ತೆಲುಗು ಚಿತ್ರರಂಗದ ದಂತಕತೆ ಎನ್ಟಿಆರ್ (NTR) ಅವರ ನೂರನೇ ವರ್ಷದ ಸ್ಮರಣೆಯನ್ನು ಟಿಡಿಪಿ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು (Chandrababu Naidu), ಎನ್ಟಿಆರ್ ಪುತ್ರ ಬಾಲಕೃಷ್ಣ (Nandamuri Balakrishna) ಇನ್ನಿತರರು ಅದ್ಧೂರಿಯಾಗಿ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಸೂಪರ್ ಸ್ಟಾರ್ ರಜನೀಕಾಂತ್ (Rajinikanth), ಎನ್ಟಿಆರ್ ಅವರ ವ್ಯಕ್ತಿತ್ವ, ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುವ ಜೊತೆಗೆ ಚಂದ್ರಬಾಬು ನಾಯ್ಡು ಅವರನ್ನು, ಅವರ ನಾಯಕತ್ವ, ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕೊಂಡಾಡಿದರು. ಇದು ಆಂಧ್ರ ಪ್ರದೇಶದ ಆಡಳಿತರೂಢ ಪಕ್ಷ ವೈಎಸ್ಆರ್ ಕಾಂಗ್ರೆಸ್ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದು ಆ ಪಕ್ಷದ ಸದಸ್ಯೆ, ಸಚಿವೆಯೂ ಆಗಿರುವ ನಟಿ ರೋಜಾ, ರಜನೀಕಾಂತ್ ಹೇಳಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಜನೀಕಾಂತ್ ಅವರನ್ನು ನಾವು ಇಷ್ಟಪಡುತ್ತೇವೆ ಆದರೆ ಅವರು ಚಂದ್ರುಬಾಬು ನಾಯ್ಡು ಪರ ನಿಂತು ತಮ್ಮ ಮರ್ಯಾದೆಯನ್ನು ತಾವೇ ಕಡಿತಗೊಳಿಕೊಳ್ಳುತ್ತಿದ್ದಾರೆ. ಎನ್ಟಿಆರ್ ಅವರು ಬದುಕಿದ್ದಾಗ ಅವರ ಬೆನ್ನಿಗೆ ಚೂರಿ ಹಾಕಿಸಿ ಅವರಿಂದ ಅವರ ಪಕ್ಷವನ್ನು ಕಸಿದುಕೊಂಡು, ಮಾನಸಿಕ ಕ್ಷೋಭೆ ಅನುಭವಿಸುವಂತೆ ಮಾಡಿದ ಚಂದ್ರಬಾಬು ನಾಯ್ಡು ಅನ್ನು ಹೊಗಳಿದ ರಜನೀಕಾಂತ್ ಎನ್ಟಿಆರ್ಗೆ ಅಪಮಾನ ಮಾಡಿದ್ದಾರೆ, ಚಂದ್ರಬಾಬು ನಾಯ್ಡು ಜೊತೆ ಸೇರಿಕೊಂಡು ರಜನೀಕಾಂತ್, ಎನ್ಟಿಆರ್ ಅವರನ್ನು ಮತ್ತೊಮ್ಮೆ ಕೊಂದಿದ್ದಾರೆ, ಖಂಡಿತವಾಗಿಯೂ ಎನ್ಟಿಆರ್ ಆತ್ಮ ನರಳಿರುತ್ತದೆ ಎಂದಿದ್ದಾರೆ ರೋಜಾ.
ರಜನೀಕಾಂತ್ ಅವರಿಗೆ ಚಂದ್ರಬಾಬು ನಾಯ್ಡು ಗೆಳೆಯರಿರಬಹುದು ಆದರೆ ವೇದಿಕೆಯಲ್ಲಿ ಮಾತನಾಡಬೇಕಾದರೆ ಅವರು ಸತ್ಯವನ್ನು ತಿಳಿದುಕೊಳ್ಳಬೇಕಿತ್ತು. ಚಂದ್ರಬಾಬು ನಾಯ್ಡು ದೂರದೃಷ್ಟಿಯ ನಾಯಕ, ವಿಷನ್ 2020, ವಿಷನ್ 2047 ಎಂದೆಲ್ಲ ರಜನೀಕಾಂತ್ ಹೇಳಿದ್ದಾರೆ. 2020 ಯಲ್ಲಿ ಚಂದ್ರಬಾಬು ನಾಯ್ಡು 23 ಸೀಟುಗಳನ್ನಷ್ಟೆ ಉಳಿಸಿಕೊಂಡಿದ್ದಾರೆ, 2047ಕ್ಕೆ ಅವರು ಎಲ್ಲಿರುತ್ತಾರೋ ಯಾರಿಗೂ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ ರೋಜಾ.
ರಜನೀಕಾಂತ್ ಬಗ್ಗೆ ಎಲ್ಲರಿಗೂ ಗೌರವ ಇದೆ, ಆದರೆ ಅವರು ಹೀಗೆ ಒಬ್ಬ ಭ್ರಷ್ಟನ, ಮೋಸಗಾರನ ಪರವಾಗಿ ನಿಲ್ಲಬಾರದಿತ್ತು, ಚಂದ್ರಬಾಬು ನಾಯ್ಡುಗೆ ಮೋಸ ಮಾಡುವುದು, ಬೆನ್ನಿಗೆ ಚೂರಿ ಹಾಕುವುದು, ಇನ್ನೊಬ್ಬರ ಏಳಿಗೆಗೆ ಕೊಡಲಿ ಹಾಕುವುದು ಮಾತ್ರವೇ ಗೊತ್ತು, ಎನ್ಟಿಆರ್ ಬದುಕಿದ್ದಾಗಲೇ ನನ್ನ ಅಳಿಯ (ಚಂದ್ರಬಾಬು ನಾಯ್ಡು) ಒಬ್ಬ ಕಳ್ಳ, ಅವನೊಬ್ಬ ಮೋಸಗಾರ, ಸಮಯಸಾಧಕ, ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದೆಲ್ಲ ಹೇಳಿದ್ದನ್ನು ಎಲ್ಲರೂ ಕೇಳಿಸಿಕೊಂಡಿದ್ದಾರೆ. ಎನ್ಟಿಆರ್ ಬದುಕಿದ್ದಾಗ ಅವರಿಗೆ ನಾನಾ ಹಿಂಸೆಗಳನ್ನು ನೀಡಿದ ಚಂದ್ರಬಾಬು ನಾಯ್ಡುಗೆ ಈಗ ಅಧಿಕಾರ ಇಲ್ಲದ ಸಮಯದಲ್ಲಿ ಎನ್ಟಿಆರ್ ನೆನಪಾಗಿದ್ದಾರೆ ಎಂದು ಟೀಕಿಸಿದ್ದಾರೆ ರೋಜಾ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಜನೀಕಾಂತ್, ಹೈದರಾಬಾದ್ ನೋಡಿದರೆ ನ್ಯೂಯಾರ್ಕ್ ನೋಡಿದಂತಾಗುತ್ತದೆ ಅದಕ್ಕೆ ಚಂದ್ರಬಾಬು ನಾಯ್ಡು ಕಾರಣ ಎಂದಿದ್ದರು, ರಜನಿಯವರ ಈ ಹೇಳಿಕೆಯನ್ನು ಶುದ್ಧ ತಪ್ಪು ಎಂದಿರುವ ರೋಜಾ, 2004 ರಿಂದ 2014 ರ ವರೆಗೆ ಚಂದ್ರಬಾಬು ನಾಯ್ಡು ವಿಪಕ್ಷದ ನಾಯಕರಾಗಿದ್ದರು. ಅದಾದ ಬಳಿಕ ತೆಲಂಗಾಣ ರಾಜ್ಯ ರಚನೆಯಾಗಿ ಹೈದರಾಬಾದ್ ತೆಲಂಗಾಣಕ್ಕೆ ಸೇರಿತು. ಹಾಗಿದ್ದಮೇಲೆ ಹೈದರಾಬಾದ್ ಅಭಿವೃದ್ಧಿಯನ್ನು ಚಂದ್ರಬಾಬು ನಾಯ್ಡು ಹೇಗೆ ಮಾಡಲು ಸಾಧ್ಯ. ರಜನೀಕಾಂತ್ ಅವರಿಗೆ ಇಂಥಹಾ ಸುಳ್ಳುಗಳನ್ನು ಹೇಳಿ ಎಂದು ಸ್ವತಃ ಚಂದ್ರಬಾಬು ನಾಯ್ಡು ಹೇಳಿಕೊಟ್ಟಿರಬೇಕು. ರಜನೀಕಾಂತ್ ಸಹ ಮಾತನಾಡುವ ಮುಂಚೆ ಯಾವುದು ಸತ್ಯ ಯಾವುದು ಸುಳ್ಳು ಎಂದು ತಿಳಿದುಕೊಳ್ಳಬೇಕಿತ್ತು ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Sat, 29 April 23