ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಪ್ರತಿಮೆ ಜತೆ ಇರಲಿದೆ ಮುದ್ದಿನ ಶ್ವಾನ

|

Updated on: Oct 22, 2024 | 8:08 PM

ರಾಮ್ ಚರಣ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಮೇಡಂ ಟುಸಾಡ್ಸ್​ ಸಿಂಗಾಪುರ ಶಾಖೆಯಲ್ಲಿ ಅವರ ಮೇಣದ ಪ್ರತಿಮೆ ನಿರ್ಮಾಣ ಆಗಲಿದೆ. ಜೊತೆಗೆ ಮುದ್ದಿನ ಶ್ವಾನ ರೈಮ್ ಕೂಡ ಇರಲಿದೆ. ತಮ್ಮ ನೆಚ್ಚಿನ ನಟನಿಗೆ ಈ ಗೌರವ ಸಿಗುತ್ತಿರುವುದಕ್ಕೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 2025ರಲ್ಲಿ ಈ ಪ್ರತಿಮೆ ಅನಾವರಣ ಆಗಲಿದೆ.

ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಪ್ರತಿಮೆ ಜತೆ ಇರಲಿದೆ ಮುದ್ದಿನ ಶ್ವಾನ
ರಾಮ್ ಚರಣ್
Follow us on

ಸಿನಿಮಾ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಮೇಡಂ ಟುಸಾಡ್ಸ್​’ ಮ್ಯೂಸಿಯಂ ಗೌರವ ಸಲ್ಲಿಸುತ್ತದೆ. ಸೆಲೆಬ್ರಿಟಿಗಳ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಭಾರತೀಯ ಚಿತ್ರರಂಗದ ಅನೇಕ ಸಾಧಕರಿಗೆ ಈ ಗೌರವ ಸಿಕ್ಕಿದೆ. ಈಗ ಟಾಲಿವುಡ್​ ನಟ ರಾಮ್ ಚರಣ್ ಅವರು ಕೂಡ ಈ ಗೌರವವನ್ನು ಪಡೆಯಲಿದ್ದಾರೆ. ಸಿಂಗಾಪುರದಲ್ಲಿ ಇರುವ ಮೇಡಂ ಟುಸಾಡ್ಸ್​ ಮ್ಯೂಸಿಯಂನಲ್ಲಿ ರಾಮ್​ ಚರಣ್ ಅವರ ಮೇಣದ ಪ್ರತಿಮೆ ನಿರ್ಮಾಣ ಆಗಲಿದೆ. ವಿಶೇಷ ಏನೆಂದರೆ, ಅದರ ಜೊತೆ ಮುದ್ದಿನ ಶ್ವಾನದ ಪ್ರತಿಮೆ ಕೂಡ ಇರಲಿದೆ.

ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಮೇಡಂ ಟುಸಾಡ್ಸ್​ ಮ್ಯೂಸಿಯಂನ ಶಾಖೆಗಳು ಇವೆ. ಸಿಂಗಾಪುರದಲ್ಲಿ ಇರುವ ಮೇಡಂ ಟುಸಾಡ್ಸ್​ ಮ್ಯೂಸಿಯಂನಲ್ಲಿ ರಾಮ್ ಚರಣ್ ಅವರ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. 2025ರ ಬೇಸಿಗೆಯಲ್ಲಿ ಈ ಪ್ರತಿಮೆ ಅನಾವರಣ ಆಗುವ ನಿರೀಕ್ಷೆ ಇದೆ. ಆ ಬಳಿಕ ಸಿಂಗಾಪುರಕ್ಕೆ ಪ್ರವಾಸ ತೆರಳುವ ಅಭಿಮಾನಿಗಳು ರಾಮ್ ಚರಣ್ ಅವರ ಪ್ರತಿಮೆಯ ಜೊತೆ ನಿಂತು ಫೋಟೋ ತೆಗೆದುಕೊಳ್ಳಬಹುದು.

ರಾಮ್ ಚರಣ್ ಅವರು ಪ್ರಾಣಿ ಪ್ರಿಯ. ಅವರು ರೈಮ್ ಎಂಬ ಶ್ವಾನವನ್ನು ಸಾಕಿದ್ದಾರೆ. ವಿದೇಶಕ್ಕೆ ಪ್ರಯಾಣ ಮಾಡುವಾಗಲೂ ಕೂಡ ಅವರು ಆ ಶ್ವಾನವನ್ನು ಕರೆದುಕೊಂಡು ಹೋಗುತ್ತಾರೆ. ಅಷ್ಟರಮಟ್ಟಿಗೆ ಅವರಿಗೆ ರೈಮ್ ಜೊತೆ ನಂಟು ಇದೆ. ಹಾಗಾಗಿ ಅವರ ಮೇಣದ ಪ್ರತಿಮೆಯ ಜೊತೆ ರೈಮ್​ನ ಪ್ರತಿಮೆ ಕೂಡ ಇರಲಿದೆ ಎಂಬುದು ವಿಶೇಷ. ಮೇಡಂ ಟುಸಾಡ್ಸ್ ಮ್ಯೂಸಿಯಂನವರು ರೈಮ್​ಗೂ ಸ್ಥಾನ ನೀಡುತ್ತಿರುವುದಕ್ಕೆ ರಾಮ್ ಚರಣ್ ಅವರು ಖುಷಿ ಆಗಿದ್ದಾರೆ.

ಇದನ್ನೂ ಓದಿ: ರಹಾ ಹೆಸರಲ್ಲಿ ಆನೆ ದತ್ತು ಪಡೆದು ಆಲಿಯಾ ಮನೆಗೇ ಕಳುಹಿಸಿದ್ದ ರಾಮ್ ಚರಣ್

‘ಸಿನಿಮಾ ಕ್ಷೇತ್ರದ ಲೆಜೆಂಡ್​ಗಳ ಜೊತೆ ಮೇಡಂ ಟುಸಾಡ್ಸ್​ನಲ್ಲಿ ನಾನು ಕೂಡ ಇರುವುದು ಗೌರವದ ವಿಷಯ. ನಾನು ಚಿಕ್ಕವನಾಗಿದ್ದಾಗ ಆ ಮ್ಯೂಸಿಯಂಗೆ ತೆರಳಿ ಗಣ್ಯರ ಪ್ರತಿಮೆ ಜೊತೆ ಫೋಟೋ ತೆಗೆದುಕೊಳ್ಳುತ್ತಿದ್ದೆ. ಒಂದು ದಿನ ನನ್ನ ಪ್ರತಿಮೆ ಕೂಡ ಇಲ್ಲಿ ನಿಲ್ಲುತ್ತದೆ ಅಂತ ನಾನು ಎಂದಿಗೂ ಊಹಿಸಿರಲಿಲ್ಲ. ನನ್ನ ಕೆಲಸವನ್ನು ಗುರುತಿಸಿದ್ದಕ್ಕಾಗಿ ಮೇಡಂ ಟುಸಾಡ್ಸ್​ ಮ್ಯೂಸಿಯಂಗೆ ಧನ್ಯವಾದಗಳು’ ಎಂದು ರಾಮ್ ಚರಣ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.