
ರಾಹುಲ್ ಸಂಕೃತ್ಯನ್ ನಿರ್ದೇಶನದ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಸಿನಿಮಾ ನಿನ್ನೆ (ಅಕ್ಟೋಬರ್ 16) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಆದರೂ ಸಹ ಚಿತ್ರತಂಡವು ನಿನ್ನೆ ಹೈದರಾಬಾದ್ನಲ್ಲಿ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಈ ವೇಳೆ ರಶ್ಮಿಕಾ ಅವರು ತಮ್ಮ ಪತಿ ವಿಜಯ್ ಅವರ ಅಭಿನಯವನ್ನು ಬಹುವಾಗಿ ಕೊಂಡಾಡಿ, ವಿಜಯ್ ಅವರ ನಟನೆಯನ್ನು ರಾಷ್ಟ್ರಪ್ರಶಸ್ತಿ ವಿಜೇತ ಅಲ್ಲು ಅರ್ಜುನ್ ಅವರ ನಟನೆಗೆ ಹೋಲಿಕೆ ಮಾಡಿದರು. ರಶ್ಮಿಕಾರ ಈ ಹೇಳಿಕೆ ಇದೀಗ ಚರ್ಚೆಯ ವಿಷಯವಾಗಿದೆ.
‘ರಣಬಾಲಿ’ ಸಿನಿಮಾನಲ್ಲಿ ವಿಜಯ್ ಅವರ ನಟನೆಯ ಕುರಿತು ಮಾತನಾಡಿದ ರಶ್ಮಿಕಾ, ‘ವಿಜಯ್ ದೇವರಕೊಂಡ, ಸಂಪೂರ್ಣ ‘ರಣಬಾಲಿ’ ಪಾತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡುಬಿಟ್ಟಿದ್ದರು. ಅದೆಷ್ಟೆ ಮಟ್ಟಿಗೆ ಎಂದರೆ ಸಿನಿಮಾದ ಹೊರಗೆ ಸಹ ಒಮ್ಮೊಮ್ಮೆ ನನಗೆ ‘ರಣಬಾಲಿ’ಯೇ ಕಾಣುತ್ತಿದ್ದರು. ವಿಜಯ್ ಎಲ್ಲಿಹೋದರು? ಎಂದು ಅನಿಸುತ್ತಿತ್ತು. ‘ವಿಜಯ್ ತಮ್ಮ ಪಾತ್ರದಲ್ಲಿ ಎಷ್ಟು ಆಳವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಮಗೆ ಸ್ವಲ್ಪ ಸಮಯ ಹಿಡಿಯಿತು. ಕೆಲವು ಪಾತ್ರಗಳನ್ನು ಮಾಡಿದಾಗ, ಅವು ನಿಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತವೆ. ನಿಮ್ಮ ಪ್ರತಿಯೊಂದು ಕಣವೂ ಆ ಭಾವನೆಗಳನ್ನು, ಆ ನಟನೆಯನ್ನು ಅನುಭವಿಸುತ್ತದೆ. ಆದ್ದರಿಂದ, ನಾನು ಇದೆಲ್ಲವನ್ನೂ ಗಮನಿಸಿದೆ. ಇದು ನನಗೆ ಅತ್ಯಂತ ಹೊಸ ಅನುಭವವಾಗಿತ್ತು.” ಎಂದರು.
‘ರಣಬಾಲಿ ಪಾತ್ರದಲ್ಲಿ ವಿಜಯ್ ಅವರ ಪಾತ್ರ ನನಗೆ ಅಲ್ಲು ಅರ್ಜುನ್ ಮತ್ತು ‘ಪುಷ್ಪ 2’ ಚಿತ್ರದ ನೆನಪು ತಂದಿತು ಎಂದ ರಶ್ಮಿಕಾ, ‘ಖಂಡಿತವಾಗಿಯೂ, ‘ಪುಷ್ಪ 2’ ಚಿತ್ರದಲ್ಲಿ ಬನ್ನಿ ಸರ್ ಆ ರೀತಿ ನಟಿಸುತ್ತಿದ್ದಾಗಲೂ ನನಗೆ ಇಂತಹದ್ದೇ ಅನುಭವವಾಗಿತ್ತು. ಬನ್ನಿ ಸರ್, ಬನ್ನಿ ಸರ್ ಆಗಿಯೂ ಮತ್ತು ಪುಷ್ಪ ಆಗಿಯೂ ಸಂಪೂರ್ಣವಾಗಿ ಇಬ್ಬರು ಬೇರೆ ಬೇರೆ ವ್ಯಕ್ತಿಗಳಂತೆ ಕಾಣುತ್ತಿದ್ದರು, ವಿಜಯ್ ಜೊತೆ ‘ರಣಬಾಲಿ’ಯಲ್ಲಿ ನಟಿಸುವಾಗಲೂ ನನಗೆ ಹಾಗೆಯೇ ಅನಿಸುತ್ತಿತ್ತು. ನಾನು ವಿಜಯ್ ಅವರನ್ನು ವೈಯಕ್ತಿಕವಾಗಿ ಮನೆಯಲ್ಲಿ ನೋಡಿದ್ದೇನೆ. ಆದರೆ ಸೆಟ್ನಲ್ಲಿ ಅವರನ್ನು ನೋಡಿದಾಗ ಅದು ಸಂಪೂರ್ಣವಾಗಿ ಭಿನ್ನವಾಗಿತ್ತು. ನಟನೆ ಮಾಡುವ ಕಲಾವಿದರಿಗೆ ಆ ಭಾವನೆ ಏನೆಂಬುದು ಚೆನ್ನಾಗಿ ತಿಳಿದಿರುತ್ತದೆ. ಆದರೆ ನಿಜಕ್ಕೂ ಹೇಳಬೇಕೆಂದರೆ, ನಾವು ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳನ್ನು ಮಾಡಿದ್ದೇವೆ, ಆದರೆ ಈ ಬಾರಿ ‘ರಣಬಾಳಿ’ ಮತ್ತು ‘ಜಯಮ್ಮ’ ನನ್ನನ್ನು ಬಹಳವಾಗಿ ಕಾಡಿದವು ಎಂದು ನನಗೆನಿಸುತ್ತದೆ” ಎಂದರು ರಶ್ಮಿಕಾ.
ಇದನ್ನೂ ಓದಿ:ವಿಜಯ್ ದೇವರಕೊಂಡ ಅವರನ್ನು ಪವನ್ ಕಲ್ಯಾಣ್ಗೆ ಹೋಲಿಸಿದ ನಿರ್ದೇಶಕ
‘ರಣಬಾಲಿ’ ಸಿನಿಮಾವು ಸ್ವಾತಂತ್ರ್ಯ ಪೂರ್ವದ ಕತೆ ಹೊಂದಿರುವ ಸಿನಿಮಾ ಆಗಿದೆ. ಬ್ರಿಟೀಷರ ವಿರುದ್ಧ ತಿರುಗಿ ಬೀಳುವ ಹಳ್ಳಿಯ ಯುವಕನ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟನೆ ಮಾಡಿದ್ದಾರೆ. ನಾಯಕನ ಪತ್ನಿ ‘ಜಯಮ್ಮ’ನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ, ಕೆಲವರಂತೂ ‘ರಣಬಾಲಿ’ ಸಿನಿಮಾ ವಿಜಯ್ ಅವರ ಈ ವರೆಗಿನ ಕೆಟ್ಟ ಸಿನಿಮಾ ಎಂದೆಲ್ಲ ಹೇಳಿದ್ದೂ ಸಹ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ