ಬಡವರಿಗಾಗಿ ಆಸ್ಪತ್ರೆ ಕಟ್ಟಿಸಲು ಮುಂದಾದ ರಜನೀಕಾಂತ್: ಎಲ್ಲಿ?
Rajinikanth: ಸೂಪರ್ ಸ್ಟಾರ್ ರಜನೀಕಾಂತ್ ಅವರು ಜನ ಸೇವೆಗಾಗಿ ರಾಜಕೀಯಕ್ಕೆ ಬರಲು ಇಚ್ಛಿಸಿದ್ದರು, ಆದರೆ ಅನಾರೋಗ್ಯದ ಕಾರಣ ರಾಜಕೀಯ ಪ್ರವೇಶದಿಂದ ಹಿಂದೆ ಸರಿದರು. ಇದೀಗ ಬಡವರ ಪ್ರಯೋಜನಕ್ಕಾಗಿ ಆಸ್ಪತ್ರೆಯೊಂದರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ನಟ ರಜನೀಕಾಂತ್ (Rajinikanth) ಸೂಪರ್ ಸ್ಟಾರ್ ಆಗಿರುವ ಜೊತೆಗೆ ತಮ್ಮ ಸರಳತೆ, ಆಧ್ಯಾತ್ಮಿಕ ಆಸಕ್ತಿಯಿಂದಲೂ ಗುರುತಿಸಲ್ಪಡುತ್ತಾರೆ. ಜನರ ಬಗ್ಗೆ ವಿಶೇಷ ಕಾಳಜಿಯುಳ್ಳ ರಜನೀಕಾಂತ್ ರಾಜಕೀಯ ಪ್ರವೇಶಕ್ಕೂ ಮನಸ್ಸು ಮಾಡಿದ್ದರು. ರಾಜಕೀಯಕ್ಕೆ ಪ್ರವೇಶ ಮಾಡುವುದಾಗಿ ಘೋಷಣೆಯನ್ನೂ ಸಹ ಮಾಡಿದ್ದರು. ಆದರೆ ಅನಾರೋಗ್ಯದ ಕಾರಣಕ್ಕೆ ರಾಜಕಾರಣದಿಂದ ಹಿಂದೆ ಸರಿಯಲೇ ಬೇಕಾಯ್ತು. ತಮ್ಮ ರಾಜಕೀಯ ಪಕ್ಷವನ್ನು ಸಮಾಜ ಸೇವಾ ಸಂಘವನ್ನಾಗಿ ಬದಲಾವಣೆ ಮಾಡಿದರು. ರಾಜಕೀಯಕ್ಕೆ ಕಾಲಿಡಲಿಲ್ಲವಾದರೂ ಸೇವೆಯ ಹಂಬಲ ಹಾಗೆಯೇ ಇದೆ. ಇದೀಗ ಬಡವರಿಗಾಗಿ ದೊಡ್ಡ ಆಸ್ಪತ್ರೆ ಕಟ್ಟಲು ರಜನೀಕಾಂತ್ ಮುಂದಾಗಿದ್ದಾರೆ.
ರಜನೀಕಾಂತ್ ಇತ್ತೀಚೆಗಷ್ಟೆ ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪುರೂರಿಗೆ ಭೇಟಿ ನೀಡಿದ್ದರು. ಅಲ್ಲಿನ ನೊಂದಾವಣಿ ಕಚೇರಿಗೆ ಭೇಟಿ ನೀಡಿ ತಾವು ಖರೀದಿಸಿದ್ದ 12 ಎಕರೆ ಸ್ಥಳವನ್ನು ನೊಂದಾವಣಿ ಮಾಡಿಸಿಕೊಂಡರು. ಈ 12 ಎಕರೆ ಸ್ಥಳದಲ್ಲಿ ರಜನೀಕಾಂತ್ ಆಸ್ಪತ್ರೆಯನ್ನು ಕಟ್ಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಈ ಸ್ಥಳ ಖರೀದಿಯನ್ನು ರಜನೀಕಾಂತ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ:ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರೆ ರಜನೀಕಾಂತ್: ನಿರ್ಮಾಪಕ ಯಾರು?
ಚೆನ್ನೈ ಹಾಗೂ ತಿರುಪ್ಪುರೂರು ನಡುವೆ ಸುಮಾರು 45 ಕಿ.ಮೀ ಅಂತರವಿದ್ದು ಚೆನ್ನೈ ಹಾಗೂ ತಿರುಪ್ಪುರೂರಿನ ನಡುವೆ 12 ಎಕರೆ ಜಾಗವನ್ನು ರಜನೀಕಾಂತ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಆಸ್ಪತ್ರೆ ನಿರ್ಮಾಣದ ಬಗ್ಗೆ ಈಗಾಗಲೇ ಚರ್ಚೆಗಳು ಮುಗಿದಿದ್ದು ಯೋಜನೆ ಸಹ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ಒಳ್ಳೆಯ ದಿನ ನೋಡಿಕೊಂಡು ರಜನೀಕಾಂತ್ ಅವರು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರಂತೆ. ಈ ಆಸ್ಪತ್ರೆಯು ಬಡವರಿಗಾಗಿ ನಿರ್ಮಿಸಲಾಗುತ್ತಿದ್ದು, ಉಚಿತವಾಗಿ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ ಎನ್ನಲಾಗುತ್ತಿದೆ.
ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ರಜನೀಕಾಂತ್ರ ಪುತ್ರಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿತು. ಇದೀಗ ರಜನೀಕಾಂತ್, ಟಿಜೆ ಜ್ಞಾನವೇಲು ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ರಜನೀ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್ ಸಹ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ‘ಜೈಲರ್ 2’ ಸಿನಿಮಾ ಹಾಗೂ ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ನಿರ್ಮಿಸುತ್ತಿರುವ ಭಾರಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾನಲ್ಲಿ ರಜನೀಕಾಂತ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Sun, 3 March 24