ಇಂತಹ ಸುಳ್ಳು ಸುದ್ದಿ ಹಾಗೂ ವಿಡಿಯೋಗಳನ್ನು ಸೃಷ್ಟಿಸುವವರನ್ನು ತಕ್ಷಣವೇ ಜೈಲಿಗೆ ಅಟ್ಟಬೇಕು. ಕನಿಷ್ಠ ಇಬ್ಬರು ಅಥವಾ ಮೂವರು ಜೈಲು ಪಾಲಾದರೆ ಮಾತ್ರ ಈ ರೀತಿಯ ಕೃತ್ಯಗಳು ನಿಲ್ಲುತ್ತವೆ. ಉದ್ದೇಶಪೂರ್ವಕವಾಗಿ ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಅಗತ್ಯ. ಈ ವಿಷಯವನ್ನು ತಾವೂ ಅತ್ಯಂತ ಗಂಭೀರವಾಗಿ ಪರಿಗಣಿಸುವುದಾಗಿ ಸಲ್ಮಾನ್ ಹೇಳಿದ್ದಾರೆ.
ಇದನ್ನೂ ಓದಿ: ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್ ಖಾನ್, ಗಂಗೂಲಿ, ಮೋಹನ್ಲಾಲ್
‘ಸಾಮಾಜಿಕ ಜಾಲತಾಣಗಳ ಮೇಲೂ ಕಠಿಣ ಸೆನ್ಸಾರ್‌ಶಿಪ್ ಅಥವಾ ನಿಯಂತ್ರಣ ಇರಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತರುವುದು ಕಾಲದ ಅಗತ್ಯವಾಗಿದೆ. ಕೃತಕ ಬುದ್ಧಿಮತ್ತೆಯ ದುರ್ಬಳಕೆಯನ್ನು ತಡೆಯಲು ಜಾಲತಾಣ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ ಅವರು. ಸಲ್ಮಾನ್ ಖಾನ್ ಅವರ ಈ ಹೇಳಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.