ರಜನಿಕಾಂತ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಶಿವರಾತ್ರಿ ಆಚರಿಸಿದ ಅಭಿಮಾನಿ

ಮಧುರೈ ಮೂಲದ ಅಭಿಮಾನಿಯೊಬ್ಬ ಈ ರೀತಿಯಲ್ಲಿ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾನೆ. ಆತನ ಮನೆಯೊಳಗೆ ರಜನಿಕಾಂತ್ ಅವರ ದೇವಸ್ಥಾನವನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಶಿವರಾತ್ರಿ ಪ್ರಯುಕ್ತ ರಜನಿ ಫೋಟೋಗೆ ವಿಶೇಷ ಪೂಜೆ ಮಾಡಿದ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..

ರಜನಿಕಾಂತ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಶಿವರಾತ್ರಿ ಆಚರಿಸಿದ ಅಭಿಮಾನಿ
Rajinikanth Fans
Image Credit source: ANI

Updated on: Feb 15, 2026 | 7:25 AM

ನಟ ರಜನಿಕಾಂತ್ (Rajinikanth) ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ಬಹಳ ದೊಡ್ಡದು. ಆದರೆ ಜನರು ಕೆಲವೊಮ್ಮೆ ಅತಿರೇಕದ ಅಭಿಮಾನ ಪ್ರದರ್ಶಿಸುತ್ತಾರೆ. ಅದಕ್ಕೆ ಇಲ್ಲೊಂದು ಹೊಸ ಉದಾಹರಣೆ ಇದೆ. ಫೆಬ್ರವರಿ 15ರಂದು ಎಲ್ಲೆಡೆ ಸಂಭ್ರಮದಿಂದ ಶಿವರಾತ್ರಿ (Shivaratri) ಆಚರಿಸಲಾಗುತ್ತಿದೆ. ಇಲ್ಲೊಬ್ಬ ಅಭಿಮಾನಿಯು ರಜನಿಕಾಂತ್ ಫೋಟೋಗೆ ಪೂಜೆ ಮಾಡುವ ಮೂಲಕ ಶಿವರಾತ್ರಿ ಆಚರಿಸಿದ್ದಾನೆ! ಆ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದನ್ನು ನೋಡಿದವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ರಜನಿಕಾಂತ್ ಅವರು ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದರು. ಆ ಪೋಸ್ಟರ್ ಇಟ್ಟುಕೊಂಡು ಕಾರ್ತಿಕ್ ಎಂಬ ಅಭಿಮಾನಿ ಈ ರೀತಿ ಪೂಜೆ ಮಾಡಿದ್ದಾರೆ. ಶಿವನ ಗೆಟಪ್ ಧರಿಸಿರುವ ರಜನಿಕಾಂತ್ ಫೋಟೋಗೆ ಆತ ಹಾಲಿನ ಅಭಿಷೇಕ ಕೂಡ ಮಾಡಿದ್ದಾನೆ. ಆರತಿ ಬೆಳಗಿ ಕೈ ಮುಗಿಯಲಾಗಿದೆ. ಹೂವಿನ ಹಾರದ ಜೊತೆಗೆ ವಡೆಯ ಹಾರವನ್ನೂ ಹಾಕಲಾಗಿದೆ.

ಅಭಿಮಾನಿಯ ಮನೆಯೊಳಗೆ ರಜನಿಕಾಂತ್ ಅವರಿಗಾಗಿ ದೇವಸ್ಥಾನ ಕಟ್ಟಲಾಗಿದೆ. ಕಳೆದ ಮೂರು ವರ್ಷಗಳಿಂದ ಪ್ರತಿ ಶಿವರಾತ್ರಿ ಹಬ್ಬವನ್ನು ಇದೇ ರೀತಿ ಆತ ಆಚರಣೆ ಮಾಡುತ್ತಿದ್ದಾನೆ. ರಜನಿಕಾಂತ್ ಅವರ 50 ವರ್ಷದ ಸಿನಿಮಾ ಜರ್ನಿಯನ್ನು ಸೆಲೆಬ್ರೇಟ್ ಮಾಡುವ ಸಲುವಾಗಿ 500 ವಡೆಗಳ ಹಾರ ಹಾಕಿರುವುದಾಗಿ ಆ ಅಭಿಮಾನಿ ಹೇಳಿದ್ದಾನೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ‘ಇಂಥ ಕಳಪೆ ಕೆಲಸವನ್ನು ನೋಡಿದರೆ ಸ್ವತಃ ರಜನಿಕಾಂತ್ ಅವರು ನಗುತ್ತಾರೆ. ಅವರು ಇಂಥದ್ದನ್ನೆಲ್ಲ ಒಪ್ಪುವುದಿಲ್ಲ’ ಎಂದು ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಮನುಷ್ಯರನ್ನು ಮನುಷ್ಯರನ್ನಾಗಿ ನೋಡಿ. ಇಂಥ ವರ್ತನೆಯನ್ನು ಎಂದಿಗೂ ಪ್ರೋತ್ಸಾಹಿಸಬಾರದು’ ಎಂಬ ಕಮೆಂಟ್ ಕೂಡ ಬಂದಿದೆ.

ಇದನ್ನೂ ಓದಿ: ಆಪ್ತ ಗೆಳೆಯನಿಗೂ ಇಲ್ಲ ರಿಯಾಯಿತಿ, ಕಮಲ್ ಜೊತೆ ಸಿನಿಮಾಕ್ಕೆ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?

‘ಸೂಪರ್ ಸ್ಟಾರ್’ ರಜನಿಕಾಂತ್ ಅವರಿಗೆ ಈಗ 75 ವರ್ಷ ವಯಸ್ಸು. ಇಂದಿಗೂ ಅವರಿಗೆ ಸಖತ್ ಬೇಡಿಕೆ ಇದೆ. ಕಳೆದ ವರ್ಷ ಅವರು ನಟಿಸಿದ ‘ಕೂಲಿ’ ಸಿನಿಮಾ ಬಿಡುಗಡೆ ಆಗಿ ಯಶಸ್ಸು ಕಂಡಿತ್ತು. ಆ ಸಿನಿಮಾದಲ್ಲಿ ಆಮಿರ್ ಖಾನ್, ನಾಗಾರ್ಜುನ, ರಚಿತಾ ರಾಮ್, ಉಪೇಂದ್ರ, ಶ್ರುತಿ ಹಾಸನ್ ಮುಂತಾದವರು ಅಭಿನಯಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.