22ರ ಪ್ರಾಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಿರುತೆರೆ ನಟನ ಬಂಧನ
ಕಿರುತೆರೆ ನಟ ಪರ್ಲ್ ವಿ. ಪುರಿ ಪ್ರಕರಣ ಬಗೆಹರಿಯುವುದಕ್ಕೂ ಮುನ್ನವೇ ಮತ್ತೋರ್ವ ನಟ ಪ್ರಾಚೀನ್ ಚೌಹಾಣ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಇದು ಅವರ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

‘ಕಸೌಟಿ ಜಿಂದಗಿ ಕೆ’ ಸೀರಿಯಲ್ ಮೂಲಕ ಸಖತ್ ಜನಪ್ರಿಯತೆ ಪಡೆದುಕೊಂಡಿದ್ದ ನಟ ಪ್ರಾಚೀನ್ ಚೌಹಾಣ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. 22ರ ಪ್ರಾಯದ ಯುವತಿಗೆ ಪ್ರಾಚೀನ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ಯುವತಿ ನೀಡಿದ ದೂರು ಆಧರಿಸಿ, ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಿಂದಿ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಪ್ರಾಚೀನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಈಗ ಅವರ ಮೇಲೆ ಇಂಥ ಗಂಭೀರ ಆರೋಪ ಹೊರಿಸಲಾಗಿದ್ದು, ಫ್ಯಾನ್ಸ್ಗೆ ಬೇಸರ ಆಗಿದೆ.
ಸ್ಟಾರ್ ಪ್ಲಸ್ ವಾಹಿನಿಯ ಜನಪ್ರಿಯ ಧಾರಾವಾಹಿ ‘ಕಸೌಟಿ ಜಿಂದಗಿ ಕೆ’ ಮೂಲಕ ಪ್ರಾಚೀನ್ ಅವರು ನಟನೆಗೆ ಕಾಲಿಟ್ಟರು. ಬಳಿಕ ಅನೇಕ ಅವಕಾಶಗಳು ಅವರನ್ನು ಅರಸಿಕೊಂಡು ಬಂದವು. 15ಕ್ಕೂ ಅಧಿಕ ಸೀರಿಯಲ್ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೆಬ್ ಸಿರೀಸ್ ಮೂಲಕವೂ ಅವರು ಫೇಮಸ್ ಆಗಿದ್ದಾರೆ. ಈ ನಡುವೆ ಅವರು ಲೈಂಗಿಕ ಕಿರುಕುಳದ ಆರೋಪದಲ್ಲಿ ಬಂಧನಕ್ಕೆ ಒಳಗಾದ ಸುದ್ದಿಯಿಂದ ಕಿರುತೆರೆ ಲೋಕಕ್ಕೆ ಕಳಂಕ ಅಂಟಿದಂತಾಗಿದೆ.
ತನ್ನನ್ನು ಪ್ರಾಚೀನ್ ಅವರು ಅಸಭ್ಯವಾಗಿ ಮುಟ್ಟಿದ್ದಾರೆ ಎಂದು ಸಂತ್ರಸ್ತ ಯುವತಿಯು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಪ್ರಾಚೀನ್ರ ಮನೆಗೆ ತೆರಳಿದ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ. ಹಿಂದಿ ಕಿರುತೆರೆಯಿಂದ ಇಂಥ ಸುದ್ದಿಗಳು ಪದೇಪದೆ ಕೇಳಿಬರುತ್ತಿರುವುದು ವಿಪರ್ಯಾಸ.
ಕೆಲವೇ ದಿನಗಳ ಹಿಂದೆ ಜನಪ್ರಿಯ ನಟ ಪರ್ಲ್ ವಿ. ಪುರಿ ಅವರನ್ನು ಪೊಲೀಸರು ಬಂಧಿಸಿದ್ದರು. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ಸೀರಿಯಲ್ನಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ಬಾಲಕಿಯನ್ನು ಅವರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ನಂತರ ಬಾಲಕಿ ಕುಟುಂಬದವರೇ ಆ ಆರೋಪವನ್ನು ತಳ್ಳಿಹಾಕಿದರು. ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದ ಪರ್ಲ್ ವಿ. ಪುರಿ ಅವರು ಸತ್ಯಕ್ಕೆ ಜಯ ಸಿಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.
ಕಿರುತೆರೆ ನಟ ಪರ್ಲ್ ವಿ. ಪುರಿ ಪ್ರಕರಣ ಬಗೆಹರಿಯುವುದಕ್ಕೂ ಮುನ್ನವೇ ಪ್ರಾಚೀನ್ ಚೌಹಾಣ್ ಮೇಲೆ ಆರೋಪ ಕೇಳಿಬಂದಿದೆ. ಇದು ಅವರ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನೂ ಓದಿ:
ರೇಪ್ ಆರೋಪ, ತಂದೆ ಸಾವು, ತಾಯಿಗೆ ಕ್ಯಾನ್ಸರ್, ಜೈಲು ವಾಸ; ಒಂದೇ ತಿಂಗಳಲ್ಲಿ ನಟನ ಬದುಕು ಛಿದ್ರ
Pearl V Puri: ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಕಿರುತೆರೆ ನಟ ಪರ್ಲ್ ವಿ. ಪುರಿಗೆ ಸಿಕ್ತು ರಿಲೀಫ್