
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ (Peddi) ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ಈ ಹಿಂದೆ ಮೂರು ಬಾರಿ ಮುಂದೂಡಲ್ಪಟ್ಟಿದ್ದ ಈ ಸಿನಿಮಾ, ಕೊನೆಗೂ ಈ ವರ್ಷ ಜೂನ್ 4ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಐಪಿಎಲ್ ಪಂದ್ಯಗಳು ಮುಗಿದ ತಕ್ಷಣವೇ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಮೊದಲು ಜೂನ್ 4ರಂದು ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆ ಆಗುವುದಾಗಿ ತಿಳಿಸಿತ್ತು. ಆದರೆ ಪ್ಲ್ಯಾನ್ ಬದಲಾಯಿತು.
ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಸ್ಯಾಂಡಲ್‌ವುಡ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.
ಈಗಾಗಲೇ ಈ ಚಿತ್ರದ ‘ಚಿಕಿರಿ ಚಿಕಿರಿ’ ಹಾಡು ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಹಾಡು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 200 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. ಇತ್ತೀಚೆಗೆ ಬಿಡುಗಡೆಯಾದ ಪೆದ್ದಿ ಪೆಹಲ್ವಾನ್ ಲುಕ್‌ನಲ್ಲಿ ರಾಮ್ ಚರಣ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
‘ಪೆದ್ದಿ’ ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇದ್ದ ಕಾರಣ ಮತ್ತು ತಾಂತ್ರಿಕವಾಗಿ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಚಿತ್ರತಂಡ ಬಿಡುಗಡೆಯನ್ನು ಜೂನ್ ತಿಂಗಳಿಗೆ ಮುಂದೂಡಿತ್ತು. ಈಗ ಜೂನ್ 4ಕ್ಕೆ ದಿನಾಂಕ ಅಂತಿಮಗೊಳಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.
ಇದನ್ನೂ ಓದಿ: ರಾಮ್ ಚರಣ್ ಮತ್ತು ನಾನಿ ಸಿನಿಮಾಗಳಿಗೆ ಲೀಕ್ ಸಂಕಷ್ಟ: ಆತಂಕದಲ್ಲಿ ‘ಪೆದ್ದಿ’, ‘ದಿ ಪ್ಯಾರಡೈಸ್’
‘ವೃದ್ಧಿ ಸಿನಿಮಾಸ್’ ಮತ್ತು ‘ಮೈತ್ರಿ ಮೂವಿ ಮೇಕರ್ಸ್’ ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪೆದ್ದಿ’ ಅಬ್ಬರಿಸಲು ಸಜ್ಜಾಗಿದೆ. ರಾಮ್ ಚರಣ್ ಅಭಿಮಾನಿಗಳು ಈ ಸಿನಿಮಾಗಾಗಿ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.