
ಮೇ 1ರಂದು ಅಥವಾ ಯಾವುದಾದರೂ ವಿಶೇಷ ದಿನದ ಹೊರತಾಗಿ ಸ್ವಚ್ಛತಾ ಕಾರ್ಮಿಕರನ್ನು ನೆನಪಿಸಿಕೊಳ್ಳುವುದೇ ಇಲ್ಲ. ಸಿನಿಮಾ ಸೆಲೆಬ್ರಿಟಿಗಳು ತಮಗೆ ಪ್ರಚಾರ ಬೇಕಾದಾಗ ಅಥವಾ ತಮ್ಮ ಸಿನಿಮಾಕ್ಕೆ ಪ್ರಚಾರ ಬೇಕಾದಾಗ ಮಾತ್ರ ಸ್ವಚ್ಛತಾ ಕಾರ್ಮಿಕರನ್ನು ಹುಡುಕಿಕೊಂಡು ಹೋಗಿ ಅವರಿಗೆ ಸನ್ಮಾನ ಮಾಡಿ ಫೋಟೊ ತೆಗೆಸಿಕೊಳ್ಳುತ್ತಾರೆ. ಇದೀಗ ಸೂಪರ್ ಸ್ಟಾರ್ ರಜನೀಕಾಂತ್ ಅವರು ಸ್ವಚ್ಛತಾ ಮಹಿಳಾ ಕಾರ್ಮಿಕರಾಗಿರುವ ಪದ್ಮ ಎಂಬುವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಆದರೆ ಇದು ಪ್ರಚಾರಕ್ಕಾಗಿ ಮಾಡಿದ್ದಲ್ಲ, ಸನ್ಮಾನದ ಹಿಂದೆ ಕಾರಣವಿದೆ.
ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕೆಯಾಗಿ ಕೆಲಸ ಮಾಡುವ ಪದ್ಮ ಅವರನ್ನು ನಟ ರಜನೀಕಾಂತ್ ಪೋಯಸ್ ಗಾರ್ಡನ್ನ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಪದ್ಮ ಅವರನ್ನು ಮಾತ್ರವೇ ಅಲ್ಲದೆ ಅವರ ಇಡೀ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದ ರಜನೀಕಾಂತ್, ಪದ್ಮ ಅವರಿಗೆ ಹಾರ ಹಾಕಿ, ಶಾಲು ಹಾಕಿ ಸನ್ಮಾನ ಮಾಡಿರುವ ಜೊತೆಗೆ ಪದ್ಮಾ ಅವರ ಕೊರಳಿಗೆ ಉಡುಗೊರೆಯಾಗಿ ಚಿನ್ನದ ಸರವನ್ನು ಸಹ ನೀಡಿದ್ದಾರೆ. ಆದರೆ ರಜನೀಕಾಂತ್ ಅವರು ಪದ್ಮ ಅವರಿಗೆ ಸನ್ಮಾನ ಮಾಡಲು ಕಾರಣವೇನು?
ಸ್ವಚ್ಛತಾ ಕಾರ್ಮಿಕೆಯಾಗಿರುವ ಪದ್ಮ ತಮ್ಮ ಪ್ರಾಮಾಣಿಕತೆಯಿಂದ ಇತ್ತೀಚೆಗೆ ಸುದ್ದಿಯಾಗಿದ್ದರು. ಪದ್ಮ ಅವರು ಇತ್ತೀಚೆಗೆ ತಮ್ಮ ಕೆಲಸ ಮಾಡುವಾಗ ಅವರಿಗೆ 40 ಗ್ರಾಂ ಚಿನ್ನ ಕಸದಲ್ಲಿ ಸಿಕ್ಕಿತ್ತು. ಆದರೆ ಪದ್ಮ ಅವರು ಅದನ್ನು ಇರಿಸಿಕೊಳ್ಳದೆ, ಅದನ್ನು ಕಳೆದುಕೊಂಡವರಿಗೆ ಪ್ರಾಮಾಣಿಕವಾಗಿ ಮರಳಿಸಿದರು. ಇದು ರಾಜ್ಯದಾದ್ಯಂತ ಸುದ್ದಿ ಆಗಿದ್ದಲ್ಲದೆ, ಪದ್ಮ ಅವರಿಗೆ ಭಾರಿ ಪ್ರಶಂಸೆಗಳು ಸಹ ದೊರಕಿತು. ಇತ್ತೀಚೆಗಷ್ಟೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಪದ್ಮ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿ, ಪದ್ಮ ಅವರನ್ನು ಸನ್ಮಾನಿಸಿ, ಒಂದು ಲಕ್ಷ ರೂಪಾಯಿ ಹಣವನ್ನು ಸಹ ನೀಡಿದ್ದಾರೆ. ಇದೀಗ ನಟ ರಜನೀಕಾಂತ್ ಸಹ ಪದ್ಮ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಸನ್ಮಾನಿಸಿರುವ ಜೊತೆಗೆ ಚಿನ್ನದ ಸರವೊಂದನ್ನು ಸಹ ನೀಡಿ ಆಶೀರ್ವದಿಸಿದ್ದಾರೆ.
ಇದನ್ನೂ ಓದಿ:ಆ ನಟನಿಗಿಂತ ನಾನು ದೊಡ್ಡ ಸ್ಟಾರ್: ರಜನೀಕಾಂತ್ ಹೇಳಿದ್ದು ಯಾರ ಬಗ್ಗೆ?
ರಜನೀಕಾಂತ್ ಅವರಿಗೆ ಯಾರಾದರೂ ಮಾಡಿರುವ ಕಾರ್ಯ ಇಷ್ಟವಾದರೆ ಅವರನ್ನು ಮನೆಗೆ ಕರೆಸಿ, ಚಿನ್ನದ ಸರ ಕೊರಳಿಗೆ ಹಾಕಿ ಸನ್ಮಾನ ಮಾಡುತ್ತಾರೆ. ‘ಕಾಂತಾರ’ ಸಿನಿಮಾ ಇಷ್ಟವಾದಾಗ ರಿಷಬ್ ಶೆಟ್ಟಿಯನ್ನು ಮನೆಗೆ ಕರೆಸಿ ಚಿನ್ನದ ಸರ ಹಾಕಿ ಸನ್ಮಾನ ಮಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ತಮ್ಮ ಅಭಿಮಾನಿಯ ಸಾಮಾಜಿಕ ಕಾರ್ಯವನ್ನು ಮೆಚ್ಚಿ ಸನ್ಮಾನ ಮಾಡಿದ್ದರು. ರಜನೀಕಾಂತ್ ಅಭಿಮಾನಿಯೊಬ್ಬ ದಶಕಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಾ ಬರುತ್ತಿದ್ದಾರೆ. ಆತನ ಸೇವೆ ಮೆಚ್ಚಿ ರಜನೀಕಾಂತ್ ಅವರು ಸನ್ಮಾನ ಮಾಡಿದ್ದರು. ಇದೀಗ ಪದ್ಮ ಅವರ ಪ್ರಾಮಾಣಿಕತೆ ಮೆಚ್ಚಿ ಅವರನ್ನು ಸನ್ಮಾನಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ