ಬೆಳ್ಳಿ ಪರದೆಯಲ್ಲಿ ಉತ್ತುಂಗದಲ್ಲಿರುವಾಗಲೇ ಕಿರುತೆರೆಗೆ ಕಾಲಿಟ್ಟ ನಟ ರಣವೀರ್ ಸಿಂಗ್
ಕಲರ್ಸ್ನಲ್ಲಿ ಪ್ರಸಾರವಾಗುವ ‘ದಿ ಬಿಗ್ ಪಿಕ್ಚರ್ಸ್’ ಕ್ವಿಜ್ ಶೋಅನ್ನು ರಣವೀರ್ ಸಿಂಗ್ ನಡೆಸಿಕೊಡಲಿದ್ದಾರೆ. ಈ ಶೋ ವೂಟ್ ಹಾಗೂ ಜಿಯೋ ಟಿವಿಯಲ್ಲೂ ಪ್ರಸಾರವಾಗಲಿದೆ.

ಬೆಳ್ಳಿ ಪರದೆಯಲ್ಲಿ ಉತ್ತುಂಗಕ್ಕೆ ತೆರಳಿದ ನಟ-ನಟಿಯರಿಗೆ ಕಿರುತೆರೆ ಶೋ ನಡೆಸಿಕೊಡೋಕೆ ಬೇಡಿಕೆ ಬರುತ್ತದೆ. ಕಿಚ್ಚ ಸುದೀಪ್, ಪುನೀತ್ ರಾಜ್ಕುಮಾರ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿ ಸಾಕಷ್ಟು ನಟರು ಈಗಾಗಲೇ ಕಿರುತೆರೆಗೆ ಕಾಲಿಟ್ಟಿದ್ದಾರೆ. ಈಗ ನಟ ರಣವೀರ್ ಸಿಂಗ್ ಸರದಿ. ಚಿತ್ರರಂಗದಲ್ಲಿ ರಣವೀರ್ ಬಹುಬೇಡಿಕೆಯ ನಟ. ಅವರ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಹೀಗಿರುವಾಗಲೇ ಕಿರುತೆರೆಗೆ ಕಾಲಿಡುತ್ತಿದ್ದಾರೆ.
ಕಲರ್ಸ್ನಲ್ಲಿ ಪ್ರಸಾರವಾಗುವ ‘ದಿ ಬಿಗ್ ಪಿಕ್ಚರ್ಸ್’ ಕ್ವಿಜ್ ಶೋಅನ್ನು ರಣವೀರ್ ಸಿಂಗ್ ನಡೆಸಿಕೊಡಲಿದ್ದಾರೆ. ಈ ಶೋ ವೂಟ್ ಹಾಗೂ ಜಿಯೋ ಟಿವಿಯಲ್ಲೂ ಪ್ರಸಾರವಾಗಲಿದೆ. ರಣವೀರ್ ಸಿಂಗ್ ಈ ಶೋನ ನಿರೂಪಣೆ ಮಾಡಲಿದ್ದಾರೆ. ಈ ಕ್ವಿಜ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಬುದ್ಧಿಮಟ್ಟ ಮತ್ತು ವಿಶ್ಯುವಲ್ ಮೆಮೋರಿಯನ್ನು ಪರೀಕ್ಷೆ ಮಾಡಲಾಗುತ್ತದೆ.
ಈ ಬಗ್ಗೆ ರಣವೀರ್ ಸಿಂಗ್ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ‘ಭಾರತೀಯ ಚಿತ್ರರಂಗ ನನಗೆ ಸಾಕಷ್ಟು ಅವಕಾಶ ನೀಡಿದೆ. ನನ್ನ ನಟನೆಯನ್ನು ತೋರಿಸೋಕೆ ನನಗೆ ಸಾಧ್ಯವಾಗಿದೆ. ಭಾರತಿಯರಿಂದ ನನಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ಈಗ ನಾನು ಕಲರ್ಸ್ನ ದಿ ಬಿಗ್ ಪಿಕ್ಚರ್ಸ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದೇನೆ’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲಿ ಈ ಶೋನ ಶೂಟಿಂಗ್ ಆರಂಭಗೊಳ್ಳಲಿದೆ. ಆಗಸ್ಟ್ ವೇಳೆಗೆ ಇದು ಪ್ರಸಾರವಾಗುವ ನಿರೀಕ್ಷೆ ಇದೆ.
ರಣವೀರ್ ಸಿಂಗ್ ನಟನೆಯ ‘83’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಕಬೀರ್ ಖಾನ್ ನಿರ್ದೇಶನದ ಈ ಸಿನಿಮಾ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥೆಯನ್ನು ಹೇಳಲಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಈ ಮೊದಲು ರಿಲೀಸ್ ಆದ ಪೋಸ್ಟರ್ಗಳನ್ನು ನೋಡಿ ಅಭಿಮಾನಿಗಳು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಪಿಲ್ ದೇವ್ ಪಾತ್ರಕ್ಕೆ ರಣವೀರ್ ಸಿಂಗ್ ಲುಕ್ ಸರಿಯಾಗಿ ಹೊಂದುತ್ತಿದೆ. ಇದಲ್ಲದೆ, ‘ಸೂರ್ಯವಂಶಿ’ ಸಿನಿಮಾದಲ್ಲಿ ರಣವೀರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸರ್ಕಸ್’ ಹಾಗೂ ‘ತಖ್ತ್’ ಸಿನಿಮಾಗಳಲ್ಲೂ ರಣವೀರ್ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ:
ಉದ್ದನೆಯ ಕೂದಲು, ವಿಚಿತ್ರ ಬಟ್ಟೆ, ಅರ್ಧ ಕೆಜಿ ಚಿನ್ನ; ಟ್ರೋಲ್ ಆದ ರಣವೀರ್ ಸಿಂಗ್ ಹೊಸ ಅವತಾರ
ಸಾರ್ವಜನಿಕವಾಗಿ ಅಭಿಮಾನಿಗಳಿಗೆ ಕಾಣಿಸಿಕೊಂಡ ರಣವೀರ್ ಸಿಂಗ್; ಇಲ್ಲೊಂದು ಅಚ್ಚರಿಯ ವಿಚಾರ ಗಮನಿಸಿದ್ರಾ?