ಬ್ಲಾಕ್ ಬಸ್ಟರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಸ್ಟಾರ್ ನಟ: ಕಾರಣ?
Chhaava movie: ಭಾರಿ ಬಜೆಟ್ನ ಸಿನಿಮಾನಲ್ಲಿ ನಟಿಸಲು ಅವಕಾಶ ಸಿಕ್ಕರೆ ಸಾಕು ಎಂದು ಹಲವು ನಟರು ಕಾಯುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಸ್ಟಾರ್ ನಟ, ಸಿನಿಮಾ ದೊಡ್ಡ ಹಿಟ್ ಆಗುತ್ತದೆ ಎಂದು ಗೊತ್ತಿದ್ದರೂ ಸಿನಿಮಾದಲ್ಲಿ ತಮಗೆ ಆಫರ್ ಮಾಡಲಾಗಿದ್ದ ಪ್ರಮುಖ ಪಾತ್ರದಲ್ಲಿ ನಟಿಸಲು ಒಲ್ಲೆ ಎಂದರಂತೆ. ಆ ನಟ ಯಾರು? ಪಾತ್ರ ಯಾವುದು?

ಒಂದು ಹಿಟ್ ಸಿನಿಮಾ (Hit Cinema) ಸಿಕ್ಕರೆ ಹತ್ತು ವರ್ಷ ಚಿತ್ರರಂಗದಲ್ಲಿ ಸಮಯ ತಳ್ಳಬಹುದು ಎಂದು ಹಿಂದೊಮ್ಮೆ ಜನಪ್ರಿಯ ನಟರೊಬ್ಬರು ಹೇಳಿದ್ದರು. ಅದು ಬಹುತೇಕ ನಿಜವೂ ಆಗಿದೆ. ಒಂದು ಹಿಟ್ ಸಿನಿಮಾ ಕೊಟ್ಟು ಬಿಟ್ಟರೆ ಮುಂದಿನ ಹತ್ತು ವರ್ಷ ಅದರ ಬಲದಲ್ಲೇ ನಟರ ಜೀವನ ನಡೆದು ಹೋಗುತ್ತಿತ್ತು. ಇದೇ ಕಾರಣಕ್ಕ ನಟರುಗಳು ಯಾವುದೇ ದೊಡ್ಡ ಬಜೆಟ್ನ, ಭಿನ್ನ ಕತೆಯುಳ್ಳ ಸಿನಿಮಾಗಳನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ. ಆದರೆ ಇಲ್ಲೊಬ್ಬ ಸ್ಟಾರ್ ನಟ, ಸಿನಿಮಾ ದೊಡ್ಡ ಹಿಟ್ ಆಗುತ್ತದೆ ಎಂದು ಗೊತ್ತಿದ್ದರೂ ಸಿನಿಮಾದಲ್ಲಿ ತಮಗೆ ಆಫರ್ ಮಾಡಲಾಗಿದ್ದ ಪ್ರಮುಖ ಪಾತ್ರದಲ್ಲಿ ನಟಿಸಲು ಒಲ್ಲೆ ಎಂದರಂತೆ.
ಬಾಲಿವುಡ್‌ನ ಬಹುಮುಖ ಪ್ರತಿಭೆಯ ನಟ ರಣದೀಪ್ ಹೂಡಾ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ವಿಶೇಷ ಗುರುತು ಮೂಡಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ರಣ್ದೀಪ್ ನಟಿಸಿದ್ದಾರೆ. ನಾಯಕನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲೂ ರಣ್ದೀಪ್ ನಟಿಸಿದ್ದಾರೆ. ರಣ್ದೀಪ್, ಬಾಲಿವುಡ್‌ನ ಕೆಲವೇ ಕೆಲವು ಅತ್ಯುತ್ತಮ ನಟರುಗಳಲ್ಲಿ ಒಬ್ಬರು ಸಹ. ಇದೇ ಕಾರಣಕ್ಕೆ ಅವರಿಗೆ ಬಹಳ ಸವಾಲಾದ ಪಾತ್ರಗಳು ಅರಸಿ ಬರುತ್ತವೆ.
2025 ರಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆದ ‘ಛಾವಾ’ ಸಿನಿಮಾನಲ್ಲಿ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸುವ ಆಫರ್ ರಣ್ದೀಪ್ ಹೂಡ ಅವರಿಗೆ ನೀಡಲಾಗಿತ್ತು. ಆದರೆ ಅವರು ಒಲ್ಲೆ ಎಂದರು. ‘ಛಾವಾ’ ಸಿನಿಮಾದ ವಿಲನ್, ಕ್ರೂರ ಮೊಘಲ್ ದೊರೆ ಔರಂಗಜೇಬ್ ಪಾತ್ರಕ್ಕಾಗಿ ಮೊದಲು ರಣದೀಪ್ ಹೂಡಾ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ಈ ಬ್ಲಾಕ್‌ಬಸ್ಟರ್ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್
‘ಛಾವಾ’ ಚಿತ್ರದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರೆ, ಅಕ್ಷಯ್ ಖನ್ನಾ ಔರಂಗಜೇಬ್ ಪಾತ್ರವನ್ನು ನಿರ್ವಹಿಸಿ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಪಾರ ಪ್ರಶಂಸೆ ಗಳಿಸಿದ್ದಾರೆ. ಆದಾಗ್ಯೂ, ಅಕ್ಷಯ್ ಖನ್ನಾ ಅವರಿಗಿಂತ ಮುಂಚಿತವಾಗಿ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ಪವರ್‌ಫುಲ್ ವಿಲನ್ ಪಾತ್ರಕ್ಕಾಗಿ ರಣದೀಪ್ ಹೂಡಾ ಅವರನ್ನು ಸಂಪರ್ಕ ಮಾಡಿದ್ದರು. ಆದರೆ ರಣ್ದೀಪ್ ಹೂಡ, ಔರಂಗಾಜೇಬ್ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಳ್ಳಲಿಲ್ಲ.
ಈ ಬಗ್ಗೆ ಮಾತನಾಡಿದ ರಣದೀಪ್ ಹೂಡಾ, ‘ನನಗೆ ‘ಛಾವಾ’ ಚಿತ್ರದಲ್ಲಿ ಔರಂಗಜೇಬ್ ಪಾತ್ರದ ಆಫರ್ ಬಂದಿದ್ದು ನಿಜ. ಚಿತ್ರದ ಕಥೆ ಮತ್ತು ಆ ಪಾತ್ರ ಎರಡೂ ತುಂಬಾ ಬಲವಾಗಿದ್ದವು. ಆದರೆ ಆ ಸಮಯದಲ್ಲಿ ನಾನು ನನ್ನದೇ ಆದ ಸ್ವಂತ ಸಿನಿಮಾ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರದ ನಿರ್ದೇಶನ ಮತ್ತು ನಟನೆಯಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದೆ, ಸಾವರ್ಕರ್ ಚಿತ್ರಕ್ಕಾಗಿ ನಾನು ತುಂಬಾ ತೂಕ ಇಳಿಸಿಕೊಂಡಿದ್ದೆ ಮತ್ತು ದೈಹಿಕವಾಗಿ ಸಾಕಷ್ಟು ಬದಲಾಗಿದ್ದೆ. ಆ ಒಂದು ಯೋಜನೆಯ ಮೇಲೆ ನಾನು ಎಷ್ಟು ಗಮನ ಹರಿಸಿದ್ದೆ ಎಂದರೆ, ಅದೇ ಸಮಯದಲ್ಲಿ ಮತ್ತೊಂದು ದೊಡ್ಡ ಸಿನಿಮಾಗೆ ಹಾಗೂ ಅಷ್ಟೇ ತೂಕದ ಪಾತ್ರಕ್ಕೆ ನ್ಯಾಯ ಒದಗಿಸುವುದು ನನಗೆ ಸಾಧ್ಯವಿರಲಿಲ್ಲ. ಆ ಕಾರಣದಿಂದಾಗಿಯೇ ನಾನು ‘ಛಾವಾ’ ಚಿತ್ರದ ಆಫರ್ ಅನ್ನು ಅತ್ಯಂತ ಗೌರವಪೂರ್ವಕವಾಗಿ ನಿರಾಕರಿಸಬೇಕಾಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರದಲ್ಲಿ ಔರಂಗಜೇಬ್ ಪಾತ್ರವನ್ನು ನಿರ್ವಹಿಸಿದ ಅಕ್ಷಯ್ ಖನ್ನಾ ಅವರ ನಟನೆಯನ್ನು ರಣದೀಪ್ ಮುಕ್ತಕಂಠದಿಂದ ಶ್ಲಾಘಿಸಿದ್ದು, ‘ಅಕ್ಷಯ್ ಖನ್ನಾ ಅವರು ಆ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಅವರು ಪರದೆಯ ಮೇಲೆ ಕಾಣಿಸಿಕೊಂಡ ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಕೆಲವೊಮ್ಮೆ ಕೆಲವು ಪಾತ್ರಗಳು ನಿರ್ದಿಷ್ಟ ನಟರಿಗಾಗಿಯೇ ಬರೆಯಲ್ಪಟ್ಟಿರುತ್ತವೆ ಅನಿಸುತ್ತದೆ’ ಎಂದಿದ್ದಾರೆ. ‘ಛಾವಾ’ ಸಿನಿಮಾವು 1000 ಕೋಟಿಗೂ ಹೆಚ್ಚು ಮೊತ್ತದ ಗಳಿಕೆ ಮಾಡಿದೆ. ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





