ಚಂದ್ರಬಾಬು ನಾಯ್ಡು ಏನೂ ಮಾಡಿಲ್ಲ, ಮಾಡಿದ್ದೆಲ್ಲ ಜೂ ಎನ್ಟಿಆರ್: ಸಚಿವ ಕೊಡಲಿ ನಾನಿ
Jr NTR: ಸೀನಿಯರ್ ಎನ್ಟಿಆರ್ಗಾಗಿ ಚಂದ್ರಬಾಬು ನಾಯ್ಡು ಏನೂ ಮಾಡಿಲ್ಲ. ಜೂ ಎನ್ಟಿಆರ್ ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಕೊಡಲಿ ನಾನಿ ಹೇಳಿದ್ದಾರೆ.
ಮಾಜಿ ಸಚಿವ, ಹಾಲಿ ಶಾಸಕ ಕೊಡಲಿ ನಾನಿ (Kodali Nani), ನಟ ಜೂ ಎನ್ಟಿಆರ್ (Jr NTR) ಆಪ್ತರಲ್ಲಿ ಒಬ್ಬರು. ಈ ಹಿಂದೆ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಟಿಡಿಪಿ ಪಕ್ಷದಲ್ಲಿದ್ದ ಕೊಡಲಿ ನಾನಿ ಆ ಬಳಿಕ ಭಿನ್ನಾಭಿಪ್ರಾಯಗಳು ತಲೆದೂರಿ ಜಗನ್ ಮೋಹನ್ ರೆಡ್ಡಿಯ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿ ಸಚಿವರಾದರು. ಇದೀಗ ಹಾಲಿ ಶಾಸಕರೂ ಆಗಿದ್ದಾರೆ. ಪಕ್ಷ ತ್ಯಜಿಸಿದರೂ ಜೂ ಎನ್ಟಿಆರ್ ಜೊತೆ ಉತ್ತಮ ಬಾಂಧವ್ಯವನ್ನೇ ಮುಂದುವರೆಸಿರುವ ಕೊಡಲಿ ನಾನಿ, ಚಂದ್ರಬಾಬು ನಾಯ್ಡು ವಿರುದ್ಧ ಅವಕಾಶ ಸಿಕ್ಕಾಗೆಲ್ಲ ವಾಗ್ದಾಳಿ ನಡೆಸುತ್ತಿರುತ್ತಾರೆ. ಇದೀಗ ಜೂ ಎನ್ಟಿಆರ್ 2003 ರಲ್ಲಿ ಮಾಡಿದ್ದ ಕಾರ್ಯವನ್ನು ಕೊಡಲಿ ನಾನಿ ನೆನಪಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹತ್ತಿರಬಂದಿದ್ದು, ಆಡಳಿತ ಪಕ್ಷವನ್ನು ಮಣಿಸಿ ಮತ್ತೆ ಅಧಿಕಾರ ಹಿಡಿಯಲು ಚಂದ್ರಬಾಬು ನಾಯ್ಡು ಯತ್ನಿಸುತ್ತಿದ್ದು, ರಾಜ್ಯದಾದ್ಯಂತ ಸಂಚಾರ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಟಿಡಿಪಿ ಪಕ್ಷದ ಸಂಸ್ಥಾಪಕ ಹಿರಿಯ ನಟ, ದಿವಂಗತ ಎನ್ಟಿಆರ್ ಅವರ ಹುಟ್ಟೂರಾದ ನಿಮ್ಮಕೂರಿಗೆ ತೆರಳಿ ಅಲ್ಲಿ ಬಸ್ ಒಂದರಲ್ಲಿ ರಾತ್ರಿ ಕಳೆದಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಈ ನಡೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೊಡಲಿ ನಾನಿ, ನಿಮ್ಮಕೂರು, ಎನ್ಟಿಆರ್ ಅವರ ಹುಟ್ಟೂರು. ಚಂದ್ರಬಾಬು ನಾಯ್ಡು ಅವರಿಗೆ ಮಾವನೂರು. ಆದರೆ ಈ ವರೆಗೆ ಒಮ್ಮೆಯೂ ಸಹ ಅವರು ಆ ಊರಿಗೆ ಬಂದಿರಲಿಲ್ಲ. ಈಗ ನಾಟಕ ಮಾಡಲು ಬಂದಿದ್ದಾರೆ. ಸೀನಿಯರ್ ಎನ್ಟಿಆರ್ಗಾಗಿ ಚಂದ್ರಬಾಬು ನಾಯ್ಡು ಏನೊಂದೂ ಮಾಡಿಲ್ಲ. ನಿಮ್ಮಕೂರಿನಲ್ಲಿ ಚಂದ್ರಬಾಬು ಹಾರಹಾಕಿದ ಎನ್ಟಿಆರ್ ಹಾಗೂ ಅವರ ಪತ್ನಿಯ ಮೂರ್ತಿಗಳನ್ನು ಜೂ ಎನ್ಟಿಆರ್ ಹಾಗೂ ನಾನು ಮಾಡಿಸಿದ್ದೆ ವಿನಃ ಚಂದ್ರಬಾಬು ನಾಯ್ಡು ಮಾಡಿಸಿದ್ದಲ್ಲ” ಎಂದಿದ್ದಾರೆ.
2003 ರಲ್ಲಿ ಎನ್ಟಿಆರ್ ಅವರ ಹುಟ್ಟೂರು ನಿಮ್ಮಕೂರಿನಲ್ಲಿ ಎನ್ಟಿಆರ್ ಅವರ ನೆನಪು ಶಾಶ್ವತವಾಗಿ ಉಳಿಸಬೇಕೆಂದು ಜೂ ಎನ್ಟಿಆರ್ 40 ಲಕ್ಷ ಖರ್ಚು ಮಾಡಿ ನಾನು 20 ಲಕ್ಷ ಖರ್ಚು ಮಾಡಿ ಎನ್ಟಿಆರ್ ಹಾಗೂ ಅರ ಪತ್ನಿ ಬಸವಕಲ್ಯಾಣಂ ಅವರ ವಿಗ್ರಹಗಳನ್ನು ನಿರ್ಮಿಸಿದೆವು. ಅದೇ ಸಮಯದಲ್ಲಿ ಆಗಿನ ಕಾಲಕ್ಕೆ ಒಂದು ಕೋಟಿ ಹಣ ಖರ್ಚು ಮಾಡಿ ಆಂಧ್ರವಾಲ ಸಿನಿಮಾದ ಆಡಿಯೋ ಲಾಂಚ್ ಫಂಕ್ಷನ್ ಅನ್ನು ನಿಮ್ಮಕೂರಿನಲ್ಲಿಯೇ ಮಾಡಿ 10 ಲಕ್ಷ ಜನರನ್ನು ನಿಮ್ಮಕೂರಿನಲ್ಲಿ ಸೇರಿಸಿ ಈ ಊರಿನ ಹೆಸರು ದೇಶದಲ್ಲಿ ಕೇಳುವಂತೆ ಮಾಡಿದೆವು. ಎನ್ಟಿಆರ್ಗಾಗಿ ಜೂ ಎನ್ಟಿಆರ್ ಮಾಡಿದಷ್ಟು ಕಾರ್ಯವನ್ನು ಚಂದ್ರಬಾಬು ನಾಯ್ಡು ಮಾಡಿಲ್ಲ ಎಂದಿದ್ದಾರೆ ಕೊಡಲಿ ನಾನಿ.
ಇದನ್ನೂ ಓದಿ: Vetrimaran: ಜೂ ಎನ್ಟಿಆರ್ ಜೊತೆ ಸಿನಿಮಾ ಖಾತ್ರಿಗೊಳಿಸಿದ ವೆಟ್ರಿಮಾರನ್
2003 ರಲ್ಲಿ ಬಿಡುಗಡೆ ಆಗಿದ್ದ ಜೂ ಎನ್ಟಿಆರ್ ನಟಿಸಿ ಪುರಿಜಗನ್ನಾಥ್ ನಿರ್ದೇಶನ ಮಾಡಿದ್ದ ಆಂಧ್ರವಾಲಾ ಸಿನಿಮಾದ ಆಡಿಯೋ ಲಾಂಚ್ ಆಗಿನ ಕಾಲಕ್ಕೆ ಬಹಳ ದೊಡ್ಡ ಸುದ್ದಿಯಾಗಿತ್ತು. ಸುಮಾರು 10 ಲಕ್ಷ ಜನ ನಿಮ್ಮಕೂರಿನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದರ ಹೊರತಾಗಿ ಇನ್ನಾವ ಸಿನಿಮಾದ ಆಡಿಯೋ ಲಾಂಚ್ಗೂ ಅಷ್ಟು ದೊಡ್ಡ ಸಂಖ್ಯೆಯ ಜನ ಸೇರಿಲ್ಲ. ಬಸ್ಸುಗಳು, ವಿಶೇಷ ರೈಲುಗಳನ್ನು ಆ ಕಾರ್ಯಕ್ರಮಕ್ಕಾಗಿ ನಿಯೋಜಿಸಲಾಗಿತ್ತು. ತೆಲುಗಿನಲ್ಲಿ ಆಂಧ್ರವಾಲಾ ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ನಟಿಸಿದ ವೀರ ಕನ್ನಡಿಗ ಹೆಸರಿನಲ್ಲಿ ಒಟ್ಟಿಗೆ ನಿರ್ಮಾಣಗೊಂಡು ಒಟ್ಟಿಗೆ ಬಿಡುಗಡೆ ಆದವು. ಆಂಧ್ರವಾಲಾ ಫ್ಲಾಪ್ ಆದರೆ ವೀರ ಕನ್ನಡಿಗ ಹಿಟ್ ಎನಿಸಿಕೊಂಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Sat, 15 April 23