AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್ ಮತ್ತು ನಾನಿ ಸಿನಿಮಾಗಳಿಗೆ ಲೀಕ್ ಸಂಕಷ್ಟ: ಆತಂಕದಲ್ಲಿ ‘ಪೆದ್ದಿ’, ‘ದಿ ಪ್ಯಾರಡೈಸ್’

ಸ್ಟಾರ್ ನಟರ ಸಿನಿಮಾಗಳ ಮೇಲೆ ಎಲ್ಲರೂ ಕಣ್ಣಿಟ್ಟಿರುತ್ತಾರೆ. ಸಣ್ಣ ವಿಡಿಯೋ ತುಣುಕು ಸಿಕ್ಕರೂ ವೈರಲ್ ಆಗುತ್ತದೆ. ರಾಮ್ ಚರಣ್ ನಟನೆಯ ‘ಪೆದ್ದಿ’ ಮತ್ತು ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸಿನಿಮಾಗಳಿಗೆ ಲೀಕ್ ಕಾಟ ಶುರುವಾಗಿದೆ. ಒಂದೇ ದಿನ ಈ ಎರಡೂ ಸಿನಿಮಾಗಳು ಲೀಕ್​ನಿಂದ ತೊಂದರೆ ಅನುಭವಿಸಿವೆ.

ರಾಮ್ ಚರಣ್ ಮತ್ತು ನಾನಿ ಸಿನಿಮಾಗಳಿಗೆ ಲೀಕ್ ಸಂಕಷ್ಟ: ಆತಂಕದಲ್ಲಿ ‘ಪೆದ್ದಿ’, ‘ದಿ ಪ್ಯಾರಡೈಸ್’
Nani, Ram Charan
ಮದನ್​ ಕುಮಾರ್​
|

Updated on: Apr 28, 2026 | 4:22 PM

Share

ಚಿತ್ರರಂಗದಲ್ಲಿ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಲೀಕ್ (Leak) ಪಿಡುಗು ಮಾತ್ರ ಚಿತ್ರತಂಡಗಳನ್ನು ಬಿಡುತ್ತಿಲ್ಲ. ಸದ್ಯ ಸಿನಿಪ್ರಿಯರೆಲ್ಲ ಕುತೂಹಲದಿಂದ ಕಾಯುತ್ತಿರುವ ಎರಡು ದೊಡ್ಡ ಸಿನಿಮಾಗಳಾದ ರಾಮ್ ಚರಣ್ ಅಭಿನಯದ ‘ಪೆದ್ದಿ’ (Peddi) ಮತ್ತು ನಟ ನಾನಿ ಅಭಿನಯದ ‘ದಿ ಪ್ಯಾರಡೈಸ್’ (The Paradise) ಚಿತ್ರಗಳ ಪ್ರಮುಖ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದರಿಂದ ಚಿತ್ರತಂಡಗಳಿಗೆ ತಲೆ ನೋವು ಶುರುವಾಗಿದೆ. ಕೆಲವು ದಿನಗಳ ಹಿಂದೆ ‘ಜನ ನಾಯಗನ್’ ಸಿನಿಮಾ ಲೀಕ್ ಆಗಿತ್ತು. ಹೀಗೆ ಒಂದೊಂದೇ ಸಿನಿಮಾಗಳು ಲೀಕ್ ಸಮಸ್ಯೆ ಎದುರಿಸುತ್ತಿವೆ.

ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಯ ಅನುಭವ ಸಿಗುವ ಮೊದಲೇ ಲೀಕ್ ಆದರೆ ಚಿತ್ರದ ಮೇಲಿನ ಕುತೂಹಲ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಈ ಎರಡೂ ಚಿತ್ರತಂಡಗಳು ಚಿತ್ರೀಕರಣದ ಸಮಯದಲ್ಲಿ ಅತ್ಯಂತ ರಹಸ್ಯವನ್ನು ಕಾಪಾಡಿಕೊಂಡಿದ್ದವು. ಆದರೆ, ಕೇವಲ ಒಂದೇ ದಿನದಲ್ಲಿ ಎರಡೂ ಚಿತ್ರಗಳ ಪ್ರಮುಖ ದೃಶ್ಯಗಳು ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಮತ್ತು ಶ್ರುತಿ ಹಾಸನ್ ಅಭಿನಯದ ವಿಶೇಷ ಹಾಡೊಂದನ್ನು ಅದ್ದೂರಿ ಸೆಟ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಆದರೆ, ಆ ಸೆಟ್‌ನಿಂದ ಕೆಲವು ಫೋಟೋಗಳು ಲೀಕ್ ಆಗಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಈ ಚಿತ್ರವು ಜೂನ್ 25ರಂದು ಬಿಡುಗಡೆಯಾಗಲು ಸಜ್ಜಾಗಿದೆ.

ಇನ್ನೊಂದೆಡೆ, ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಚಿತ್ರದ ಹೈ-ವೋಲ್ಟೇಜ್ ಆ್ಯಕ್ಷನ್ ದೃಶ್ಯವೊಂದು ಸೋರಿಕೆಯಾಗಿದೆ. ನಾನಿ ಅವರ ಮಾಸ್ ಅವತಾರವನ್ನು ಒಳಗೊಂಡ ಈ ದೃಶ್ಯ ವೈರಲ್ ಆಗಿರುವುದು ಚಿತ್ರತಂಡಕ್ಕೆ ಆತಂಕ ತಂದಿದೆ. ಈ ಸಿನಿಮಾ ಆಗಸ್ಟ್ 21ರಂದು ತೆರೆಕಾಣಲಿದೆ. ಆದರೆ ಲೀಕ್ ಸಮಸ್ಯೆ ತಪ್ಪಿಸಲು ಚಿತ್ರತಂಡ ಎಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ: ಶಿವಣ್ಣ ಬಳಿಕ ‘ಪೆದ್ದಿ’ ಸೆಟ್ ಸೇರಿದ ಕನ್ನಡದಲ್ಲಿ ಮಿಂಚಿದ ನಟ

ಚಿತ್ರಗಳ ದೃಶ್ಯಗಳು ಹೀಗೆ ಸೋರಿಕೆಯಾಗುವುದು ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಮತ್ತು ಪ್ರೇಕ್ಷಕರ ಅನುಭವದ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಚಿತ್ರತಂಡಗಳು ಶೂಟಿಂಗ್ ಸಮಯದಲ್ಲಿ ಹಾಗೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸೆಕ್ಯೂರಿಟಿಯನ್ನು ಇನ್ನಷ್ಟು ಬಿಗಿಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us